ಮುಂಬಯಿ: ಬಾಲಿವುಡ್ ಸಿನಿರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಹೃತಿಕ್ ರೋಷನ್ , ದೀಪಿಕಾ ಪಡುಕೋಣೆ ಅಭಿನಯದ ʼಫೈಟರ್ʼ ಸಿನಿಮಾ ರಿಲೀಸ್ ಗೆ ದಿನಗಣನೆ ಬಾಕಿ ಇರುವಾಗಲೇ ಅಡೆತಡೆ ಉಂಟಾಗಿದೆ.
ʼಪಠಾಣ್ʼ ಬಳಿಕ ನಿರ್ದೇಶಕ ಸಿದ್ದಾರ್ಥ್ ಆನಂದ್ ʼಫೈಟರ್ʼ ಮೂಲಕ ಮತ್ತೊಂದು ದೇಶ ಪ್ರೇಮ ಸಾರುವ ಕಥೆಯನ್ನು ಹೇಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟೀಸರ್, ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದೇ ವಾರ ಸಿನಿಮಾ ಅದ್ದೂರಿಯಾಗಿ ತೆರೆ ಕಾಣಲಿದೆ. ಇದರ ಬೆನ್ನಲ್ಲೇ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದೆ. ʼಫೈಟರ್ʼ ಸಿನಿಮಾವನ್ನು ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ನಿರ್ಮಾಪಕ-ಸಿನಿಮಾ ತಜ್ಞ ಗಿರೀಶ್ ಜೋಹರ್ ಮತ್ತು ವ್ಯಾಪಾರ ವಿಶ್ಲೇಷಕ ಶ್ರೀಧರ್ ಪಿಳ್ಳೈ ಅವರು ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಅವರ ಪ್ರಕಾರ, ಯುಎಇ ಹೊರತುಪಡಿಸಿ ಉಳಿದ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್ ತಡೆ ಹಿಡಿಯಲಾಗಿದೆ. ಇದಕ್ಕೆ ಕಾರಣ ಏನು ಎನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ ಎಂದು ಎಂದು ಜೋಹರ್ ಹೇಳಿದ್ದಾರೆ.
ಗಲ್ಫ್ ದೇಶಗಳಲ್ಲಿ ಭಾರತದ ಸಿನಿಮಾಗಳು ಬ್ಯಾನ್ ಆಗುವುದು ಹೊಸತೇನಲ್ಲ. ಇತ್ತೀಚೆಗೆ ಮಮ್ಮುಟ್ಟಿ ಅವರ ʼಕಾತಲ್ – ದಿ ಕೋರ್’, ದಳಪತಿ ವಿಜಯ್ ವಿ ಅವರ ‘ಬೀಸ್ಟ್’, ‘ಸೀತಾ ರಾಮಂ’, ತಮಿಳು ಚಿತ್ರ ‘ಎಫ್‌ಐಆರ್’ ಮತ್ತು ಮೋಹನ್ ಲಾಲ್ ಅವರ ‘ಮಾನ್ ಸ್ಟರ್’ ಸಿನಿಮಾಗಳು ಬ್ಯಾನ್ ಆಗಿದ್ದವು.
ಇಸ್ಲಾಮಿಸ್ಟ್‌ಗಳನ್ನು ಉಗ್ರಗಾಮಿಗಳು, LGBTQ ವಿಷಯ ಮತ್ತು ಧಾರ್ಮಿಕ ಆಧಾರದ ಮೇಲೆ ಬರುವ ಸಿನಿಮಾಗಳು ಗಲ್ಫ್ ದೇಶಗಳಲ್ಲಿ ಬ್ಯಾನ್ ಆಗುತ್ತವೆ.
ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್ ಕಾಣಿಸಿಕೊಳ್ಳಲಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ರಾಕಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ , ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಸಂಜೀದಾ ಶೇಖ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿರುವ ʼಫೈಟರ್ʼ ಇದೇ ಜ.25 ರಂದು ಅದ್ಧೂರಿಯಾಗಿ ತೆರ ಕಾಣಲಿದೆ.