Advertisement

ಅಮೆಜಾನ್‌ನಲ್ಲಿ ಹುಬ್ಬಳ್ಳಿ ಅವಲಕ್ಕಿ ಟ್ರೆಂಡ್‌

06:09 PM Sep 18, 2020 | Suhan S |

ಹುಬ್ಬಳ್ಳಿ: ಆನ್‌ಲೈನ್‌ ವಹಿವಾಟಿನ ಜಾಗತಿಕ ದೈತ್ಯ ಕಂಪೆನಿ ಅಮೆಜಾನ್‌ ನಲ್ಲಿ “ಹುಬ್ಬಳ್ಳಿ ಅವಲಕ್ಕಿ’ ಸದ್ದು ಮಾಡತೊಡಗಿದೆ. ದೇಶದ ವಿವಿಧ ರಾಜ್ಯಗಳಿಗೆ ಹುಬ್ಬಳ್ಳಿ ಬ್ರ್ಯಾಂಡ್‌ನ‌ ಅವಲಕ್ಕಿ ತಲುಪುತ್ತಿದೆ. ಅಮೇಜಾನ್‌ನಲ್ಲಿ ಕರ್ನಾಟಕ ಪೋಹಾ(ಅವಲಕ್ಕಿ) ಎಂದು ನಮೂದಿಸಿದರೆ “ಹುಬ್ಬಳ್ಳಿ ಅವಲಕ್ಕಿ’ಯೇ ಮೊದಲ ಸ್ಥಾನದಲ್ಲಿ ಕಾಣುವಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ.

Advertisement

ಮಧ್ಯಪ್ರದೇಶ, ಗುಜರಾತ್‌ ರಾಜ್ಯಗಳ ಅವಲಕ್ಕಿ ಅಬ್ಬರದ ನಡುವೆಯೂ ಜಾಗತಿಕ ಮಟ್ಟದ ಆನ್‌ಲೈನ್‌ ಕಂಪೆನಿಯಲ್ಲಿ ಹುಬ್ಬಳ್ಳಿ ಅವಲಕ್ಕಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಕಳೆದ ಐದು ದಶಕಗಳಿಂದ ಅವಲಕ್ಕಿ ತಯಾರಿಕೆಯನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಹೇಳಿಕೊಳ್ಳುವುದಕ್ಕೆ ದೊಡ್ಡ ಫ್ಯಾಕ್ಟರಿ ಏನು ಅಲ್ಲ. ಆದರೆ, ಗುಣಮಟ್ಟದ ಅವಲಕ್ಕಿ ತಯಾರಿಕೆ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ರುಚಿಯ ಅಚ್ಚೊತ್ತತೊಡಗಿದೆ. ವಿದೇಶದಿಂದ ಬೇಡಿಕೆ ಪಡೆದಿದೆ.

ರಾಸಾಯನಿಕ ಮುಕ್ತ: ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಕಳೆದ 50 ವರ್ಷಗಳಿಂದ ಅವಲಕ್ಕಿ ತಯಾರಿಕೆಯಲ್ಲಿ ತೊಡಗಿದೆ. ರಾಸಾಯನಿಕ ಮುಕ್ತ ಹಾಗೂ ಯಾವುದೇಬಣ್ಣ ಬೆರೆಸದೆ ನೈಸರ್ಗಿಕವಾಗಿ ಅವಲಕ್ಕಿ ತಯಾರಿಸಲಾಗುತ್ತದೆ. ದಪ್ಪ ಅವಲಕ್ಕಿ, ಮೀಡಿಯಂ ಅವಲಕ್ಕಿ ಹಾಗೂ ಪೇಪರ್‌ ಅವಲಕ್ಕಿಯನ್ನು ತಯಾರಿಸಲಾಗುತ್ತದೆ.ಒಂದು ಕೆಜಿ ಹಾಗೂ ಐದು ಕೆಜಿ ಪಾಕೇಟ್‌ ಗಳಲ್ಲಿ ಅವಲಕ್ಕಿ ದೊರೆಯುತ್ತಿದ್ದು, ಸಗಟುರೂಪದಲ್ಲಿ 30 ಹಾಗೂ 40 ಕೆಜಿ ತೂಕದ ಚೀಲದಲ್ಲಿಯೂ ದೊರೆಯುತ್ತಿದೆ.

ಉತ್ತಮ ಗುಣಮಟ್ಟದ ಆಯ್ದ ಅಕ್ಕಿಯನ್ನು ರೈತರು, ಇನ್ನಿತರ ಕಡೆಗಳಿಂದ ಖರೀದಿ ಮಾಡಲಾಗುತ್ತಿದ್ದು, ಅಕ್ಕಿ ಸಂಸ್ಕರಿಸುವ ಮೂಲಕ ಅದಕ್ಕೆ ಯಾವುದೇ ಕೃತಕ ಬಣ್ಣ ಬೆರೆಸದೆ ನೈಸರ್ಗಿಕವಾಗಿಯೇ ತಯಾರಿಸಲಾಗುತ್ತದೆ. ಇತರೆ ಅವಲಕ್ಕಿಗೆ ಹೋಲಿಸಿದರೆ ಇದು ಆಫ್ ವೈಟ್‌ ಅವಲಕ್ಕಿಯಾಗಿದೆ. ಮೂರು ತಲೆಮಾರುಗಳಿಂದ ಅದೇ ಗುಣಮಟ್ಟ ಕಾಯ್ದುಕೊಂಡು ಬಂದಿರುವ ಮೂರಶಿಳ್ಳಿ ಕಂಪೆನಿ ಇಂದಿಗೂ ಹೆಚ್ಚಿನ ಉತ್ಪಾದನೆಗೆ ಒತ್ತು ನೀಡದೆ, ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಸೀಮಿತಪ್ರಮಾಣದ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಯಾರು ಏನೇ ಪೈಪೋಟಿಗಿಳಿಯಲಿ, ಕಡಿಮೆ ದರಕ್ಕೆ ನೀಡಲಿ ನಾವು ಮಾತ್ರ ನಮ್ಮ ಗುಣಮಟ್ಟಕ್ಕೆ ಬದ್ಧರಾಗಿದ್ದೇವೆ ಎಂಬುದು ಕಂಪೆನಿಯವರ ಅನಿಸಿಕೆ.

ವಹಿವಾಟು ಒಪ್ಪಂದ :  ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ ಆನ್‌ಲೈನ್‌ ಮೂಲಕ ಗ್ರಾಹಕರನ್ನು ತಲುಪಲು ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ನೊಂದಿಗೆ ವಹಿವಾಟು ಒಪ್ಪಂದ ಮಾಡಿಕೊಂಡಿದೆ. ಅಮೇಜಾನ್‌ ಮೂಲಕ ಹುಬ್ಬಳ್ಳಿ ಅವಲಕ್ಕಿ ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಗೋವಾ, ಹರ್ಯಾಣ, ಉತ್ತರಖಂಡ, ಗೋವಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ತಮಿಳುನಾಡು, ರಾಜಸ್ಥಾನ, ದಿಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಅನೇಕ ಗ್ರಾಹಕರನ್ನು ತಲುಪಿದೆ. ಜತೆಗೆ ಮಲೇಷ್ಯಾದಿಂದಲೂ ಹುಬ್ಬಳ್ಳಿ ಅವಲಕ್ಕಿಗೆ ಬೇಡಿಕೆ ಬಂದಿದೆಯಂತೆ. ಅಮೆಜಾನ್‌ನಲ್ಲಿ ಹುಬ್ಬಳ್ಳಿ ಅವಲಕ್ಕಿ ಖರೀದಿಸಿದ ದೇಶದ ವಿವಿಧ ರಾಜ್ಯಗಳ ಗ್ರಾಹಕರು ಅತ್ಯುತ್ತಮ ರೇಟಿಂಗ್‌ ನೀಡಿರುವುದು, ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಸಹಜವಾಗಿಯೇ ಕಂಪೆನಿಯವರಿಗೆ ಸಂತಸ ಮೂಡಿಸಿದೆ. ಯೂಟ್ಯೂಬ್‌ನಲ್ಲಿಯೂ ಹುಬ್ಬಳ್ಳಿ ಅವಲಕ್ಕಿ ಮಾಹಿತಿ ಲಭ್ಯವಿದೆ.

Advertisement

ರಫ್ತು ವಹಿವಾಟಿನತ್ತ.. ಉತ್ಪಾದನೆ ಹೆಚ್ಚಳ ಚಿತ್ತ :  ಅವಲಕ್ಕಿ ರಫ್ತು ವಹಿವಾಟಿಗೂ ಹುಬ್ಬಳ್ಳಿ ಅವಲಕ್ಕಿ ಸ್ಥಾನ ಪಡೆಯುವ ಯತ್ನಗಳು ಸಾಗಿದ್ದು, ಎಲ್ಲವೂ ಅಂದಕೊಂಡಂತೆ ನಡೆದರೆ ಚೆನ್ನೈ ಮೂಲಕ ವಿವಿಧ ದೇಶಗಳಿಗೂ ಇದು ರಫ್ತು ಆಗಲಿದೆ. ಅಮೆಜಾನ್‌ ಮೂಲಕ ನಿತ್ಯವೂ ಬೇಡಿಕೆ ಹೆಚ್ಚತೊಡಗಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಬೇಡಿಕೆ ಬಂದಿತ್ತಂತೆ. ರಾಜ್ಯದ ವಿವಿಧ ಜಿಲ್ಲೆಗಳಿಗೂ ಹುಬ್ಬಳ್ಳಿ ಅವಲಕ್ಕಿ ಸರಬರಾಜು ಆಗುತ್ತಿದೆ. ಪ್ರಸ್ತುತ ಸೀಮಿತ ರೀತಿಯಲ್ಲಿ ಉತ್ಪಾದನೆ ಕೈಗೊಳ್ಳುತ್ತಿರುವ ಕಂಪೆನಿ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳೊಂದಿಗೆ ಹೊಸ ಘಟಕ ಸ್ಥಾಪನೆ ಹಾಗೂ ಉತ್ಪಾದನೆ ಹೆಚ್ಚಳದ ಯೋಜನೆ ಹೊಂದಿದೆ.

ಉತ್ಪಾದನೆ ಹೆಚ್ಚಳಕ್ಕಿಂತ ಇರುವ ಉತ್ಪಾದನೆಯೊಂದಿಗೆ ಪರಿಶುದ್ಧ-ಗುಣಮಟ್ಟದ ಅವಲಕ್ಕಿ ಗ್ರಾಹಕರಿಗೆ ತಲುಪಬೇಕು. ನಮ್ಮ ಅವಲಕ್ಕಿ ಬಳಕೆ ಮಾಡಿದವರು ತೃಪ್ತಿಯೊಂದಿಗೆ ಮತ್ತೂಮ್ಮೆ ಖರೀದಿಗೆ ಮುಂದಾಗಬೇಕೆಂಬುದು ನಮ್ಮ ಬಯಕೆ. ತಾತನ ಕಾಲದಿಂದ ಆರಂಭವಾದ ಈ ಉದ್ಯಮವನ್ನು ತಂದೆಯವರು ಸಂಕಷ್ಟದ ಸ್ಥಿತಿಯಲ್ಲೂ ಗುಣಮಟ್ಟದಲ್ಲಿ ರಾಜಿಯಾಗದೆಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ನಾವು ತಂದೆಯವರ ಮಾರ್ಗದರ್ಶನದಲ್ಲಿ ಅದೇ ಗುಣಮಟ್ಟದೊಂದಿಗೆ ಆನ್‌ಲೈನ್‌ ವಹಿವಾಟು ಬಳಕೆ ಮೂಲಕ ಹುಬ್ಬಳ್ಳಿ ಅವಲಕ್ಕಿ ಬ್ರಾÂಂಡ್‌ ಅನ್ನು ದೇಶ-ವಿದೇಶಗಳಲ್ಲಿ ವೃದ್ಧಿಸುವ ಯತ್ನದಲ್ಲಿ ತೊಡಗಿದ್ದೇವೆ. – ಅಕ್ಷಯ ಮತ್ತು ಶಿವರಾಜ ಮೂರಶಿಳ್ಳಿ, ವಿ.ಪಿ. ಮೂರಶಿಳ್ಳಿ ಆ್ಯಂಡ್‌ ಕಂಪೆನಿ

 

­ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next