Advertisement

“ಕೊಹ್ಲಿ ತುಂಬಿದ ಆತ್ಮವಿಸ್ವಾಸವೇ ನಾನಿಂದು ಆಡಲು ಕಾರಣ…’

03:45 AM Jan 21, 2017 | |

ಕಟಕ್‌: ಗತ ಕಾಲದ ಕ್ರಿಕೆಟ್‌ ಹೀರೋ, ಭಾರತೀಯ ಅಭಿಮಾನಿಗಳ ಕಣ್ಮಣಿ ಯುವರಾಜ್‌ ಸಿಂಗ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಗುರುವಾರದ ಕಟಕ್‌ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ದಾಳಿಯನ್ನು ಪುಡಿಗುಟ್ಟಿ, ಜೀವನಶ್ರೇಷ್ಠ 150 ರನ್‌ ಸಿಡಿಸುವ ಮೂಲಕ ತಾನೂ ಈಗಲೂ ಸಲ್ಲುತ್ತೇನೆ ಎಂಬುದಾಗಿ ಕ್ರಿಕೆಟ್‌ ವಿಶ್ವಕ್ಕೆ ಸಾರಿದ್ದಾರೆ. ಪಂದ್ಯಶ್ರೇಷ್ಠ ಕ್ರಿಕೆಟಿಗನಾಗಿ ಮೂಡಿಬಂದ ಯುವಿ, ನಾಯಕ ವಿರಾಟ್‌ ಕೊಹ್ಲಿ ತನ್ನ ಮೇಲಿಟ್ಟ ನಂಬಿಕೆ, ವಿಶ್ವಾಸದಿಂದಾಗಿ ತಾನಿಂದು ಕ್ರಿಕೆಟ್‌ನಲ್ಲಿ ಮುಂದುವರಿಯುವಂತಾಗಿದೆ ಎಂದಿದ್ದಾರೆ.

Advertisement

“ನಾನು ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದಾಗ ಕ್ರಿಕೆಟ್‌ನಿಂದ ನಿವೃತ್ತನಾಗಲು ಯೋಚಿಸಿದ್ದೆ. ಆದರೆ ನಾಯಕ ವಿರಾಟ್‌ ಕೊಹ್ಲಿ ನನ್ನ ಮೇಲಿರಿಸಿದ ಅಪಾರ ವಿಶ್ವಾಸದಿಂದಾಗಿ ಮತ್ತೆ ಕ್ರಿಕೆಟ್‌ ಆಡುವಂತಾಗಿದೆ. ಕೊಹ್ಲಿ ನನ್ನ ಮೇಲಿರಿಸಿದ ವಿಶ್ವಾಸಕ್ಕೆ ಪ್ರತಿಯಾಗಿ ನಾನು ಮರಳಿ ಕೊಡುಗೆ ಸಲ್ಲಿಸಲೇಬೇಕಿತ್ತು…’ ಎಂದು ಭಾರತದ ಸರಣಿ ಗೆಲುವಿನ ಬಳಿಕ ಯುವರಾಜ್‌ ಮನಬಿಚ್ಚಿ ಮಾತಾಡಿದರು.

ನಾಯಕನ ಬೆಂಬಲ ಅಗತ್ಯ
“ನಿಮ್ಮ ಮೇಲೆ ತಂಡದ ಹಾಗೂ ನಾಯಕನ ಸಂಪೂರ್ಣ ಬೆಂಬಲವಿದ್ದದ್ದೇ ಆದರೆ ಆತ್ಮವಿಶ್ವಾಸಕ್ಕೇನೂ ಕೊರತೆ ಇರದು. ನಾಯಕ ಕೊಹ್ಲಿ ನನ್ನ ಮೇಲೆ ಇಂಥದೊಂದು ವಿಶ್ವಾಸವಿರಿಸಿದ್ದಾರೆ. ಡ್ರೆಸ್ಸಿಂಗ್‌ ರೂಮ್‌ ವಾತಾವರಣ ಕೂಡ ಸಂತಸದಿಂದ ಕೂಡಿದೆ. ಎಲ್ಲ ಕಿರಿಯರೂ ನನ್ನೊಂದಿಗೆ ಬೆರೆಯುತ್ತಿದ್ದಾರೆ. ಇದರಿಂದ ನನ್ನ ಆತ್ಮವಿಶ್ವಾಸ ಎಷ್ಟೋ ಪಟ್ಟು ಹೆಚ್ಚಿದೆ. ಹೀಗಾಗಿ ಇಂಥದೊಂದು ಬ್ಯಾಟಿಂಗ್‌ ಸಾಧ್ಯವಾಯಿತು…’ ಎಂದರು.

ಕಾಲ ಬದಲಾಗುವ ನಂಬಿಕೆ
“ನಾನು ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದಾಗ, ಬಳಿಕ ಕ್ಯಾನ್ಸರ್‌ ಗೆದ್ದು ಬಂದಾಗ ಅಸಂಖ್ಯ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತರು. ಅಭಿಮಾನಿಗಳ ಬೆಂಬಲ ನನ್ನ ಮೇಲೆ ಯಾವತ್ತೂ ಇತ್ತು. ಆದರೂ ಒಂದು ಹಂತದಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ಆಗ ನಾನು ಕ್ರಿಕೆಟ್‌ನಿಂದ ನಿವೃತ್ತನಾಗಲು ಯೋಚಿಸಿದ್ದೆ. ಆದರೆ ಕಠಿನ ಪರಿಶ್ರಮವನ್ನು ಮಾತ್ರ ಕೈಬಿಡಲಿಲ್ಲ. ಕಾಲ ಬದಲಾಗುತ್ತದೆಂಬುದು ನನ್ನ ನಂಬಿಕೆಯಾಗಿತ್ತು. ಇದೀಗ ಸತ್ಯವಾಗಿದೆ…’ ಎಂದು 35ರ ಹರೆಯದ ಯುವಿ ಹೇಳಿದರು.

ಯುವರಾಜ್‌ ಸಿಂಗ್‌ ಕೊನೆಯ ಶತಕ ಬಾರಿಸಿದ್ದು 2011ರ ವಿಶ್ವಕಪ್‌ ಪಂದ್ಯಾವಳಿಯ ವೆಸ್ಟ್‌ ಇಂಡೀಸ್‌ ಎದುರಿನ ಚೆನ್ನೈ ಪಂದ್ಯದಲ್ಲಿ. 6 ವರ್ಷಗಳ ಬಳಿಕ ಅವರು ಶತಕ ಸಂಭ್ರಮವನ್ನು ಆಚರಿಸಿದ್ದಾರೆ. ಇದರಿಂದ ಸಂತುಷ್ಟರಾಗಿದ್ದಾರೆ.
“6 ವರ್ಷಗಳ ಬಳಿಕ ಬಾರಿಸಿದ ಈ ಸೆಂಚುರಿಯಿಂದ ನಾನು ಸಂತುಷ್ಟನಾಗಿದ್ದೇನೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ 2-3 ವರ್ಷ ಗಳು ನನ್ನ ಪಾಲಿಗೆ ಅತ್ಯಂತ ಕಠಿನವಾಗಿದ್ದವು. ಮರಳಿ ಫಿಟ್‌ನೆಸ್‌ ಸಂಪಾದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟು ಬೆವರು ಸುರಿಸಿದೆ. ಆಗಲೇ ನಾನು ತಂಡದಿಂದ ಹೊರಬಿದ್ದೆ. ತಂಡದಲ್ಲಿ ಶಾಶ್ವತ ಸ್ಥಾನ ಸಂಪಾದಿಸಲು ಸಾಧ್ಯವಾಗಲೇ ಇಲ್ಲ…’ ಎಂದರು.

Advertisement

ಟೀಕೆಗಳ ಬಗ್ಗೆ ಚಿಂತೆ ಇಲ್ಲ
ಕಳೆದ ದೇಶಿ ಕ್ರಿಕೆಟ್‌ನಲ್ಲಿ ತೋರ್ಪಡಿಸಿದ ಉನ್ನತ ಸಾಧನೆ ಯುವಿ ಪುನರಾಗಮನಕ್ಕೆ ರಹದಾರಿಯಾಯಿತು ಎನ್ನಬಹುದು. ರಣಿಜ ಕ್ರಿಕೆಟ್‌ನಲ್ಲಿ ಬರೋಡ ವಿರುದ್ಧ ಜೀವನಶ್ರೇಷ್ಠ 260 ರನ್‌ ಬಾರಿಸುವ ಮೂಲಕ ಯುವರಾಜ್‌ ಸುದ್ದಿಯ ಕೇಂದ್ರವಾದರು. ಮರಳಿ ಟೀಮ್‌ ಇಂಡಿಯಾ ಪ್ರವೇಶಿಸಿದಾಗ ಟೀಕೆಗಳನ್ನೂ ಅವರು ಎದುರಿಸಬೇಕಾಯಿತು.

“ನಾನು ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೇನು ಅಂದರೋ ನನಗೆ ಗೊತ್ತಿಲ್ಲ. ಏಕೆಂದರೆ ನಾನು ಪತ್ರಿಕೆಗಳನ್ನು ಓದುವುದಿಲ್ಲ, ಟಿ.ವಿ.ಯನ್ನೂ ನೋಡುವುದಿಲ್ಲ. ಕ್ರಿಕೆಟ್‌ನತ್ತ ಗಮನ ಕೇಂದ್ರೀಕರಿಸುವುದು ಹಾಗೂ ಬ್ಯಾಟಿಂಗ್‌ ಮಟ್ಟವನ್ನು ಸುಧಾರಿಸಿಕೊಳ್ಳುವುದಷ್ಟೇ ನನಗೆ ಮುಖ್ಯ. ಇದನ್ನು ನಾನು ತಪ್ಪಿಸಿದ್ದಿಲ್ಲ. ಇದಕ್ಕೆ ಇಂದು ಪ್ರತಿಫ‌ಲ ಸಿಕ್ಕಿದೆ. ಏಕದಿನದಲ್ಲಿ 150 ರನ್‌ ಎನ್ನುವುದು ದೊಡ್ಡ ಮೊತ್ತ. ಅಲ್ಲದೇ ಇದು ನನ್ನ ಜೀವನಶ್ರೇಷ್ಠ ಸಾಧನೆಯೂ ಹೌದು. ಮುಂದಿನ ಪಂದ್ಯಗಳಲ್ಲೂ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಸಾಗುತ್ತಿದೆ…’ ಎಂದರು.

ಧೋನಿ ಜತೆಗಿನ ಆಟ
ಧೋನಿ ಜತೆಗಿನ ದ್ವಿಶತಕದ ಜತೆಯಾಟವನ್ನು ಯುವರಾಜ್‌ ಬಣ್ಣಿಸಿದ್ದು ಹೀಗೆ: “ನಾವಿಬ್ಬರೂ ತಂಡದ ಅತ್ಯಂತ ಅನುಭವಿ ಆಟಗಾರರು. ನಾನು ಬೌಂಡರಿ ಬಾರಿಸುತ್ತಿದ್ದುದನ್ನು ಗಮನಿಸಿದ ಅವರು ಸ್ಟ್ರೈಕ್‌ ರೊಟೇಟ್‌ ಮಾಡುವತ್ತ ಹೋದರು. ನಮ್ಮ ಮೊದಲ ಗುರಿ 25 ರನ್‌ ಜತೆಯಾಟ ನಡೆಸುವುದು, ಬಳಿಕ 50 ರನ್‌. ಅನಂತರವೇ ಇದನ್ನು ನೂರಕ್ಕೆ ವಿಸ್ತರಿಸುವ ಯೋಜನೆ ಹಾಕಿಕೊಂಡದ್ದು. ಒಮ್ಮೆ ಕ್ರೀಸ್‌ ಆಕ್ರಮಿಸಿಕೊಂಡ ಬಳಿಕ ಇದು ಇನ್ನಷ್ಟು ವಿಸ್ತರಿಸಲ್ಪಟ್ಟಿತು…’

Advertisement

Udayavani is now on Telegram. Click here to join our channel and stay updated with the latest news.

Next