Advertisement

Hubballi; ಕೋಟಿ ಕೋಟಿ ಸುರಿದರೂ ಮುಗಿಯದ ರಸ್ತೆ

06:08 PM Nov 27, 2023 | Team Udayavani |

ಹುಬ್ಬಳ್ಳಿ: ಇಂಡಿಪಂಪ್‌-ಉಣಕಲ್ಲ ಸಿದ್ದಪ್ಪಜ್ಜನ ಮಠದವರೆಗಿನ ಕಾಂಕ್ರೀಟ್‌ ರಸ್ತೆಗೆ ತೊಡಕಾಗಿದ್ದ ಭೂಸ್ವಾಧೀನಕ್ಕೆ ಅನುಮತಿ ನೀಡಿದ್ದರೂ ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ಸುರಿದು ನಿರ್ಮಿಸಿರುವ ರಸ್ತೆ ಕೇವಲ ಬೈಕ್‌, ಆಟೋ ರಿಕ್ಷಾ ಸಂಚಾರಕ್ಕೆ ಸೀಮಿತವಾಗಿದ್ದು, ಮಹಾನಗರದಲ್ಲಿನ ವೈಫಲ್ಯಗಳ ಕೆಲ ಯೋಜನೆಗಳ ಪೈಕಿ ಈ ರಸ್ತೆಯೂ ಒಂದಾಗಿದೆ.

Advertisement

ನಗರದ ಹೃದಯಭಾಗ ಚನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಪ್ರಮುಖ ರಸ್ತೆಗಳಿಗೆ ಒಂದಿಷ್ಟು ಪರ್ಯಾಯ ರಸ್ತೆಗಳ ಅಭಿವೃದ್ಧಿಗಳನ್ನು ಅಭಿವೃದ್ಧಿಗೊಳಿಸುವುದು ಮೂಲ ಉದ್ದೇಶ. ಇದಕ್ಕಾಗಿ 2017ರಲ್ಲಿ ಇಂಡಿಪಂಪ್‌-ಉಣಕಲ್ಲವರೆಗೆ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌) ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು.

ಕಾರವಾರ, ಬೆಂಗಳೂರು ಮಾರ್ಗವಾಗಿ ಆಗಮಿಸುವ ವಾಹನಗಳು ಗೋಕುಲ ರಸ್ತೆ, ಅಮರಗೋಳ ಎಪಿಎಂಸಿ, ಧಾರವಾಡ ಕಡೆಗೆ ಸಾಗಲು ಈ ರಸ್ತೆ ಸಾಕಷ್ಟು ಅನುಕೂಲವಾಗಿದೆ. ಈ ರಸ್ತೆ ನಿರ್ಮಾಣದಿಂದ ಚನ್ನಮ್ಮ ವೃತ್ತಕ್ಕೆ ಅಥವಾ ಗಿರಣಿಚಾಳದಿಂದ ವಾಣಿ ವಿಲಾಸ ವೃತ್ತದತ್ತ ಬಾರದಂತೆ ತಡೆಯುವುದು ಯೋಜನೆ ಮೂಲ ಉದ್ದೇಶವಾಗಿದೆ.

ಆದರೆ ಯೋಜನೆ ಆರಂಭಿಸುವ ಮೊದಲು ಎದುರಾಗಬಹುದಾದ ತೊಡಕುಗಳಲ್ಲಿ ಪ್ರಮುಖವಾದ ಭೂಸ್ವಾಧೀನ, ಅಕ್ರಮ ಒತ್ತುವರಿ ತೆರವು ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಸ್ತೆ ಸದ್ಬಳಕೆಯಾಗುತ್ತಿಲ್ಲ. ಭೂಸ್ವಾಧೀನ ಹಾಗೂ ಅಕ್ರಮ ಒತ್ತುವರಿ ಪರಿಣಾಮ ರಸ್ತೆ ಅರ್ಧಂಬರ್ಧವಾಗಿದೆ. ಈ ಅವ್ಯವಸ್ಥೆ ಹಾಗೂ ವೈಫಲ್ಯತೆ ನೋಡಿದರೆ ಗುತ್ತಿಗೆದಾರರಿಗೆ ಒಂದಿಷ್ಟು ಕೆಲಸ ಕೊಟ್ಟಂತಾಗಿದೆ ವಿನಃ ಜನರಿಗೆ ಅನುಕೂಲವಾಗುತ್ತಿಲ್ಲ.

ಅನುದಾನ ಕೊರತೆ, ಮಾನವೀಯತೆ: ಇಂಡಿಪಂಪ್‌ -ಗೋಕುಲ ರಸ್ತೆ-ತತ್ವದರ್ಶ ಆಸ್ಪತ್ರೆ-ಶಿರೂರಪಾರ್ಕ್‌ ಉಣಕಲ್ಲ ಬಿಆರ್‌ಟಿಎಸ್‌ ರಸ್ತಗೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು 4.90 ಕಿಮೀ ದೂರದ ರಸ್ತೆ ನಿರ್ಮಾಣಕ್ಕಾಗಿ ಸುಮಾರು 40 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಈಗಾಗಲೇ ಸಂಪೂರ್ಣ ಅನುದಾನ ಖರ್ಚು ಮಾಡಲಾಗಿದೆ ಎನ್ನಲಾಗಿದೆ.

Advertisement

ವಾಯವ್ಯ ಸಾರಿಗೆ ಸಂಸ್ಥೆಯು ರಸ್ತೆಗಾಗಿ ಒಂದಿಷ್ಟು ಭೂಮಿ ಬಿಟ್ಟುಕೊಟ್ಟಿದೆ. ಆದರೆ ತತ್ವದರ್ಶ ಆಸ್ಪತ್ರೆ ಬಳಿ ಒಂದಿಷ್ಟು ಖಾಸಗಿ ಜಾಗವಿದ್ದು, ಇದಕ್ಕಾಗಿ ಸುಮಾರು 7,42,66,661 ರೂ. ಪರಿಹಾರ ಅಗತ್ಯವಿತ್ತು. ಇಷ್ಟೊಂದು ಪರಿಹಾರ ನೀಡಲು ಪಾಲಿಕೆಗೆ ಹಣದ ಕೊರತೆ ಎನ್ನುವ ಕಾರಣಕ್ಕೆ ಕೈಗೆತ್ತಿಕೊಂಡಿಲ್ಲ ಎನ್ನಲಾಗುತ್ತಿದೆ.

ಇನ್ನೂ ರಸ್ತೆ ಆರಂಭದ ಹೆಗ್ಗೇರಿ ಬಳಿ ಒಂದಿಷ್ಟು ಅಕ್ರಮ ಒತ್ತುವರಿಯಿದೆ. ಕೆಲವೊಂದು ಕಡೆ ಭೂ ಸ್ವಾಧೀನದ ಅಗತ್ಯವಿದೆ. ಆದರೆ ಇಲ್ಲಿ ವಾಸವಿರುವ ಬಹುತೇಕ ಕುಟುಂಬಗಳು ಕಡು ಬಡತನದಲ್ಲಿದ್ದು, ತೆರವುಗೊಳಿಸಿದರೆ ಅವರು ಬೀದಿ ಪಾಲಾಗಲಿದ್ದಾರೆ. ಹೀಗಾಗಿ ಅವರಿಗೆ ಬೇರೆಡೆ ಆಶ್ರಯ ಯೋಜನೆಯಲ್ಲಿ ಸೂರು ಕಲ್ಪಿಸಿದ ನಂತರ ತೆರವು ಮಾಡುವುದು ಸೂಕ್ತ ಎನ್ನುವ ಅನಿಸಿಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳದ್ದಾಗಿದೆ. ಒಂದೆಡೆ ಪಾಲಿಕೆಗೆ ಹಣಕಾಸಿನ ಕೊರತೆ ಮತ್ತೂಂದೆಡೆ ಮಾನವೀಯತೆ ಕಾರಣ ಆರು ವರ್ಷ ಕಳೆದರೂ ಯೋಜನೆಯ ಮೂಲ ಉದ್ದೇಶ ಈಡೇರದಂತಾಗಿದೆ.

ಅನುಮತಿಗೆ ಗೌರವವಿಲ್ಲ: ಭೂಸ್ವಾಧೀನ ಹಾಗೂ ಅಕ್ರಮ ಒತ್ತುವರಿ ತೆರವುಗೊಳಿಸದ ಕಡೆಗಳಲ್ಲಿ ರಸ್ತೆಯಾಗದೆ ಹಾಗೆ ಉಳಿದಿಕೊಂಡಿದೆ. ಹೀಗಾಗಿಯೇ ಭೂಸ್ವಾಧೀನ ಹಾಗೂ ಅದಕ್ಕೆ ತಗಲುವ ವೆಚ್ಚಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ
ಸಲ್ಲಿಸಲಾಗಿತ್ತು. ಸರಕಾರವು 2021 ಅಕ್ಟೋಬರ್‌ ತಿಂಗಳಲ್ಲಿ ಅನುಮತಿ ಕೂಡ ನೀಡಿತ್ತು. ಆದರೆ ಭೂ ಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯ ಸಾಮಾನ್ಯ ನಿಧಿಯಿಂದ ಬಳಸುವುದು ಹಾಗೂ ಜಿಲ್ಲಾಧಿಕಾರಿಯಿಂದ ಭೂಸ್ವಾಧೀನ ಮಾಡಿಕೊಳ್ಳುವಂತೆ ಸರಕಾರ ಅನುಮತಿ ನೀಡಿತ್ತು. ಸರಕಾರದ ಆದೇಶವಾಗಿ ಎರಡು ವರ್ಷ ಕಳೆದರೂ ಯೋಜನೆ ಪೂರ್ಣಗೊಳ್ಳಲು ತೊಡಕಾಗಿರುವ
ಭೂ ಸ್ವಾಧೀನ ಹಾಗೂ ಅಕ್ರಮ ಒತ್ತುವರಿ ತೆರವಿಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ಮುಂದಾಗುತ್ತಿಲ್ಲ.

ಉದ್ದೇಶಪೂರ್ವಕ ವಿಳಂಬವೇ?
ಭೂಸ್ವಾಧೀನ ವಿಳಂಬದಿಂದ ನನೆಗುದಿಗೆ ಬಿದ್ದಿದ್ದ ಎರಡು ರಸ್ತೆಗಳ ಪೈಕಿ ಉಣಕಲ್ಲ-ಹಳೇ ಎನ್‌ಎಚ್‌-4 ರಸ್ತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಸಾಗಿದೆ. ಆದರೆ ಈ ರಸ್ತೆಯ ಬಗ್ಗೆ ಇರುವ ಕಾಳಜಿ ನೋಡಿದರೆ ಉದ್ದೇಶಪೂರ್ವಕ ವಿಳಂಬ ಎನ್ನುವ ಮಾತುಗಳಿವೆ. ಈ ರಸ್ತೆ ನಿರ್ಮಾಣವಾದರೆ ವಾಹನಗಳು ಈ ರಸ್ತೆ ಮೂಲಕ ಸಾಗುತ್ತವೆ. ಹೀಗಾಗುವುದರಿಂದ ನೂರಾರು ಕೋಟಿ ರೂ. ವೆಚ್ಚದ ಫ್ಲೆ$çಓವರ್‌ ಯೋಜನೆಗೆ ಬಲ ಬರುವುದಿಲ್ಲ ಎನ್ನುವ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ ಎನ್ನುವ ಅನುಮಾನಗಳು ಜನರಲ್ಲಿದೆ. ಇನ್ನೂ ಗಟಾರು, ಒಳಚರಂಡಿ ನಿರ್ಮಾಣವಾಗಬೇಕಾಗಿದೆ. ಹೀಗಾಗಿ
ಬೃಹತ್‌ ವಾಹನಗಳು ಓಡಾಡಬೇಕಾದ ಸ್ಥಳದಲ್ಲಿ ಇಂದು ಕಾರು, ಆಟೋರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸೀಮಿತವಾಗಿದೆ. ಅಲ್ಲಲ್ಲಿ ಇನ್ನೂ ತಂಗು ಗುಂಡಿಗಳಿದ್ದು, ಮಳೆಗಾಲದಲ್ಲಿ ಈ ವಾಹನಗಳ ಓಡಾಟವೂ ಕಷ್ಟವಾಗಿದೆ. ಭೂಸ್ವಾಧೀನ, ಅಕ್ರಮ ಒತ್ತುವರಿಯಿಂದ ನಿರಾಶ್ರಿತರಾಗುವ ಕುಟುಂಬಗಳಿಗೆ ಆಶ್ರಯ ಮನೆ ಕಲ್ಪಿಸುವುದು ಸದ್ಯಕ್ಕಂತೂ ದೂರದ ಮಾತಾಗಿದ್ದು, ಇನ್ನೊಂದಿಷ್ಟು ವರ್ಷ ಇದೇ ಸ್ಥಿತಿಯಲ್ಲಿ ಮುಂದುವರಿದರೂ ಅಚ್ಚರಿ ಪಡಬೇಕಾಗಿಲ್ಲ.

ಸಮರ್ಪಕ ಯೋಜನೆ ಸಿದ್ಧಪಡಿಸದ ಕಾರಣ ಆರೇಳು ವರ್ಷಗಳಾದರೂ ಒಂದು ರಸ್ತೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಂಪೂರ್ಣ ವೈಫಲ್ಯವೇ ಇದಕ್ಕೆ ಪ್ರಮುಖ ಕಾರಣ. ಕೋಟಿ ಕೋಟಿ ರೂ. ಸುರಿದರೂ ರಸ್ತೆಗಳ ಸುಧಾರಣೆಯಾಗಿಲ್ಲ. ಕನಿಷ್ಟ ಪಕ್ಷ ನಗರ ಪ್ರವೇಶಿಸುವ ರಸ್ತೆಗಳಾದರೂ ಸುಂದರವಾಗಿವೆಯೇ. ಹೆಸರಿಗಷ್ಟೇ ಹುಬ್ಬಳ್ಳಿ
ಎರಡನೇ ರಾಜಧಾನಿ.
ಲಕ್ಷ್ಮಣ ಗಂಡಗಾಳೇಕರ ಮಾಜಿ ಸದಸ್ಯ, ಮಹಾನಗರ ಪಾಲಿಕೆ

ಕ್ಷೇತ್ರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ. ಈಗಾಗಲೇ
ಒಂದು ರಸ್ತೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಇಂಡಿಪಂಪ್‌ -ಉಣಕಲ್ಲವರೆಗಿನ ರಸ್ತೆ ಪೂರ್ಣಗೊಳಿಸಲು
ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಂತಹ ರಸ್ತೆಗಳನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ಗುರಿ
ಹಾಕಿಕೊಳ್ಳಲಾಗಿದೆ.
ಮಹೇಶ ಟೆಂಗಿನಕಾಯಿ
ಶಾಸಕ, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next