ಹೊಸದಿಲ್ಲಿ: ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ದೇಶಕ್ಕೆ ದೇಶವೇ ಹೋರಾಡುತ್ತಿದ್ದು, ಅತ್ತ ನಾಗರಿಕ ವಿಮಾನಯಾನ ಸಚಿವಾಲಯ ಕೂಡ ಸೋಂಕು ನಿಯಂತ್ರಣಕ್ಕೆ ದೊಡ್ಡ ಮಟ್ಟದ ಸೇವೆ ಸಲ್ಲಿಸುತ್ತಿದೆ. ಲೈಫ್ ಲೈನ್ ಉಡಾನ್ ಕಾರ್ಯಕ್ರಮದಡಿ ಏರ್ ಇಂಡಿಯಾ ಸೇರಿ ವಿವಿಧ ಸಂಸ್ಥೆಗಳ 218ಕ್ಕೂ ಹೆಚ್ಚು ವಿಮಾನಗಳು ಏ.12ರವರೆಗೆ ಒಟ್ಟು 377.50 ಟನ್‌ಗಳಷ್ಟು ಮಾತ್ರೆ, ಔಷಧ ಮತ್ತಿತರ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಿವೆ.
ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ, ದೇಶದ ಕಟ್ಟ ಕಡೆಯ, ಸೌಲಭ್ಯ ವಂಚಿತ ಗ್ರಾಮಗಳಿಗೂ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ. ಹಲವು ಅಧಿಕಾರಿಗಳು ಹಾಗೂ ವೃತ್ತಿಪರರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಏರ್ ಇಂಡಿಯಾ, ಭಾರತೀಯ ವಾಯು ಸೇನೆ (ಐಎಫ್‌ಎಸ್), ಅಲಿಯಾನ್ಸ್ ಏರ್ ಹಾಗೂ ಇತರ ಖಾಸಗಿ ವಿಮಾನಯಾನ ಸಂಸ್ಥೆಗಳು ಈ ಕಾರ್ಯದಲ್ಲಿ ಕೈ ಜೋಡಿಸಿವೆ. ಅದರಲ್ಲೂ ಏರ್ ಇಂಡಿಯಾ ಹಾಗೂ ಅಲಿಯಾನ್ಸ್ ಏರ್‌ಗೆ ಸೇರಿದ 132 ವಿಮಾನಗಳು ಈ ಕಾರ್ಯದಲ್ಲಿ ತೊಡಗಿಕೊಂಡಿವೆ. ಈಶಾನ್ಯ ರಾಜ್ಯಗಳು, ದ್ವೀಪ ಹಾಗೂ ಪರ್ವತ ಶ್ರೇಣಿ ರಾಜ್ಯಗಳಿಗೆ ವಿಶೇಷ ಪಡೆಗಳನ್ನು ಕಳಿಸಿಕೊಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಕೋವಿಡ್ 19 ವೈರಸ್ ಹಿಮ್ಮೆಟ್ಟಿಸಲು ಉಡಾನ್: ಕೋವಿಡ್ 19 ವೈರಸ್ ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಉದ್ದೇಶದಿಂದ ನಾಗರಿಕ ವಿಮಾನಯಾನ ಸಚಿವಾಲಯವು ಮಾ.26ರಂದು ಲೈಫ್ ಲೈನ್ ಉಡಾನ್ ಕಾರ್ಯಕ್ರಮ ಆರಂಭಿಸಿದೆ.
ಈ ಕಾರ್ಯಕ್ರಮದಡಿ ಕಾರ್ಯಾಚರಣೆ ನಡೆಸುವ ವಿಮಾನಗಳು ಗುವಾಹಟಿ, ದಿಬ್ರುಘಡ, ಅಗರ್ತಲಾ, ಐಜ್ವಾಲ್, ದೀಮಾಪುರ್, ಇಂಫಾಲ, ಕೊಯಮತ್ತೂರ್, ತಿರುವನಂತಪುರ, ಭುವನೇಶ್ವರ, ರಾಯ್ಪುರ, ರಾಂಚಿ, ಪೋರ್ಟ್ ಬ್ಲೇರ್ ಮತ್ತು ಗೋವಾ ಸೇರಿ ಹಲವು ಪ್ರದೇಶಗಳಿಗೆ ಸರಕು ಸಾಗಣೆ ಮಾಡುತ್ತಿವೆ.