ಮುಂಬೈ/ವಾಷಿಂಗ್ಟನ್: ಮುಂಬೈ ಷೇರು ಮಾರುಕಟ್ಟೆ ಗುರುವಾರ ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ 750 ಅಂಕ ಕಳೆದುಕೊಂಡಿದೆ. ಅಮೆರಿಕದಲ್ಲಿ ಫೆಡರಲ್ ಬ್ಯಾಂಕ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯಿಂದಾಗಿ ನ್ಯೂಯಾರ್ಕ್‌ನ ಡೌ ಜೋನ್ಸ್ ಮಾರುಕಟ್ಟೆ ಯಲ್ಲಿ ಉಂಟಾದ ಹಠಾತ್ ಕುಸಿತದ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಆಗಿದೆ. ಈ ವರ್ಷಾಂತ್ಯದಲ್ಲಿ ಫೆಡ್ ಬಡ್ಡಿ ದರ ಏರಿಕೆ ಮಾಡಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪೆನ್ಸಿಲ್ವೇನಿಯಾದಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, ಫೆಡ್ ತಪ್ಪು ಮಾಡುತ್ತಿದೆ. ಫೆಡ್ ಬಿಗಿಪಟ್ಟು ಹಿಡಿದು ಕೂತಿದೆ. ಅವರ ವರ್ತನೆ ಅತಿಯಾಯಿತು ಎಂದು ಟ್ರಂಪ್ ಹೇಳಿದ ಕೆಲವೇ ಗಂಟೆಗಳಲ್ಲಿ ಡೌ ಜೋನ್ಸ್ 800 ಅಂಕ ಕುಸಿತಕಂಡಿದೆ. ಪರಿ ಣಾ ಮ, ಮುಂಬೈ ಮಾರುಕಟ್ಟೆಯ ಬಹುತೇಕ ಷೇರುಗಳು ಕುಸಿತ ಕಂಡಿವೆ. ದಿನದ ಆರಂಭದಲ್ಲಿ 1 ಸಾವಿರ ಅಂಕ ಕುಸಿತ ಕಂಡಿತು. ದಿನದ ಕೊನೆಯಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಅಂತಿಮವಾಗಿ ದಿನದ ಕೊನೆಯಲ್ಲಿ ಶೇ. 2.19, ಅಂದರೆ 759.74 ಅಂಕ ಕುಸಿದು, 34.001.15 ರಲ್ಲಿ ಕೊನೆಗೊಂಡು, 6 ತಿಂಗಳ ಕನಿಷ್ಠ ಕುಸಿತಕ್ಕೆ ಬಂದಿತ್ತು. ನಿಫ್ಟಿ ಕೂಡ 25.45 ಅಂಕ ಕುಸಿದು, 10,234.65 ಗೆ ತಲುಪಿದೆ. ಐಟಿ ಮತ್ತು ಬ್ಯಾಂಕ್ ಷೇರುಗಳು ಕುಸಿದಿದ್ದೇ ಮಾರುಕಟ್ಟೆಯ ಈ ಸ್ಥಿತಿಗೆ ಕಾರಣ. ಒಟ್ಟು 2.63 ಲಕ್ಷ ಕೋಟಿ ರೂ. ಹೂಡಿಕೆದಾರರ ಹಣ ನಷ್ಟವಾಗಿದೆ. ಇನ್ನೊಂದೆಡೆ ರೂಪಾಯಿ ಚೇತರಿಕೆ ಕಂಡುಕೊಂಡಿದ್ದು, ದಿನದ ಮಧ್ಯದಲ್ಲಿ ಅಮೆರಿಕ ಡಾಲರ್ ವಿರುದ್ಧ 74.48ಕ್ಕೆ ಮೌಲ್ಯ ಕುಸಿದಿತ್ತು. ಆದರೆ ದಿನದ ಕೊನೆಯಲ್ಲಿ 0.08 ರಷ್ಟು ಕುಸಿತ ಕಂಡು, 74.12 ಗೆ ತಲುಪಿದೆ.