Advertisement

ಹುಬ್ಬಳ್ಳಿ: ಹಾಸ್ಟೆಲ್‌ ಸೌಲಭ್ಯವಿಲ್ಲದೆ 14 ವಿದ್ಯಾರ್ಥಿನಿಯರು ಅತಂತ್ರ‌

06:40 PM Jul 07, 2023 | Team Udayavani |

ಹುಬ್ಬಳ್ಳಿ: ಉಚಿತ ಹಾಸ್ಟೆಲ್‌ ದೊರೆಯುವ ಭರವಸೆ ಮೇಲೆ ಶಾಲೆಗೆ ಪ್ರವೇಶ ಪಡೆದ 14 ಬಡ ವಿದ್ಯಾರ್ಥಿನಿಯರು ಅತಂತ್ರವಾಗಿದ್ದು, ಪ್ರತಿ ತಿಂಗಳು ಹಾಸ್ಟೆಲ್‌ ಶುಲ್ಕ ಪಾವತಿಸಿ  ಕಲಿಸುವ ಶಕ್ತಿಯಿಲ್ಲದೆ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ.

Advertisement

ವಿದ್ಯಾನಗರದ ಮಹಿಳಾ ವಿದ್ಯಾ ಪೀಠದಲ್ಲಿರುವ ಕಸ್ತೂರಬಾ ಆಶ್ರಮದ ಬಾಲಕಿಯರ ವಸತಿ ನಿಲಯದ ಹಾವೇರಿಯ ಜಿಲ್ಲೆಯ ವಿವಿಧ ಭಾಗದ ಪರಿಶಿಷ್ಟ ಪಂಗಡಕ್ಕೆ ಸೇರಿದ 14 ವಿದ್ಯಾರ್ಥಿನಿಯರು ಶಾಲೆಗೆ ಪ್ರವೇಶ ಪಡೆದಿದ್ದಾರೆ. ಶಾಲೆಗೆ ಸೇರುವ ಮುನ್ನ ಉಚಿತವಾಗಿ ಹಾಸ್ಟೆಲ್‌ ಸೌಲಭ್ಯ ದೊರೆಯಲಿದೆ ಎನ್ನುವ ಭರವಸೆ ಹೊಂದಿದ್ದರು. ಆದರೆ ಇದೀಗ ಅವರಿಗೆ ಉಚಿತ ಹಾಸ್ಟೆಲ್‌ ದೊರೆಯದ ಕಾರಣ ಪ್ರತಿ ತಿಂಗಳು ಶುಲ್ಕ ಪಾವತಿಸಿ ಶಾಲೆ ಕಲಿಯಬೇಕು, ಇಲ್ಲದಿದ್ದರೆ ಹಾಸ್ಟೆಲ್‌ನಿಂದ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿವೆ. ಇದೀಗ ಒಂದು ತಿಂಗಳಿನಿಂದ ಉಚಿತ ಹಾಸ್ಟೆಲ್‌ ದೊರೆಯುವ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ದಿಕ್ಕು ತೋಚದಂತಾಗಿದೆ.

ಆಗಿರುವುದು ಏನು: ಈ ಹಾಸ್ಟೆಲ್‌ ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿ ನಡೆಯುತ್ತಿದ್ದು, ನಿರ್ವಹಣೆ ಮಹಿಳಾ
ವಿದ್ಯಾಪೀಠ ಮಾಡುತ್ತಿದೆ. 50 ಸಾಮರ್ಥ್ಯದ ಹಾಸ್ಟೆಲ್‌ನಲ್ಲಿ 36 ಎಸ್ಸಿ, 12 ಎಸ್ಟಿ ಹಾಗೂ 2 ಒಬಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಪ್ರತಿ ವರ್ಷ ಖಾಲಿಯಾಗುವ ಸೀಟುಗಳ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಬಾರಿ
ಎಸ್ಟಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ ಕಾರಣ 14 ವಿದ್ಯಾರ್ಥಿಗಳು ಹೆಚ್ಚುವರಿಯಾಗಿದ್ದಾರೆ.
ಎಸ್ಟಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹಾಸ್ಟೆಲ್‌ ಖಾಲಿ ಮಾಡದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ಒಂದು ತಿಂಗಳಿನಿಂದ ಉಚಿತ ಸೌಲಭ್ಯ ದೊರೆಯುವ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

ನಮಗೆ ಮೊದಲು ಹೇಳಲಿಲ್ಲ: ಹೆಚ್ಚುವರಿ ಯಾಗಿರುವ ವಿದ್ಯಾರ್ಥಿಗಳು- ಪಾಲಕರು ಮಹಿಳಾ ವಿದ್ಯಾಪೀಠದ ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದು, ಶಾಲೆಗೆ ಪ್ರವೇಶಾತಿ ನೀಡುವ ಸಂದರ್ಭದಲ್ಲಿ ಉಚಿತ ಸೀಟು ಆಗದಿದ್ದರೆ ತಿಂಗಳಿಗೆ ಇಂತಿಷ್ಟು ಶುಲ್ಕ ಕಟ್ಟಬೇಕು ಎಂದು ಹೇಳಿದ್ದರೆ ಮಕ್ಕಳನ್ನು ಸೇರಿಸುತ್ತಿರಲಿಲ್ಲ. ಒಂದು ತಿಂಗಳು ಇಟ್ಟುಕೊಂಡು ಇದೀಗ ಆಗುವುದಿಲ್ಲ.
ಇಲ್ಲಿಯೇ ಉಳಿಯಬೇಕಾದರೆ ತಿಂಗಳಿಗೆ 2500 ಹಾಸ್ಟೆಲ್‌ ಶುಲ್ಕ ಪಾವತಿ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ವರ್ಷ ಬರುವ ಪಾಲಕರಿಗೆ ಹಾಸ್ಟೆಲ್‌ ಈ ಬಗ್ಗೆ ವಿವರಿಸಲಾಗುತ್ತಿದೆ. ಉಚಿತ ಆಗದವರು ಶುಲ್ಕ ಪಾವತಿ ಮಾಡಿ ಉಳಿಯುತ್ತಾರೆ. ಈಗಲಾದರೂ ಅವರನ್ನು ಹೊರಹಾಕಿಲ್ಲ. ಪರಿಸ್ಥಿತಿಯನ್ನು ಅವರ  ಪಾಲಕರಿಗೆ ತಿಳಿಸಿದ್ದೇವೆ ಎನ್ನುತ್ತಾರೆ ವಸತಿ
ನಿಯಲದ ಮೇಲ್ವಿಚಾರಕಿ.

Advertisement

ಬದಲಾಯಿಸಿದರೆ ಅವಕಾಶ
36 ಎಸ್ಸಿ ವಿದ್ಯಾರ್ಥಿಗಳಲ್ಲಿ ಇನ್ನೂ 8 ಸೀಟುಗಳು ಖಾಲಿಯಿವೆ. ಇದೀಗ ಹಾಸ್ಟೆಲ್‌ ಗಳಿಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಮನಸ್ಸು ಮಾಡಿದರೆ ಎಸ್ಸಿ ವಿದ್ಯಾರ್ಥಿಗಳ ಸೀಟುಗಳು ಹೆಚ್ಚುವರಿಯಾಗಿರುವ ಎಸ್ಟಿ ವಿದ್ಯಾರ್ಥಿಗಳಿಗೆ ಬದಲಾಯಿಸಿ ನೀಡಿದರೆ ಅತಂತ್ರವಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನೂ ಉಳಿಯುವ 6 ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಹೆಚ್ಚುವರಿ ಎಂದು ಅನುಮತಿ ನೀಡಿದರೆ ಅವರಿಗೂ
ಕೂಡ ಅವಕಾಶ ನೀಡಿದಂತಾಗಲಿದೆ. ಆದರೆ ಕಳೆದ ವರ್ಷ ಎಂಟು ವಿದ್ಯಾರ್ಥಿಗಳು ಹೆಚ್ಚುವರಿಯಾಗಿದ್ದರು. ಇದಕ್ಕೆ ಇಲಾಖೆ ಅನುಮತಿ ನೀಡಿದರೂ ಅನುದಾನ ನೀಡಲಿಲ್ಲ ಎನ್ನುವುದು ಆಡಳಿತ ಮಂಡಳಿ ವಾದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next