Advertisement

ಸೇನಾಧಿಕಾರಿಗಳಿಗೆ ಚೀನ, ಪಾಕ್‌ ಹನಿಟ್ರ್ಯಾಪ್‌ ಗಾಳ!

10:00 AM Aug 04, 2017 | Team Udayavani |

ಫೋನ್‌ ಟ್ರ್ಯಾಪ್‌, ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ

Advertisement

ಹೊಸದಿಲ್ಲಿ: ಸೇನಾಧಿಕಾರಿಗಳಿಗೆ ಸುಂದರ ಮಹಿಳೆಯರನ್ನು ಸಂಪರ್ಕಿಸುವಂತೆ ಮಾಡಿ ಸ್ನೇಹ ಸಂಪಾದಿಸುವುದು. ಅವರನ್ನು ಮಂಚಕ್ಕೂ ಕರೆದು, ಅದೇ ದೌರ್ಬಲ್ಯ ಬಳಸಿ ಬ್ಲ್ಯಾಕ್‌ಮೇಲ್‌ ಮಾಡಿ ಸೇನೆಯ ಅಮೂಲ್ಯ ಮಾಹಿತಿಗಳನ್ನು ಪಡೆಯುವುದು! ಇದು ಭಾರತ ವಿರುದ್ಧ ಪಾಕಿಸ್ಥಾನ, ಚೀನ ಸೇನೆ ನಡೆಸುತ್ತಿರುವ ಹೊಸ ಬಗೆಯ ಸಂಚು. ‘ಹನಿಟ್ರ್ಯಾಪ್‌’ ಎಂದೇ ಹೆಸರಾದ ಈ ಸಂಚಿಗೆ ಸಿಲುಕಿ ಅಮೂಲ್ಯ ಸೇನಾ ಮಾಹಿತಿಗಳು ಶತ್ರುರಾಷ್ಟ್ರಗಳ ಪಾಲಾಗದಂತೆ, ಎಚ್ಚರಿಕೆಯಿಂದ ಇರುವಂತೆ ಗುಪ್ತಚರ ಪಡೆಗಳು ಸೇನಾಧಿಕಾರಿಗಳಿಗೆ ಕಟು ಎಚ್ಚರಿಕೆಯನ್ನು ನೀಡಿವೆ. ಅಲ್ಲದೇ ದೇಶದ ಸಶಸ್ತ್ರ ಪಡೆಗಳಿಗೆ ಈ ಬಗ್ಗೆ ಸಂದೇಶ ರವಾನಿಸಲಾಗಿದ್ದು, ಶತ್ರುಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಇಂಡಿಯಾ ಟುಡೇ ವರದಿ ಪ್ರಕಾರ, ಚೀನ ಪಾಕಿಸ್ಥಾನಗಳು ತಮ್ಮಲ್ಲಿನ ಸುಂದರ ಮಹಿಳೆಯರನ್ನು ಈ ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಉರ್ದು, ಇಂಗ್ಲಿಷ್‌ ನಿರರ್ಗಳವಾಗಿ ಮಾತನಾಡುವ ಇವರು, ಸೇನಾಧಿಕಾರಿಗಳನ್ನು ಬಲೆಗೆ ಕೆಡವಿಕೊಳ್ಳುತ್ತಾರೆ. 

ಸೇನಾ ಮೇಜರ್‌, ಯೋಧ ಇಬ್ಬರು ಉಗ್ರರ ಹತ್ಯೆ: ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನೆಯ ಮೇಜರ್‌ ಒಬ್ಬರು, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಅಲ್ಲದೇ ಇಬ್ಬರು ಹಿಜ್ಬುಲ್‌ ಉಗ್ರರನ್ನು ಹತ್ಯೆಗೈಯಲಾಗಿದೆ.  ಕಳೆದ ಮೇನಲ್ಲಿ ಬ್ಯಾಂಕ್‌ ನಗದು ವಾಹನದ ಮೇಲೆ ದಾಳಿ ಮಾಡಿದ್ದ ಇಬ್ಬರು ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಕುಲ್ಗಾಂನ ಗೋಪಾಲ ಪೊರಾ ಗ್ರಾಮದಲ್ಲಿ ಉಗ್ರರ ಖಚಿತ ಇರುವಿಕೆಯ ಮಾಹಿತಿ ಲಭ್ಯವಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ  ಕಾದಾಟದಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ.

ಇನ್ನು ಶೋಪಿಯಾನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೇನಾ ಮೇಜರ್‌ ಮತ್ತು ಯೋಧರೊಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಗುಂಡಿನ ಕಾಳಗ ನಡೆದಿದೆ.

ಟ್ರ್ಯಾಪ್‌ ಹೇಗೆ ಮಾಡ್ತಾರೆ?
ಹನಿಟ್ರ್ಯಾಪ್‌ಗೆ ಕೆಡವಲು ವಿದೇಶಿ ಗುಪ್ತಚರ ಸಂಸ್ಥೆಗಳು ಭಾರತೀಯ ಸೇನಾಧಿಕಾರಿಗಳ ಫೋನ್‌ ಟ್ರ್ಯಾಪ್‌ ಮಾಡುತ್ತಾರಂತೆ. ಅವರು ಸಂಚರಿಸುವ ಸ್ಥಳದ ಬಗ್ಗೆ ನಿಗಾವಹಿಸಿ ಮಹಿಳೆಯರು ಸಂಪರ್ಕಿಸುವಂತೆ ಮಾಡುತ್ತಾರಂತೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರನ್ನೇ ಗುರಿಯಾಗಿಸಿ ಆ ಮೂಲಕವೂ ಮಹಿಳೆಯರ ಸಂಪರ್ಕ ಬೆಳಸುವಂತೆ ಮಾಡುತ್ತಾರೆ. ಮೊದಲ ಭೇಟಿಗೇ ಲೈಂಗಿಕ ಸಂಪರ್ಕಕ್ಕೆ ಕರೆಯುವ ಮಹಿಳೆಯರು, ಅದರ ಫೋಟೋ, ವಿಡಿಯೋಗಳನ್ನೂ ಗುಪ್ತವಾಗಿ ತೆಗೆದು ಬಳಿಕ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ.

Advertisement

‘ನೀವು ನನ್ನ ಹಿಡಿದಿದ್ದೀರಿ, ಅಭಿನಂದನೆಗಳು’
ಲಷ್ಕರ್‌-ಎ -ತಯ್ಯಳಾದ ಉಗ್ರ ಅಬು ದುಜಾನಾನನ್ನು ಭದ್ರತಾ ಪಡೆಗಳು ಮಂಗಳವಾರ ಸುತ್ತುವರಿದಿದ್ದಾಗ ಆತನಿಗೆ ಸೇನಾಧಿಕಾರಿಯೊಬ್ಬರು ಕರೆ ಮಾಡಿದ್ದು, ಶರಣಾಗುವಂತೆ ಹೇಳಿದ್ದರು. ಆದರೆ ಉಗ್ರ ಅಬು ಇದಕ್ಕೆ ನಿರಾಕರಿಸಿದ್ದು, ‘ನೀವು ನನ್ನ ಹಿಡಿದಿದ್ದೀರಿ, ಅಭಿನಂದನೆಗಳು’ ಎಂದು ಹೇಳಿದ್ದ. 9 ನಿಮಿಷ ಫೋನ್‌ ಸಂಭಾಷಣೆ ಇದೀಗ ಬಿಡುಗಡೆಯಾಗಿದ್ದು ಈ ವೇಳೆ ಆತ ‘ಕೆಲವು ಬಾರಿ ನಾನು ಮುಂದಿದ್ದೆ, ಕೆಲವು ಬಾರಿ ನೀವು ಮುಂದಿದ್ದೀರಿ. ಇಂದು ನೀವು ನನ್ನ ಹಿಡಿದಿದ್ದೀರಿ ಅಭಿನಂದನೆಗಳು ಎಂದಿದ್ದ. ಇದೇ ವೇಳೆ ಶರಣಾಗುವಂತೆ, ನಿನ್ನ ತಂದೆ -ತಾಯಿ ಬಗ್ಗೆ ಚಿಂತೆ ಮಾಡು ಎಂದಿದ್ದಕ್ಕೆ ಆತ ‘ನಾನು ಅವರನ್ನು ಬಿಟ್ಟು ಹೊರಟಾಗಲೇ ಅವರು ನನ್ನ ಪಾಲಿಗೆ ಸತ್ತು ಹೋಗಿದ್ದಾರೆ’ ಎಂದಿದ್ದ. ಅಚ್ಚರಿ ಎಂದರೆ ಫೋನ್‌ ಕರೆ ವೇಳೆ ಆತ ಸೇನಾಧಿಕಾರಿಗೇ ಹೇಗಿದ್ದೀರಿ ಎಂದು ಕೇಳಿರುವುದು ಬಯಲಾಗಿದೆ. ಕೊನೆಯಲ್ಲಿ ಆತ ಶರಣಾಗತಿಗೆ ಒಪ್ಪದೇ ಕರೆ ಕಟ್‌ ಮಾಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next