Advertisement

ಇದ್ದೂ ಇಲ್ಲದಂತಾದ ಪಾದಚಾರಿ ಸುರಂಗ ಮಾರ್ಗ! ಜನ ಬಳಕೆಗೆ ದೊರೆಯದ ಸೌಕರ್ಯ

11:44 AM Nov 13, 2020 | sudhir |

ಹುಬ್ಬಳ್ಳಿ: ಭೈರಿದೇವರಕೊಪ್ಪದ ಶಾಂತಿನಿಕೇತನ ಕಾಲೋನಿ ಬಳಿ ಬಿಆರ್‌ಟಿಎಸ್‌ ಕಂಪನಿಯಿಂದ ನಿರ್ಮಿಸಿರುವ ಪದಚಾರಿ ಸುರಂಗ ಮಾರ್ಗದಲ್ಲಿ ಪುನಃ ನೀರು ತುಂಬಿಕೊಂಡಿದ್ದು, ನಿರ್ವಹಣೆ ಕೊರತೆಯಿಂದ ಜನರು ಓಡಾದ ಪರಿಸ್ಥಿತಿಗೆ ತಲುಪಿದೆ.
ಶಾಂತಿನಿಕೇತನ ಕಾಲೋನಿ ಸೇರಿದಂತೆ ಈ ಭಾಗದಲ್ಲಿ ಶಾಲಾ-ಕಾಲೇಜು ಇರುವ ಕಾರಣಕ್ಕೆ ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ತಲುಪಲು ಸುರಂಗ ಮಾರ್ಗ ನಿರ್ಮಿಸಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಸುರಂಗ ಮಾರ್ಗದ ಇಂದಿನ
ದುಸ್ಥಿತಿ ನೋಡಿದರೆ ಬಿಆರ್‌ಟಿಎಸ್‌ ಅಧಿಕಾರಿಗಳ ಬಗ್ಗೆ ಅಸಮಾಧಾನ ಮೂಡದೇ ಇರದು. ಇಡೀ ಸುರಂಗ ಮಾರ್ಗದಲ್ಲಿ ಸುಮಾರು 2-3 ಅಡಿ ನೀರು ಸಂಗ್ರಹವಾಗಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಯೋಜನೆ ಆರಂಭವಾದ ನಂತರದಲ್ಲಿ ಸುರಂಗ ಮಾರ್ಗವನ್ನು ಜನಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ.

Advertisement

ಸ್ಥಳೀಯಯರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಳಕೆಗೆ ನೀಡಲಾಯಿತು. ಆದರೆ ಇಂದಿಗೂ ಸುರಂಗ ಮಾರ್ಗ ಸುಣ್ಣ ಬಣ್ಣ ಕಂಡಿಲ್ಲ. ನಿರ್ವಹಣೆ ಕೊರತೆಯಿಂದ ಜನರು ಸುರಂಗ ಮಾರ್ಗ ಬಳಸುವುದನ್ನು ಕಡಿಮೆ ಮಾಡಿದ್ದಾರೆ.
ಜನಬಳಕೆಯಿಲ್ಲದ ಪರಿಣಾಮ ಪಾಳುಬಿದ್ದ ಕಟ್ಟಡದಂತಾಗಿದೆ. ಈ ಅವ್ಯವಸ್ಥೆ ವಿರುದ್ಧ ಇತ್ತೀಚೆಗೆ ಆಮ್‌ ಆದ್ಮಿ ಪಕ್ಷ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಿಆರ್‌ಟಿಎಸ್‌ ಅಧಿಕಾರಿಗಳು ಸ್ವತ್ಛಗೊಳಿಸಿ ಸಿಂಗಾರಗೊಳಿಸಿದ್ದರು. ಆದರೆ ಇದೀಗ
ಪುನಃ ಹಿಂದಿನ ಪರಿಸ್ಥಿತಿಗೆ ತಿರುಗಿದೆ.

ಇದನ್ನೂ ಓದಿ:ಉದ್ಯಾನವನದ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ! ಪಾಲಿಕೆಯಿಂದ ಕಾಮಗಾರಿಗೆ ತಡೆ

ನಿರ್ವಹಣೆ ಕೊರತೆ: ವಿದ್ಯುತ್‌ ಸಂಪರ್ಕವಿಲ್ಲ. ಹಾಕಿದ್ದ ವಿದ್ಯುತ್‌ ದೀಪಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ. ವಿದ್ಯುತ್‌ ಕೇಬಲ್‌ಗ‌ಳು ತುಂಡಾಗಿವೆ. ಸ್ವಿಚ್‌ ಬೋರ್ಡ್‌ಗಳು ಕಾಣುವುದೇ ಇಲ್ಲ. ಕಾಲಕಾಲಕ್ಕೆ ಸ್ವತ್ಛತೆ, ನಿರ್ವಹಣೆಗೆ ಮುತುವರ್ಜಿ ವಹಿಸಿದ್ದರೆ ಸುರಂಗ ಮಾರ್ಗ ಈ ಸ್ಥಿತಿಗೆ ತಲುಪುತ್ತಿರಲಿಲ್ಲ.

ಸಾರ್ವಜನಿಕರ ಆಗ್ರಹ: ಬೆಳಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಮಿಶ್ರಪಥ ಹಾಗೂ ಬಿಆರ್‌ ಟಿಎಸ್‌ ಕಾರಿಡಾರ್‌ನಲ್ಲಿ ಬಸ್‌ಗಳ ಸಂಚಾರ ಹೆಚ್ಚಾಗಿರುವುದರಿಂದ ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಿ ಬಸ್‌ ನಿಲ್ದಾಣಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಪ್ರಯಾಣಿಕರು
ಅಪಘಾತಕ್ಕೀಡಾಗಿರುವ ಘಟನೆಗಳು ನಡೆಯುತ್ತಿವೆ.  ಇನ್ನೂ ಮಿಶ್ರಪಥದಲ್ಲಿ ಹಾಕಿರುವ ರೋಡ್‌ ಬ್ರೇಕ್‌ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯವಸ್ಥೆ ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಅನೈತಿಕ ಚಟುವಟಿಕೆಗಳ ತಾಣ
ಜನ ಓಡಾಟ ಹಾಗೂ ನಿರ್ವಹಣೆ ಇಲ್ಲದ ಪರಿಣಾಮ ಸುರಂಗ ಮಾರ್ಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಗಲಿನಲ್ಲಿ ಪುಂಡ ಪೋಕರಿಗಳ ಸಿಗರೇಟ್‌ ಜೋನ್‌ ಆಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಮದ್ಯ ಸೇವನೆಯ ತಾಣವಾಗುತ್ತಿದೆ. ಬಿಸಿಲಿನ ತಾಪಕ್ಕೆ ದನ ಕರುಗಳಿಗೆ ಹಾಗೂ ಅಕ್ಕಪಕ್ಕದವರ ದ್ವಿಚಕ್ರ ವಾಹನಗಳಿಗೆ ಆಶ್ರಯ ಸ್ಥಳವಾಗಿದೆ. ಇಲ್ಲೊಂದು ಸುರಂಗ ಮಾರ್ಗ ಇದೆ ಎಂಬುದೇ ಬಹುತೇಕರಿಗೆ ಗೊತ್ತಾಗುವುದಿಲ.

ನೀರಿನ ಚಿಲುಮೆ
ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಸುರಂಗ ಮಾರ್ಗಕ್ಕೆ ನೀರು ಹರಿದು ಬರುತ್ತದೆ ಎನ್ನುವುದು ಬಿಆರ್‌ಟಿಎಸ್‌ ಅಧಿಕಾರಿಗಳ ಸಿದ್ಧ ಉತ್ತರವಾಗಿತ್ತು. ಆದರೆ ಮಳೆಗಾಲ ಮುಗಿದು ತಿಂಗಳಾಗಿದ್ದು, ಸುರಂಗ ಮಾರ್ಗದಲ್ಲಿ ನೀರು ಸಂಗ್ರಹವಾಗಿದೆ. ಮಾರ್ಗದಲ್ಲಿ ಎರಡು ಮೂರು ಕಡೆ ನೀರಿನ ಚಿಲುಮೆಯಂತಿದ್ದು, ಎಷ್ಟೇ ನೀರು ತೆಗೆದರು ಒಂದೆರಡು ದಿನದಲ್ಲೇ ನೀರು ಸಂಗ್ರಹವಾಗುತ್ತಿದೆ. ನೀರು ಎಲ್ಲಿಂದ ಹರಿದು ಬರುತ್ತಿದೆ ಎನ್ನುವುದು ಕೂಡ ಅಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ. ಚಿಮ್ಮುತ್ತಿರುವ ನೀರು ನಿಲ್ಲದ ಹೊರತು ಓಡಾಡಲು ಅಸಾಧ್ಯವಾಗಿದೆ. ಅಧಿಕಾರಿಗಳ ನಿಷ್ಕಾಳಜಿ ಪರಿಣಾಮ ವ್ಯವಸ್ಥೆಯಿದ್ದೂ ಬಳಸದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next