ಹುಬ್ಬಳ್ಳಿ: ಬಿಎಂಟಿಸಿ ಮಾದರಿಯಲ್ಲಿ ಬಿಆರ್‌ಟಿಎಸ್ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ ಮುಂದಿನ ದಿನಗಳಲ್ಲಿ ಬೆಳಗಾವಿ ನಗರ ಸಾರಿಗೆಯನ್ನು ಈ ನಿಗಮ ವ್ಯಾಪ್ತಿಗೆ ಅಳವಡಿಸಲಾಗುವುದು ಎಂದು ಬಿಆರ್‌ಟಿಎಸ್ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರ ಸೇವೆ ಪ್ರತ್ಯೇಕ ಮಾಡುವುದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆಯಿಂದ ಅನುದಾನ ಪಡೆಯಬಹುದಾಗಿದೆ. ಇದರಿಂದ ಆರ್ಥಿಕ ನಷ್ಟ ಸರಿದೂಗಿಸಿ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡಲು ನೆರವಾಗುತ್ತದೆ ಎಂದರು.
ಹು-ಧಾ ಮತ್ತು ಬೆಳಗಾವಿ ನಗರ ಹಾಗೂ ಉಪನಗರ ಸಾರಿಗೆ ಸೇವೆಯನ್ನು ಈ ನಿಗಮ ವ್ಯಾಪ್ತಿಗೆ ಅಳವಡಿಸುವುದರಿಂದ ಒಂದು ನಿಗಮಕ್ಕೆ ಅಗತ್ಯ ಸಿಬ್ಬಂದಿ, ವಾಹನಗಳು ಲಭ್ಯವಾಗಲಿದೆ. ನಗರ ಸಾರಿಗೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನೀಡಲು ಸಹಕಾರಿಯಾಗುತ್ತದೆ. ಪ್ರತಿಯೊಂದು ಪ್ರದೇಶಕ್ಕೂ ಬಸ್ ಸೌಲಭ್ಯ ದೊರೆಯಲಿದೆ. ಇದರಿಂದ ವಾಯವ್ಯ ಸಾರಿಗೆ ಸಂಸ್ಥೆ ಮೇಲೆ ನಷ್ಟದ ಭಾರ ಇರುವುದಿಲ್ಲ ಎಂದು ತಿಳಿಸಿದರು.
ಅಕ್ಟೋಬರ್‌ನಿಂದ ಜ. 30ರ ವರೆಗೆ 45 ಲಕ್ಷ ಜನರು ಬಿಆರ್‌ಟಿಎಸ್ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಮುಂದಿನ 7-8 ತಿಂಗಳಲ್ಲಿ ಹೆಚ್ಚುವರಿಯಾಗಿ 100 ಬಸ್‌ಗಳು ಬಿಆರ್‌ಟಿಎಸ್‌ಗೆ ಸೇರ್ಪಡೆಯಾಗಲಿವೆ. ನಿಲ್ದಾಣಗಳಲ್ಲಿ ಕಸದ ಡಬ್ಬಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು. ಅಗತ್ಯ ಸ್ಥಳಗಳಲ್ಲಿ ಇ-ಶೌಚಾಲಯ ನಿರ್ಮಿಸಲಾಗುವುದು. 2 ತಿಂಗಳಲ್ಲಿ ಬಿಆರ್‌ಟಿಎಸ್ ನಿಲ್ದಾಣಗಳಿಗೆ ಫೀಡರ್ ಸೇವೆ ಆರಂಭಿಸಲಾಗುವುದು. ಮಾರ್ಚ್ ಮೊದಲ ವಾರದಲ್ಲಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ವಿದ್ಯಾರ್ಥಿಗಳಿಗೆ ನೀಡುತ್ತಿರುವ 1 ರೂ. ಟಿಕೆಟ್ ದುರ್ಬಳಕೆಯಾಗುತ್ತಿರುವುದು ಬೆಳಕಿಗೆ ಬಂದಿದ್ದು, ಎರಡನೇ ಹಂತದಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ, ಬಿಆರ್‌ಟಿಎಸ್ ಡಿಜಿಎಂ ಶ್ರೀನಾಥ, ಗಣೇಶ ರಾಠೊಡ, ಬಸವರಾಜ ಕೇರಿ, ಮಕ್ಸೂದ್, ಮಂಜುನಾಥ ಇನ್ನಿತರರಿದ್ದರು.