ಸೊಲ್ಲಾಪುರ: ಅಕ್ಕಲ್‌ಕೋಟೆ ತಾಲೂಕಿನ ನಾಗಣಸೂರ ಗ್ರಾಮದ ಎಚ್. ಜಿ. ಪ್ರಚಂಡೆ ಕನ್ನಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅರ್ಚನಾ ಮಲಗೊಂಡಾ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 86.76 ಅಂಕಗಳನ್ನು ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಇತ್ತೀಚೆಗೆ ಮಹಾರಾಷ್ಟ್ರದ ಎಚ್‌ಎಸ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಶಾಲೆಯ 97 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಶೋಭಾ ಆಲೂರೆ ಶೇ. 83.38 ಹಾಗೂ ಅಶ್ರೀತಾ ಮಿರಗಿ ಅವರು ಶೇ. 77.38 ಅಂಕ ಪಡೆಯುವ ಮೂಲಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.
5 ವಿದ್ಯಾರ್ಥಿಗಳು ಅಗ್ರ ಶ್ರೇಣಿ, 29 ವಿದ್ಯಾರ್ಥಿಗಳು ಪ್ರಥಮ, 56 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಶೇ. 92.78 ಫಲಿಂತಾಶ ದೊರೆತ್ತಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಮಾಣಿಕರಾವ ಗೋಪಗೊಂಡ, ಪ್ರಾಚಾರ್ಯ ಮಹಾದೇವ ಲಿಂಬಿತೋಟೆ ಹಾಗೂ ಶಿಕ್ಷಕರಾದ ಚಿದಾನಂದ ಮಠಪತಿ, ಈರಣ್ಣಾ ಧಾನ ಶೆಟ್ಟಿ, ಅನಿಲ ಇಂಗಳೆ, ಬಸವರಾಜ ಧಾನ ಶೆಟ್ಟಿ, ಪ್ರಶಾಂತ ನಾಗೂರೆ, ಶರಣಪ್ಪಾ ಮಣುರೆ, ಚನ್ನವೀರ ಕಲ್ಯಾಣ, ಭಾರತ ನನ್ನವರೆ, ಶಂಕರ ವØನಮಾನೆ, ವಿಶ್ವನಾಥ ತಳವಾರ, ಕಾಶಿನಾಥ ವಾಘಮೊಡೆ ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಅರ್ಚನಾ ಮಲಗೊಂಡ ಪಿಯುಸಿ ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ನಿಜಕ್ಕೂ ಹೆಮ್ಮೆ ತಂದಿದೆ. ಈ ಮೊದಲು ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಧಾನಮ್ಮ ಫುಲಾರಿ ಪಿಯುಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದಳು. ಹೀಗೆ ಸತತ ಎರಡನೇಯ ಬಾರಿ ನಮ್ಮ ಪ್ರಶಾಲೆಗೆ ಪ್ರಥಮ ಸ್ಥಾನ ದೊರೆತ್ತಿದೆ. ಅಲ್ಲದೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೂಡ ನಮ್ಮ ಶಾಲೆಗೆ ಪ್ರಥಮ ಸ್ಥಾನ ಪಡೆಯಲು ಪ್ರಯತ್ನ ಮಾಡುತ್ತೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಅಂತೆಯೇ ಕರ್ನಾಟಕ ಸರಕಾರ ಹೊರನಾಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿರುವ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಎಚ್. ಜಿ. ಪ್ರಚಂಡೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಹಾದೇವ ಲಿಂಬಿತೋಟೆ ತಿಳಿಸಿದ್ದಾರೆ.