ಬುಡಾಪೆಸ್ಟ್: ವಿಶ್ವ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಇತಿಹಾಸ ಬರೆದಿದ್ದಾರೆ. 40 ವರ್ಷಗಳ ವಿಶ್ವ ಅತ್ಲೆಟಿಕ್ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟುವೊಬ್ಬರು ಚಿನ್ನದ ಪಕ ಗೆದ್ದ ಸಾಧನೆ ಮಾಡಿದ್ದಾರೆ. ಭಾರತೀಯ ಕಾಲಮಾನದಂತೆ ರವಿವಾರ ತಡರಾತ್ರಿ ನಡೆದ ಜಾವೆಲಿನ್ ಫೈನಲ್ ನಲ್ಲಿ ನೀರಜ್ ಚೋಪ್ರಾ ಅವರು 88.17 ಮೀಟರ್ ದೂರ ಈಟ ಎಸೆದು ಸ್ವರ್ಣಕ್ಕೆ ಕೊರಳೊಡ್ಡಿದರು.
ಫೈನಲ್ ಪಂದ್ಯದಲ್ಲಿ ಭಾರತದ ನೀರಜ್ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅರ್ಷದ್ ನದೀಂ ಅವರು 87.82 ಮೀಟರ್ ಎಸೆದು ದ್ವಿತೀಯ ಸ್ಥಾನ ಪಡೆದರು. ಆದರೆ ಬಹುಮಾನದ ಮೊತ್ತದಲ್ಲಿ ಇವರಿಬ್ಬರ ನಡುವೆ ಬಹಳ ಅಂತರವಿದೆ.
ಇದನ್ನೂ ಓದಿ:Tollywood: ‘ಸಲಾರ್’ ಟ್ರೇಲರ್, ‘ಪುಷ್ಪ-2’ ರಿಲೀಸ್ ಡೇಟ್.. ಈ ವಾರದ ಪ್ರಮುಖ ಅಪ್ಡೇಟ್ಸ್
ನೀರಜ್ ಚೋಪ್ರಾ ಅವರು ಜಾವೆಲಿನ್ ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕಾಗಿ ಅಂದಾಜು 58 ಲಕ್ಷ ($ 70,000) ಹಣವನ್ನು ಬಹುಮಾನದ ರೂಪದಲ್ಲಿ ಪಡೆದರೆ, ಬೆಳ್ಳಿ ಪದಕ ಗೆದ್ದ ಅರ್ಷದ್ ನದೀಮ್ ಅಂದಾಜು 29 ಲಕ್ಷ ($ 35,000) ಬಹುಮಾನ ಮೊತ್ತ ಪಡೆದರು.
12 ಜನರಿದ್ದ ಫೈನಲ್ ನಲ್ಲಿ ನೀರಜ್ ಮಾತ್ರವಲ್ಲದೆ ಮತ್ತಿಬ್ಬರು ಭಾರತೀಯರು ಸ್ಪರ್ಧಿಸಿದ್ದರು. ಕಿಶೋರ್ ಜೆನಾ ಅವರು 84.77 ಮೀಟರ್ ಮತ್ತು ಡಿಪಿ ಮನು 84.14 ಮೀಟರ್ ಎಸೆದು ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದರು.
“ಕಿಶೋರ್ ಜೆನಾ ಅವರ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ. ಅವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಅವರು ಯುರೋಪಿಯನ್ನರೊಂದಿಗೆ ಸ್ಪರ್ಧಿಸಿದ ರೀತಿ ನನಗೆ ಇನ್ನೂ ಸಂತೋಷವನ್ನು ನೀಡಿತು. ಇದು ಕಡಿಮೆ ಸಾಧನೆಯಲ್ಲ”ಎಂದು ನೀರಜ್ ಚೋಪ್ರಾ ಭಾರತೀಯ ಸಹ ಆಟಗಾರನ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.