ಬೆಂಗಳೂರು: ವಾಹನಗಳಿಗೆ ಅತೀಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆ. 15 (ರವಿವಾರ) ಕೊನೆಯ ದಿನವಾಗಿದ್ದು, ಇದುವರೆಗೆ ಕೇವಲ 52 ಲಕ್ಷ ವಾಹನಗಳು ಅಳವಡಿಸಿಕೊಂಡಿವೆ.
ರಾಜ್ಯದಲ್ಲಿ 2019ರ ಎಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಎಲ್ಲ ಪ್ರಕಾರದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ವ್ಯಾಪ್ತಿಗೆ ಸುಮಾರು 1.90 ಕೋಟಿ ವಾಹನಗಳು ಬರಲಿದ್ದು, ಈ ಪೈಕಿ 52 ಲಕ್ಷ ವಾಹನಗಳು ಅಳವಡಿಸಿಕೊಂಡಿದ್ದು, ಇನ್ನೂ 1.40 ಕೋಟಿ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಆಗಬೇಕೇ ಅಥವಾ ದಂಡ ಪ್ರಯೋಗ ಮಾಡಬೇಕೇ ಎನ್ನುವುದು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಯಾಕೆಂದರೆ, ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಮಧ್ಯೆ ಪ್ರಕರಣದ ವಿಚಾರಣೆ ನ್ಯಾಯಾಲಯಲ್ಲಿದೆ. ಅದನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲು ಸರಕಾರ ಉದ್ದೇಶಿಸಿದೆ.
ಈ ಕುರಿತು “ಉದಯವಾಣಿ’ಯೊಂದಿಗೆ ಮಾತ ನಾಡಿದ ಸಾರಿಗೆ ಆಯುಕ್ತ ಎ.ಎಂ. ಯೋಗೇಶ್, ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನಿಗದಿಪಡಿಸಿದ ಗಡುವು ಸೆ. 15ಕ್ಕೆ ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಅಂದರೆ ಸೆ. 18ಕ್ಕೆ ನ್ಯಾಯಾಲಯದಲ್ಲಿ ಇದು ವಿಚಾರಣೆಗೆ ಬರಲಿದೆ. ಕೋರ್ಟ್ ಸೂಚನೆ ಮೇರೆಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.