ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆಯ ಅರಳಿಕಟ್ಟಿ ಕಾಲೋನಿಯಲ್ಲಿ ಪೊಲೀಸರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಮತ್ತೆ ಹತ್ತು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಅರಳಿಕಟ್ಟಿ ಕಾಲೋನಿಯ ಖಾಜಾ ಬೇಪಾರಿ, ರಾಜೇಸಾಬ್ ನದಾಫ್, ಅಲ್ಲಾಭಕ್ ನದಾಫ್, ಜಾವೀದ್ ಬಿಜಾಪೂರ, ಅಫ್ಜಲ್ ರೋಣ, ಮಹಮ್ಮದಗೌಸ್ ಹಾವನೂರ, ಇರ್ಫಾನ್ ಬೇಪಾರಿ, ಗೂಡುಸಾಬ್ ಬೆಣ್ಣಿ, ಮಹಮ್ಮದ್ ಇಕ್ಬಾಲ್ ಬೆಣ್ಣಿ ಹಾಗೂ ಫಾತಿಮಾ ನದಾಫ್ ಬಂಧಿತರಾಗಿದ್ದು, ಎಲ್ಲರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಅರಳಿಕಟ್ಟಿ ಕಾಲೋನಿಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ಕೆಲವರು ಮುಂದಾಗಿದ್ದ ವೇಳೆ ಪೊಲೀಸರು ಲಾಕ್‌ಡೌನ್ ಪಾಲಿಸಿ ಎಂದು ಹೇಳಲು ಹೋದಾಗ ಆರೋಪಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದರು. ಈ ವೇಳೆ ಕಾಲೋನಿಯ ಮಹಿಳೆಯರು ಸೇರಿ ನೂರಾರು ಜನ ಜಮಾಯಿಸಿ ಪೊಲೀಸರ ಮೇಲೆ ಕಲ್ಲು, ಇಟ್ಟಿಗೆ ತುಂಡುಗಳನ್ನು ತೂರಿದ್ದಲ್ಲದೆ ಬಡಿಗೆಯಿಂದ ಹಲ್ಲೆ ಮಾಡಿದ್ದರು. ಇದರಿಂದ ಎಎಸ್‌ಐ ಸೇರಿ ಐವರು ಪೊಲೀಸರು ಗಾಯಗೊಂಡಿದ್ದರು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿ ಪೊಲೀಸರು ಶಬಾನಾ ರೋಣ, ಸೈನಾಜ ರೋಣ, ರೇಷ್ಮಾ ಗದಗ, ಮಹಾಬೂಬಿ ಮಂಡಾಲಿ, ಶಾಬೀರಾ ಬೆಣ್ಣಿ ಅವರನ್ನು ಶುಕ್ರವಾರವೇ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಆರು ಮಹಿಳೆಯರು ಸೇರಿ ಒಟ್ಟು 15 ಜನರನ್ನು ಬಂಧಿಸಿದಂತಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದವರಲ್ಲಿ ಕೆಲವರು ರೌಡಿಶೀಟರ್ ಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ದಾವಲಸಾಬ್ ನದಾಫ್, ಬಾಷಾ ಬೇಪಾರಿ, ಫತ್ತೆಅಹ್ಮದ್ ಶಾಬ್ದಿ, ಇಮ್ಮು ನದಾಫ್, ಜಿಲಾನಿ ನದಾಫ್ ಶಾರೂಖ್ ಬೇಪಾರಿ, ರಬ್ಟಾನಿ ಬೇಪಾರಿ ಸೇರಿದಂತೆ ಇನ್ನಿತರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.