Advertisement

Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್‌ ಶಾ

09:02 PM Nov 07, 2024 | Team Udayavani |

ಹೊಸದಿಲ್ಲಿ: ಭಯೋತ್ಪಾದನೆ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಮತ್ತು ಕಾರ್ಯತಂತ್ರ ಬಿಡುಗಡೆ ಮಾಡಲಿದೆ. ಅದು ಇಡೀ ಭಯೋತ್ಪಾದನಾ ವ್ಯವಸ್ಥೆ ನಾಶಮಾಡಲು ಸಹಾಯ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಯೋಜಿಸಿದ್ದ ʼಭಯೋತ್ಪಾದನಾ ವಿರೋಧಿ ಸಮಾವೇಶ 2024’ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅಮಿತ್ ಶಾ, ಭಯೋತ್ಪಾದಕ ದಾಳಿಗಳು ಮತ್ತು ಅವರ ಪಿತೂರಿಗಳನ್ನು ಎದುರಿಸಬೇಕಾದರೆ, ನಮ್ಮ ಯುವ ಅಧಿಕಾರಿಗಳು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು, ಮುಂದಿನ ದಿನಗಳಲ್ಲಿ ನಾವು ಅದನ್ನು ತರಬೇತಿಯ ಪ್ರಮುಖ ಭಾಗವಾಗಿ ಮಾಡುತ್ತೇವೆ ಎಂದಿದ್ದಾರೆ.

ಮಾದರಿ ಎಟಿಎಸ್‌, ಎಸ್‌ಟಿಎಫ್‌ ರಚನೆ: 

ಭಯೋತ್ಪಾದನೆ, ಭಯೋತ್ಪಾದಕರು ಮತ್ತು ಭಯೋತ್ಪಾದಕ ವ್ಯವಸ್ಥೆಯ ವಿರುದ್ಧದ ಹೋರಾಟ ಎಲ್ಲಾ ರಾಜ್ಯಗಳು ಮುನ್ನಡೆಸಬೇಕಾಗಿರುವುದರಿಂದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರವು ಶೀಘ್ರದಲ್ಲೇ ಅನಾವರಣವಾಗಲಿದೆ. ಅದಕ್ಕಾಗಿ ಸರಕಾರವು ಮಾದರಿ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್‌) ಹಾಗೂ ಮಾದರಿ ವಿಶೇಷ ಟಾಸ್ಕ್‌ ಫೋರ್ಸ್‌ (ಎಸ್‌ಟಿಎಫ್‌) ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಿ ಭಯೋತ್ಪಾದನೆ ವಿರುದ್ಧ  ಒಟ್ಟಾಗಿ ಹೋರಾಡಲು ವೇದಿಕೆ ರೂಪಿಸಲಾಗುವುದು. ಗಡಿ ರಹಿತ ಮತ್ತು ಅದೃಶ್ಯ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಅವುಗಳ ಪರಿಣಾಮಕಾರಿಯಾಗಿ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಿ ಹೇಳಿದ್ದಾರೆ.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರ ಶೂನ್ಯ ಸಹಿಷ್ಣುತೆಯ ನೀತಿ ಈಗ ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿವೆ.  ಭಯೋತ್ಪಾದನೆ ವಿರುದ್ಧ ಭಾರತ ಸರ್ಕಾರವು ದೃಢವಾದ ಕಾರ್ಯತಂತ್ರ ಅನುಸರಿಸಿದೆ. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಎಂಬ ಮೋದಿಯವರ ಘೋಷಣೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವು ಭಯೋತ್ಪಾದನೆಯ ವಿರುದ್ಧ ಹೋರಾಡಲು ಪ್ರಬಲ ವ್ಯವಸ್ಥೆ ರಚಿಸಿದೆ ಎಂದು ಶಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next