ಬೆಂಗಳೂರು: ರಾಜ್ಯದ 11 ಸಾವಿರ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಮುಖ್ಯಮಂತ್ರಿಗಳು ಮೌಖೀಕವಾಗಿ ಆದೇಶಿಸಿದ್ದು, ಪಾಲಿಕೆಯಲ್ಲಿರುವ 30 ಸಾವಿರ ಕಾರ್ಮಿಕರ ಪೈಕಿ ಯಾರನ್ನು ಕಾಯಂಗೊಳಿಸಬೇಕು ಎಂಬ ಇಕ್ಕಟ್ಟಿಗೆ ಪಾಲಿಕೆ ಸಿಲುಕಿದೆ. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಇತ್ತೀಚೆಗೆ ರಾಜ್ಯದಾದ್ಯಂತ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 11 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಆದೇಶಿಸಿದ್ದರು.
ಪೌರಕಾರ್ಮಿಕರನ್ನು ಯಾವ ಆಧಾರದ ಮೇಲೆ ಕಾಯಂಗೊಳಿಸಬೇಕು, ಯಾವೆಲ್ಲ ಅರ್ಹತೆಗಳನ್ನು ಪರಿಗಣಿಸಬೇಕು ಮತ್ತು ಕಾಯಂಗೊಳಿಸಲು ಅನುಸರಿಸಬೇಕಾದ ಮಾನದಂಡಗಳ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಹೊರಬಿದ್ದಿಲ್ಲ. ಅದರ ಹಿನ್ನೆಲೆಯಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ಕಾಯಂ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಇದರೊಂದಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕಾನೂನಿನ ತೊಡಕು ಸಹ ಎದುರಾಗಿದ್ದು, ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಅವಕಾಶವಿಲ್ಲ. ಹೀಗಾಗಿ ನಿಯಮಗಳಿಗೆ ತಿದ್ದುಪಡಿ ತರಬೇಕಿರುವುದರಿಂದ ಗುತ್ತಿಗೆ ಪೌರಕಾರ್ಮಿಕರ ಕಾಯಂಗೊಳಿಸುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.
ಕಳೆದೊಂದು ವರ್ಷದ ಹಿಂದೆ ಬಿಬಿಎಂಪಿಯಲ್ಲಿ 18-20 ಸಾವಿರ ಗುತ್ತಿಗೆ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಸರ್ಕಾರ ಬಿಸಿಯೂಟ, ಕನಿಷ್ಠ ವೇತನ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಖ್ಯೆ 30ಸಾವಿರಕ್ಕೆ ಹೆಚ್ಚಿದೆ. ಅದರ ಹಿನ್ನೆಲೆಯಲ್ಲಿ ಕಾಯಂಗೊಳಿಸುವ ವೇಳೆ ಯಾವ ರೀತಿಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬ ಅಂಶ ಇನ್ನೂ ಸ್ಪಷ್ಟವಾಗಿಲ್ಲ.
ಮುಖ್ಯಮಂತ್ರಿಗಳು ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಮೌಖೀಕವಾಗಿ ಆದೇಶಿಸಿದ್ದಾರೆ. ಆದರೆ, ಕಾರ್ಮಿಕರ ಕಾಯಂಗೊಳಿಸುವ ವೇಳೆ ಯಾವ ರೀತಿಯ ಮಾನದಂಡಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಮರ್ಪಕವಾಗಿ ಮಾಹಿತಿಯಿಲ್ಲ. ಹೀಗಾಗಿ ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ.
– ಜಿ.ಪದ್ಮಾವತಿ, ಮೇಯರ್
ಸಿಎಂ ನಿರ್ಧಾರಕ್ಕೆ ಸ್ವಾಗತ
ಬೆಂಗಳೂರು: ರಾಜ್ಯದ 11 ಸಾವಿರ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಸ್ವಾಗತಿಸಿದೆ. ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಸಿಎಂ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯವಾಗಿದೆ.
ಅದೇ ರೀತಿ ರಾಜ್ಯದಲ್ಲಿ ಗುತ್ತಿಗೆ ಸೇವೆ ಇರಬಾರದು ಎಂದೂ ಸಿಎಂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಅರಣ್ಯ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಸೇವೆ ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಡಾ. ಕೆ.ಎಸ್ ಶರ್ಮಾ ಕೋರಿದ್ದಾರೆ.