Advertisement

ಶಾಶ್ವತ ವಸ್ತು ಪ್ರದರ್ಶನ ಕೇಂದ್ರಕ್ಕೆ ಮರುಜೀವ

03:00 PM Feb 25, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಎಪಿಎಂಸಿ ಪ್ರಾಂಗಣದಲ್ಲಿ 9 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಶಾಶ್ವತ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರಕ್ಕೆ ಮತ್ತೆ ಜೀವತುಂಬುವ ಕೆಲಸ ಆರಂಭವಾಗಿದೆ.

Advertisement

ಶಾಶ್ವತ ವಸ್ತುಪ್ರದರ್ಶನ ಕೇಂದ್ರಕ್ಕೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿರಲಿಲ್ಲ. ಜತೆಗೆ  ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ತನ್ನ ಪಾಲಿನ ಹಣವನ್ನು ವಿಳಂಬವಾಗಿ ನೀಡಿತ್ತು. ಹೀಗಾಗಿ ಇದರ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಈಗ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಮುತುವರ್ಜಿಯಿಂದ ಮತ್ತೆ ವಸ್ತುಪ್ರದರ್ಶನ ಕೇಂದ್ರದ ಕಾಮಗಾರಿ ಶುರುವಾಗಿದೆ.

ಇನ್‌ಕಾಮೆಕ್ಸ್‌ ನಂತರ ಬಾಗಿಲು ತೆರೆಯಲಿಲ್ಲ: ಈ ವಸ್ತುಪ್ರದರ್ಶನ ಕೇಂದ್ರದಲ್ಲಿ ಕೆಸಿಸಿಐನಿಂದ 2016ರಲ್ಲಿ ಇನ್‌ಕಾಮೆಕ್ಸ್‌ ಆಯೋಜಿಸಲಾಗಿತ್ತು. ನಂತರ ಇದರ ನಿರ್ವಹಣೆ ಇಲ್ಲದ್ದರಿಂದ ಆವರಣದ ತುಂಬೆಲ್ಲ ಹುಳ್ಳುಕಡ್ಡಿ, ಗಿಡಗಳು ಬೆಳೆದು ಹಾಳಾಗಿ ಹೋಗಿದೆ. ಹೆಸ್ಕಾಂಗೆ ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಂದಿನಿಂದ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಈಗ ಅರ್ಧಕ್ಕೆ ಸ್ಥಗಿತಗೊಂಡ ಕೇಂದ್ರದಲ್ಲಿನ ಎರಡು ಶೆಡ್‌ಗಳನ್ನು ಪುನಶ್ಚೇತನಗೊಳಿಸುವ ಕಾಮಗಾರಿಗಳು ನಡೆದಿವೆ.

ಏನಿದು ಕೇಂದ್ರ?

ಅವಳಿ ನಗರದಲ್ಲಿ ಕೈಗಾರಿಕೆ, ಗುಡಿ ಕೈಗಾರಿಕೆ ಸೇರಿದಂತೆ ಇನ್ನಿತರೆ ವಿವಿಧೋದ್ದೇಶಗಳ ವಸ್ತು ಪ್ರದರ್ಶನ ಶಾಶ್ವತವಾಗಿ ನಡೆಯಬೇಕೆಂಬ ಸದುದ್ದೇಶದೊಂದಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ರಾಜ್ಯ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಕೇಂದ್ರ ಸ್ಥಾಪಿಸಲು ಮುಂದಾಯಿತು. ಅಲ್ಲದೆ ಅದಕ್ಕಾಗಿ ಅಂದಾಜು 7ಕೋಟಿ ರೂ.ಗಳ ವೆಚ್ಚದ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಕೆಸಿಸಿಐ ತನ್ನ ಪಾಲಿನ ಶೇ. 10 ಹಣವಾದ 7ಲಕ್ಷ ರೂ. ಪಾವತಿಸಿತ್ತು. ಸರಕಾರ ತನ್ನ ಪಾಲಿನ ಶೇ. 90 ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಲಿದೆ.

Advertisement

2012ರ ಡಿಸೆಂಬರ್‌ 9ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರು ಈ ವಸ್ತುಪ್ರದರ್ಶನ ಕೇಂದ್ರಕ್ಕೆ ತರಾತುರಿಯಲ್ಲಿ ಚಾಲನೆ  ನೀಡಿದ್ದರು. ಆದರೆ ರಾಜ್ಯ ಸರಕಾರವು ಪೂರ್ಣ ಪ್ರಮಾಣದ ವಸ್ತು ಪ್ರದರ್ಶನ ಕೇಂದ್ರಕ್ಕೆ ಅವಶ್ಯವಾಗಿದ್ದ ತನ್ನ ಪಾಲಿನ ಶೇ. 90 ಹಣದ 6.40 ಕೋಟಿ ರೂ.ವನ್ನು ಪೂರ್ಣ ಪಾವತಿಸಿರಲಿಲ್ಲ. ಅದು ಎರಡು ಹಂತವಾಗಿ ಕೇವಲ 4 ಕೋಟಿ ರೂ. ಮಾತ್ರ ನೀಡಿತ್ತು. ಇನ್ನುಳಿದ 2.40ಕೋಟಿ ರೂ. ಬಿಡುಗಡೆ ಮಾಡಿರಲಿಲ್ಲ. ಕೇಂದ್ರದ ನಿರ್ಮಾಣದ ಹೊಣೆ ಹೊತ್ತಿದ್ದ ಜೆಡಿಡಿಐಸಿಯವರು ಮೊದಲ ಹಂತದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಹುಲ್ಲುಹಾಸು, ಸಿಮೆಂಟ್‌ ಕಾಂಕ್ರೀಟ್‌ ರಸ್ತೆ, ವಿದ್ಯುತ್‌ ದೀಪ, ಬೋರ್‌ವೆಲ್‌ ಅಳವಡಿಸಿದ್ದರು. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಕಲ್ಪಿಸಿದ್ದರು. 5ಸಾವಿರ ಚದುರ ಅಡಿಯ ಶೆಡ್‌ ನಿರ್ಮಿಸಿತ್ತು. ಎರಡನೇ ಹಂತದಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ 10ಸಾವಿರ ಚದುರ ಅಡಿಯ ಮತ್ತೂಂದು ಭವನ ನಿರ್ಮಾಣ ಹಾಗೂ ಆಡಳಿತ ಕಚೇರಿ, ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ರಾಜ್ಯ ಸರಕಾರ ಪೂರ್ಣ ಹಣ ಪಾವತಿಸದ್ದರಿಂದ 2ನೇ ಹಂತದಲ್ಲಿನ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ವಸ್ತುಪ್ರದರ್ಶನ ಕೇಂದ್ರವು ಕೆಸಿಸಿಐಗೆ ಹಸ್ತಾಂತರಗೊಂಡಿದೆ.

ಏಳು ಪ್ರದರ್ಶನ ಮಳಿಗೆ ನಿರ್ಮಾಣ : ಶಾಶ್ವತ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯಲು ಹಾಗೂ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಉದ್ದೇಶದಿಂದ ಅಂದಾಜು 88ಲಕ್ಷ ರೂ. ವೆಚ್ಚದಲ್ಲಿ 20ಗಿ30 ಚದುರ ಅಡಿಯಲ್ಲಿ ಏಳು ಪ್ರದರ್ಶನ ಮಳಿಗೆಗಳನ್ನು ಕೇಂದ್ರದ ಮುಖ್ಯದ್ವಾರ ಬಳಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯ ಭೂಮಿಪೂಜೆಯನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಜ.26ರಂದು ಮಾಡಿದರು. ಈ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸುವಾಗ ಶೌಚಾಲಯ, ನೀರು ಸೇರಿದಂತೆ ಮೂಲಸೌಕರ್ಯಕ್ಕೆ ಒತ್ತು ಕೊಡಬೇಕು. ಆ ನಿಟ್ಟಿನಲ್ಲಿ ಹೊಸ ನೀಲನಕ್ಷೆ ಸಿದ್ಧಪಡಿಸುವಂತೆ ಜಿಲ್ಲಾಧಿ ಕಾರಿಗಳು ನಿರ್ಮಿತಿ ಕೇಂದ್ರದವರಿಗೆ ಸೂಚಿಸಿದ್ದಾರೆ. ಇನ್ನು ಕೇಂದ್ರದಲ್ಲಿ 1ನೇ ಮತ್ತು 2ನೇ ಹಂತದಲ್ಲಿ ನಿರ್ಮಿಸಲಾದ ಅಪೂರ್ಣಗೊಂಡ ಎರಡು ಶೆಡ್‌ಗಳನ್ನು 74ಲಕ್ಷ ರೂ. ವೆಚ್ಚದಲ್ಲಿ ಪುನರ್‌ ನವೀಕರಣ ಮಾಡಲಾಗುತ್ತಿದೆ. ಈ ಕಾಮಗಾರಿಯ ಪರಿಶೀಲನೆ ಹೊಣೆ ಕೆಸಿಸಿಐ ಮಾಡುತ್ತಿದೆ. ಹೆಗಡೆ ಆ್ಯಂಡ್‌ ಹೆಗಡೆ ಕಂಪನಿಯವರು ಸುಪರ್‌ವೈಸಿಂಗ್‌ ಮಾಡುತ್ತಿದ್ದಾರೆ.

ಶಾಶ್ವತ ವಿವಿಧೋದ್ದೇಶ ವಸ್ತುಪ್ರದರ್ಶನ : ಕೇಂದ್ರದಲ್ಲಿ ಅಪೂರ್ಣಗೊಂಡ ಎರಡು ಶೆಡ್‌ಗಳನ್ನು ಪುನರ್‌ ನವೀಕರಣ ಮಾಡಲಾಗುತ್ತಿದೆ. ಮುಖ್ಯದ್ವಾರ ಬಳಿ ಏಳು ವಸ್ತುಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಆರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಿದೆ. ನಂತರ ಇಲ್ಲಿ ನಿರಂತರವಾಗಿ ಗುಡಿ ಕೈಗಾರಿಕೆ, ಸೀಸನ್‌ ಹಣ್ಣುಗಳು ಸೇರಿದಂತೆ ಇನ್ನಿತರೆ ಉತ್ಪನ್ನಗಳ ವಸ್ತು ಪ್ರದರ್ಶನ ನಡೆಸಲಾಗುವುದು. ಅಲ್ಲದೆ 2022ರಲ್ಲಿ ಇನ್‌ಕಾಮೆಕ್ಸ್‌ ಆಯೋಜಿಸಲು ಯೋಚಿಸಲಾಗಿದೆ.( ಅಶೋಕ ಗಡಾದ,  ಕೆಸಿಸಿಐ ಗೌರವ ಕಾರ್ಯದರ್ಶಿ. )

ಶಿವಶಂಕರ ಕಂಠಿ

 

Advertisement

Udayavani is now on Telegram. Click here to join our channel and stay updated with the latest news.

Next