Advertisement

ಶುಂಠಿ ಬೆಳೆ ಬಗ್ಗೆ ತಿಳಿದಿರಲಿ…ಪ್ರಯೋಜನಗಳೇನು?

03:16 PM Sep 03, 2021 | Team Udayavani |

ಕಳೆದ ಕೆಲವು ದಶಕಗಳಲ್ಲಿ ಶುಂಠಿಗೆ ವಿಪರೀತ ಬೇಡಿಕೆ ಬಂದುಬಿಟ್ಟಿದೆ. ಪೇಟೆ ಅಥವಾ ಹಳ್ಳಿ – ಎಲ್ಲೇ ಆಗಲಿ, ತರಕಾರಿ ಅಂಗಡಿ, ಸಂತೆಗಳಲ್ಲಿ ಶುಂಠಿಯ ಮಾರಾಟ ಗಣನೀಯವಾಗಿ ಹೆಚ್ಚಿದೆ.ಕೆಜಿಗೆ 80-100 ರೂ. ಗಳಲ್ಲಿ ಬಿಕರಿಯಾಗುತ್ತಿದೆ.

Advertisement

ಹಿಂದೆ ಪ್ರತೀ ಮನೆಯಲ್ಲೂ ಒಂದಾದರೂ ಶುಂಠಿಯ ಬುಡ ಇರುತ್ತಿತ್ತು ಮತ್ತು ಮನೆಬಳಕೆಗೆ ಬೇಕಾಗುವಷ್ಟು ಶುಂಠಿ ಗಡ್ಡೆಗಳನ್ನು ಬೆಳೆದುಕೊಡುತ್ತಿತ್ತು. ಆದರೆ ಈಗ ಆ ಪರಿಪಾಠ ಕಡಿಮೆಯಾಗಿದೆ. ಎಲ್ಲರಿಗೂ ಶುಂಠಿ ಅಂಗಡಿ ಅಥವಾ ಸಂತೆಯಿಂದಲೇ ಬರಬೇಕು. ಪೇಟೆ, ಸಂತೆಯಲ್ಲಿ ಸಿಗುವ ಶುಂಠಿ ಸಾಮಾನ್ಯವಾಗಿ ನೂರಾರು ಕಿಲೋಮೀಟರ್‌ ದೂರದಿಂದ ಅಂದರೆ, ಅಲ್ಲೆಲ್ಲೊ ಬಯಲು ಸೀಮೆಯಲ್ಲಿ ಬೆಳೆದು ಬಂದಂಥದ್ದು.

ನೋಡಲು ಈ ಶುಂಠಿ ಆಕರ್ಷಕ ಬಣ್ಣ, ಗಾತ್ರ, ದಪ್ಪ ಇರುತ್ತದಾದರೂ ರುಚಿ, ತೀಕ್ಷ್ಣತೆ ಮತ್ತು ಪರಿಮಳ ಕಡಿಮೆ. ಅಲ್ಲದೆ,ಕೊಳೆಯುವುದು ಬೇಗ. ಇದಕ್ಕೆ ಪ್ರತಿಯಾಗಿ ನಮ್ಮೂರಿನದ್ದೇ ಆದ ನಾಟಿ ಶುಂಠಿ ನೋಡಲು ಸಣ್ಣ ಗಾತ್ರದ್ದಾದರೂ ರುಚಿ, ಪರಿಮಳ ಮತ್ತು ತೀಕ್ಷ್ಣತೆ ಹೆಚ್ಚು. ಇದಕ್ಕೆ ಪೇಟೆಯಲ್ಲಿ ಸಿಗುವ ಶುಂಠಿ ಸಾಟಿಯಲ್ಲ ಎಂಬುದು ಎರಡನ್ನೂ ಬಳಸಿ ನೋಡಿದವರು ಬಲ್ಲರು.

ಅರಸಿನಕ್ಕಿಂತಲೂ ಶುಂಠಿ ನೆಟ್ಟು ಬೆಳೆಸುವುದು ಸುಲಭ. ಅಂಗಳದ ಮೂಲೆಯಲ್ಲಿ ಅಥವಾ ಒಂದು ಚಟ್ಟಿಯಲ್ಲಿ ನೆಟ್ಟು ಬಿಟ್ಟರೆ ವರ್ಷಾನುಗಟ್ಟಲೆ ಮನೆ ಬಳಕೆಗೆ ಬೇಕಾದಷ್ಟು ಗಡ್ಡೆ ಕೊಡುತ್ತಾ ಇರುತ್ತದೆ. ಪೇಟೆಯಲ್ಲಿ ಸಿಗುವ ಶುಂಠಿ ನೂರಾರು ಕಿ.ಮೀ. ದೂರದಿಂದ ಬರುತ್ತದೆ, ಹಣ ಕೊಟ್ಟು ಖರೀದಿಸಬೇಕು ಅನ್ನುವುದಷ್ಟೆ ಕೀಟನಾಶಕ ಸಿಂಪಡಿಸುತ್ತಾರೆ. ಪಾತಿ ಮಾಡಿ ನೆಟ್ಟ ಮೇಲೆ ಕೊಳೆಯದಂತೆ ರಾಸಾಯನಿಕ ಸಿಂಪಡಿಸುತ್ತಾರೆ. ನಾಟಿಯಾದ ಮೇಲೆ ಕೊಳೆಯದಂತೆ, ಕೀಟ ಹಾವಳಿ ತಡೆಯಲು ನಾಶಕಗಳನ್ನು ಸ್ಪ್ರೆ ಮಾಡಿದರೆ ಹೆಚ್ಚು ಇಳುವರಿ ಪಡೆಯಲು ರಸಗೊಬ್ಬರಗಳ ಬಳಕೆ ಇದ್ದೇ ಇದೆ. ಇಷ್ಟು ರಾಸಾಯನಿಕಗಳಲ್ಲಿ ಮಿಂದು ಬಂದ ಶುಂಠಿ ಉಪಯೋಗಿಸಿ ನಾವು ಆರೋಗ್ಯ ಹಾಳುಮಾಡಿಕೊಳ್ಳಬೇಕೇ ಅನ್ನುವುದು ಕೇಳಿಕೊಳ್ಳಬೇಕಾದ ಪ್ರಶ್ನೆ.

ಶುಂಠಿ ಬೆಳೆಯಿರಿ
ಶುಂಠಿ ಬೆಳೆಯಲು ಕಷ್ಟವೇನಿಲ್ಲ. ನಮ್ಮೂರಿನ ನಾಟಿ ಶುಂಠಿಯೇ ಆದರೆ ಉತ್ತಮ. ಹಸಿಯಾದ ಗಡ್ಡೆಯ ಒಂದು ತುಂಡನ್ನು ಮಣ್ಣಿನಲ್ಲಿ ಅಥವಾ ಚಟ್ಟಿಯಲ್ಲಿ ನೆಡಬಹುದು. ಮಣ್ಣಿನಲ್ಲಿ ನೆಡುವುದಾದರೆ ನೀರು ಬಸಿದು ಹೋಗುವಂತೆ ಏರುಮಡಿ ಮಾಡಿ ನೆಡುವುದು ಉತ್ತಮ.ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರ ಚೆನ್ನಾಗಿ ಕೊಟ್ಟಷ್ಟು ಗಡ್ಡೆಗಳು ಚೆನ್ನಾಗಿ ಬೆಳೆಯುತ್ತವೆ. ನೆಟ್ಟು ಏಳೆಂಟು ತಿಂಗಳುಗಳಲ್ಲಿ ಗಡ್ಡೆ ಮನೆಬಳಕೆಗೆ ತೆಗೆಯಬಹುದು. ಎಲೆಗಳು ಒಣಗಿದರೆ ಗಡ್ಡೆ ಬೆಳೆದಿದೆ ಎಂಬುದರ ಸೂಚನೆ. ಮನೆಬಳಕೆಗೆ ಗಡ್ಡೆ ತೆಗೆಯುವಾಗ ಬೇಕಾದಷ್ಟು ಮಾತ್ರ ತೆಗೆಯಿರಿ, ಉಳಿದದ್ದು ಅಲ್ಲೇ ಬೆಳೆಯುತ್ತಿರಲಿ.

Advertisement

ಶುಂಠಿಯ ಮೂಲ
ಶುಂಠಿ ಭಾರತೀಯ ಮೂಲದ್ದು ಅನ್ನುವ ವಾದವಿದೆ. ಪ್ರಾಚೀನಕಾಲದಿಂದಲೂ ಶುಂಠಿಯನ್ನು ನಮ್ಮಲ್ಲಿ ಅಜೀರ್ಣ, ವಾಂತಿ, ತಲೆನೋವು, ಸಂದಿವಾತ ಇತ್ಯಾದಿಗಳ ಶಮನಕ್ಕೆ ಉಪಯೋಗಿಸುತ್ತಿದ್ದೇವೆ. ಆಯುರ್ವೇದ ಶುಂಠಿಯನ್ನು ಔಷಧೀಯ ಆಹಾರವಸ್ತುಗಳಲ್ಲಿ ಒಂದು ಎಂಬುದಾಗಿ ಮನ್ನಿಸಿದೆ. ಇದರ ಇನ್ನೊಂದು ಮುಖವಾಗಿ ಕಳೆದ ಹಲವಾರು ದಶಕಗಳಿಂದ ಪಾಶ್ಚಾತ್ಯ ಜಗತ್ತು ಶುಂಠಿಯನ್ನು ಔಷಧೀಯ ಪೂರಕ ಆಹಾರ ಎಂಬುದಾಗಿ ಗುರುತಿಸಿ
ಅಪ್ಪಿಕೊಂಡಿದೆ. ನಾವು ಊಹಿಸಲು ಕೂಡ ಸಾಧ್ಯವಾಗದಂಥ, ಶುಂಠಿಯನ್ನು ಹೀಗೂ ಉಪಯೋಗಿಸುವುದು ಸಾಧ್ಯವೇ ಎಂದು ಆಶ್ಚರ್ಯ ಹುಟ್ಟಿಸುವಂತಹ ರೀತಿಯಲ್ಲಿ ಅವರು ಅದನ್ನು ಬಳಸುತ್ತಿದ್ದಾರೆ.

ಜಿಂಜರ್‌ ಟೀ, ಜಿಂಜರ್‌ ಬ್ರೆಡ್‌ ಅಂತಹ ಒಂದೆರಡು ಉದಾಹರಣೆಗಳು. ಒಣ ಶುಂಠಿ ಪುಡಿಯನ್ನು ಬೇರೆಬೇರೆ ವಿಧದಲ್ಲಿ, ಬೇರೆ ಬೇರೆ ರೀತಿಯ ಆಹಾರ ವಸ್ತುಗಳಲ್ಲಿ ಕಳೆದ ನೂರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಸಕ್ಕರೆ ಪಾಕದಲ್ಲಿ ಅದ್ದಿಟ್ಟ ಶುಂಠಿ, ಶುಂಠಿ ಉಪ್ಪಿನಕಾಯಿ ಇನ್ನೊಂದೆರಡು. ಶುಂಠಿಯ ಆರೋಗ್ಯ ಲಾಭ ಪಡೆಯುವಕುರಿತಾದ ಸಂಶೋಧನೆ ಮುಂದುವರಿಯುತ್ತಿದೆ. ಅದರಲ್ಲಿರುವ ಮುಖ್ಯ ಅಂಶ ಜಿಂಜರಾಲ್‌ ಎಂಬ ತೈಲ. ಇದನ್ನು ಕೇಂದ್ರೀಕರಿಸಿ ಅಧ್ಯಯನಗಳು ಕೆಳಕಂಡ ದಿಕ್ಕುಗಳಲ್ಲಿ ನಡೆಯುತ್ತಿವೆ.

ಪ್ರಯೋಜನಗಳು
*ಗರ್ಭಧಾರಣೆಯ ಸಮಯದಲ್ಲಿ ಕಂಡುಬರುವ ಮಾರ್ನಿಂಗ್‌ ಸಿಕ್‌ನೆಸ್‌ ಅಥವಾ ವಾಂತಿ ನಿವಾರಣೆಗೆ.
*ಮಾಂಸಖಂಡಗಳ ನೋವು ಮತ್ತು ಬಾವು ತಡೆಗೆ.
*ಸಂಧಿವಾತದ ಬಾವು ಉಪಶಮನಕ್ಕೆ
*ರಕ್ತದಲ್ಲಿ ಸಕ್ಕರೆಯ ಅಂಶದ ಮಟ್ಟ ನಿಯಂತ್ರಣಕ್ಕೆ.
*ಅಜೀರ್ಣ, ಮುಟ್ಟಿನ ನೋವು ತಡೆಗಟ್ಟಲು
*ಶುಂಠಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಹೊಂದಿದ್ದು,
*ಕ್ಯಾನ್ಸರ್‌ಗೆ ಪರ್ಯಾಯ ಚಿಕಿತ್ಸೆಯಾಗಿ

Advertisement

Udayavani is now on Telegram. Click here to join our channel and stay updated with the latest news.

Next