Advertisement
ಮಧ್ಯಪ್ರದೇಶ ಗುಣಾ, ಮೊರೇನಾ ಮತ್ತು ದಮೋಹ್‌ನಲ್ಲಿ ಬುಧವಾರ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿದ ಅವರು ನಿತೀಶ್ ಹೆಸರೆಲ್ಲದೆ ಮಹಿಳೆಯರ ವಿರುದ್ಧ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
Related Articles
ಸಮಾನ ಶ್ರೇಣಿ, ಸಮಾನ ಪಿಂಚಣಿಗೆ ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ 500 ಕೋಟಿ ರೂ. ನೀಡಿತ್ತು. ಎನ್‌ಡಿಎ ಆಡಳಿತದ ಅವಧಿಯಲ್ಲಿ 70 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಮೊರೇನಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
Advertisement
“ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಮಾನ ಶ್ರೇಣಿ; ಸಮಾನ ಪಿಂಚಣಿ (ಒಆರ್‌ಒಪಿ) ಯೋಜನೆ ಜಾರಿಗೆ 500 ಕೋಟಿ ರೂ. ನೀಡಲಾಗಿತ್ತು. ಅದು ಅತ್ಯಂತ ಕನಿಷ್ಠವೆಂದು ಗೊತ್ತಿದ್ದರೂ ಇಂಥ ನಿರ್ಧಾರ ಕೈಗೊಂಡಿತ್ತು. 2014ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಆ ಮೊತ್ತವನ್ನು 70 ಸಾವಿರ ಕೋಟಿ ರೂ.ಗೆ ಏರಿಕೆ ಮಾಡಲಾಯಿತು. ಈ ಮೂಲಕ ನಿವೃತ್ತ ಯೋಧರಿಗೆ ಅನುಕೂಲ ಮಾಡಿದ್ದೇವೆ’ ಎಂದರು. ಕಾಂಗ್ರೆಸ್ ಯಾವತ್ತೂ ದೇಶದ ಭದ್ರತೆಯ ಜತೆಗೆ ಆಟವಾಡಿತ್ತು ಎಂದು ದೂರಿದ ಪ್ರಧಾನಿ, ದೇಶದ ಮೊತ್ತ ಮೊದಲ ಹಗರಣ ರಕ್ಷಣಾ ಪಡೆಗಳಿಗೆ ಸಂಬಂಧಿಸಿದ್ದೇ ಆಗಿತ್ತು ಎಂದು ಹೇಳಿದ್ದಾರೆ.
ರಿಮೋಟ್ ಕಂಟ್ರೋಲ್:ಕಾಂಗ್ರೆಸ್‌ಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ಆದರೆ, ಅವರನ್ನು ರಿಮೋಟ್‌ನಿಂದ ನಿಯಂತ್ರಿಸಲಾಗುತ್ತದೆ ಎಂದು ಪ್ರಧಾನಿ ಆರೋಪಿಸಿದರು. “ದೂರದಿಂದ ಅವರು ನಿಯಂತ್ರಿಸಲ್ಪಡುವಾಗ ಸನಾತನ ಧರ್ಮದ ವಿರುದ್ಧ ಮಾತನಾಡುತ್ತಾರೆ. ಮಂಗಳವಾರ ಅವರು ಬಿಜೆಪಿಯಲ್ಲಿರುವ ಐವರು ಪಾಂಡವರ ಬಗ್ಗೆ ಮಾತನಾಡಿದ್ದರು. ಪಾಂಡವರ ರೀತಿಯಲ್ಲಿಯೇ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ಹೆಮ್ಮೆಯಾಗುತ್ತಿದೆ’ ಎಂದರು. ರಾಹುಲ್, ಪ್ರಿಯಾಂಕಾ ಪ್ರಚಾರ
ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಚಾರ ನಡೆಸಿ ಬಿಜೆಪಿ ಆದಿವಾಸಿಗಳನ್ನು ವಂಚಿಸಲು ಪ್ರಯತ್ನಿಸುತ್ತಿದೆ. ದೇಶದ ಮುಖ್ಯ ವಾಹಿನಿಯಲ್ಲಿ ಸೇರಲು ಅವರಿಗೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ದೂರಿದರು. ಆದಿವಾಸಿಗಳನ್ನು ವನವಾಸಿಗಳು ಎಂದು ಹೇಳಿ ಅವಮಾನ ಮಾಡುತ್ತಿದೆ. ಆದಿವಾಸಿ ಮತ್ತು ವನವಾಸಿ ಎಂಬ ಪದಗಳ ನಡುವೆ ಭಾರೀ ವ್ಯತ್ಯಾಸವಿದೆ ಎಂದರು. ಬಿಜೆಪಿ ನಾಯಕರು ಆದಿವಾಸಿಗಳು ಇಂಗ್ಲಿಷ್ ಕಲಿಯುವುದು ಬೇಡ ಎನ್ನುತ್ತಾರೆ. ಆದರೆ, ನಾವು ಛತ್ತೀಸ್‌ಗಢದ ಸ್ಥಳೀಯ ಭಾಷೆ, ಹಿಂದಿ ಮತ್ತು ಇಂಗ್ಲಿಷ್ ಕಲಿಯಲು ಒತ್ತಾಯಿಸುತ್ತೇವೆ ಎಂದರು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ದೇಶದ ಯುವ ಜನರಿಗೆ ಉದ್ಯೋಗಕ್ಕಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕಾಂಗ್ರೆಸ್ ಸ್ಥಾಪಿಸಿತು. ಆದರೆ, ಬಿಜೆಪಿ ಅದನ್ನು ಕೈಗಾರಿಕೋದ್ಯಮಿಗಳಿಗೆ ನೀಡುತ್ತಿದೆ ಎಂದು ದೂರಿದರು. ಕ್ಷಮೆ ಕೋರಿದ ಬಿಹಾರ ಸಿಎಂ
ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಕ್ಕೆ ಗುರಿಯಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅಲ್ಲಿನ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಕ್ಷಮೆ ಯಾಚಿಸಿದ್ದಾರೆ. ಜಾತಿ ಗಣತಿಯ ವಿವರಗಳನ್ನು ವಿಧಾನಮಂಡಲದಲ್ಲಿ ಮಂಡಿಸುವ ವೇಳೆಗೆ ಅವರು ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಪ್ರಧಾನಿ ಮೋದಿ, ಬಿಜೆಪಿಯ ನಾಯಕರು, ಎಂಐಎಂ ನಾಯಕ ಅಸಾಸುದ್ದೀನ್ ಒವೈಸಿ ಸೇರಿದಂತೆ ಪ್ರಮುಖರು ಅವರ ಮಾತುಗಳನ್ನು ಕಟುವಾಗಿ ಟೀಕಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಬಿಹಾರ ವಿಧಾನಸಭೆ ಸ್ಪೀಕರ್ ಅವರಿಗೆ ಸೂಚನೆ ನೀಡಿ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು. ವಿಧಾನಸಭೆಗೆ ನಿತೀಶ್ ಆಗಮಿಸಿದಾಗ ಪ್ರತಿಪಕ್ಷ ಬಿಜೆಪಿ ಶಾಸಕರು ಅವರ ವಿರುದ್ಧ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಪಾಟ್ನಾದ ಸ್ಥಳೀಯ ಕೋರ್ಟೊಂದರಲ್ಲಿ ಸಿಎಂ ವಿರುದ್ಧ ಕೇಸು ಕೂಡ ದಾಖಲಾಗಿದೆ.