Advertisement

Multi level parking ಇನ್ನೆಷ್ಟು ವರ್ಷ ಬೇಕು? ಬರೀ ಪಾರ್ಕಿಂಗಲ್ಲ, ಶಾಪಿಂಗ್‌ ಮಾಲೂ ಇದೆ!

05:57 PM Sep 22, 2024 | Team Udayavani |

ಹಂಪನಕಟ್ಟೆ:  ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ದಟ್ಟನೆ ಹೆಚ್ಚಾಗುತ್ತಿದ್ದು, ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶದ ಕೊರತೆ ಸಂಕೀರ್ಣ ಸಮಸ್ಯೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಶಕಗಳ ಹಿಂದೆ ಮೊಳಕೆಯೊಡೆದದ್ದೇ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ (ಎಂಎಲ್‌ಸಿಪಿ).

Advertisement

ಹಳೆ ಬಸ್‌ ನಿಲ್ದಾಣದ ಒಟ್ಟು 1.55 ಎಕರೆ ಪ್ರದೇಶದಲ್ಲಿ 95 ಕೋ.ರೂ. ವೆಚ್ಚದಲ್ಲಿ  ನಿರ್ಮಾಣವಾಗಲಿರುವ ಈ ಯೋಜನೆಯಲ್ಲಿರುವುದು ಬರೀ ವಾಹನಗಳ ಪಾರ್ಕಿಂಗ್‌ ಮಾತ್ರ  ಅಲ್ಲ, ಬದಲಾಗಿ ಶಾಪಿಂಗ್‌ ಮಾಲ್‌, ಮಲ್ಪಿಪ್ಲೆಕ್ಸ್‌ಗಳು ಕೂಡ ಬರಲಿವೆ.

ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಯೋಜನೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಳ್ಳುವುದೆಂದು ಆರಂಭದಲ್ಲಿ ಚಿಂತನೆ ನಡೆದಿತ್ತು. ಆದರೆ, ಬಳಿಕ ಅದು ಹಿಂದೆ ಸರಿಯಿತು. ಪ್ರಸ್ತುತ ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಈ ಯೋಜನೆ ಅನುಷ್ಠಾನವಾಗುತ್ತಿದೆ.

ಸಾರ್ವಜನಿಕ-ಖಾಸಗಿ ಪಾಲುದಾರಿಕೆ

2021ರ ನ. 1ರಂದು ಭೂಮಿ ಪೂಜೆ ನೆರವೇರಿಸಲಾದ ಯೋಜನೆಯನ್ನು 36 ತಿಂಗಳಲ್ಲಿ ಮುಗಿಸಲು ಒಪ್ಪಂದವಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅದಿನ್ನೂ ಪಂಚಾಂಗದ ಹಂತದಲ್ಲೇ ಉಳಿದಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 30 ವರ್ಷಗಳ ನಿರ್ವಹಣೆಯನ್ನೂ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥಯೇ ಮಾಡುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ.

Advertisement

ಯೋಜನೆ ಅನುಷ್ಠಾನಗೊಳ್ಳುತ್ತಿರುವ ಸ್ಥಳವು ಕೇಂದ್ರ ಮಾರುಕಟ್ಟೆ, ಕೇಂದ್ರ ರೈಲು ನಿಲ್ದಾಣ, ಬಸ್‌ ನಿಲ್ದಾಣ, ಸಿಟಿ ಸೆಂಟರ್‌ ಮಾಲ್‌, ಜಿಲ್ಲಾ ವೆನಾÉಕ್‌ ಆಸ್ಪತ್ರೆ, ಶರವು ದೇವಸ್ಥಾನ, ಮಿಲಾಗ್ರಿಸ್‌ ಚರ್ಚ್‌, ಬಾವುಟಗುಡ್ಡೆ, ಮಸೀದಿ, ಅಲೋಶಿಯಸ್‌ ಚಾಪೆಲ್‌ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರ, ಶೈಕ್ಷಣಿಕ ಕೇಂದ್ರಗಳಿಗೆ ಸನಿಹದಲ್ಲಿಯೂ ಇದೆ. ಹಂಪನಕಟ್ಟೆ ಪ್ರದೇಶದಲ್ಲಿ ವಾಹನ ದಟ್ಟನೆ ಕಡಿಮೆ ಮಾಡುವುದರೊಂದಿಗೆ ಪಾರ್ಕಿಂಗ್‌ ಸಮಸ್ಯೆಯನ್ನು ತಗ್ಗಿಸುವುದು ಯೋಜನೆ ಉದ್ದೇಶ.

3.3 ಕೋ.ರೂ. ಪಾಲಿಕೆಗೆ ಗುತ್ತಿಗೆದಾರರು ಮಹಾನಗರ ಪಾಲಿಕೆ/ ಸ್ಮಾರ್ಟ್‌ ಸಿಟಿಗೆ ವಾರ್ಷಿಕ 3.3 ಕೋ.ರೂ. ಮೊತ್ತ ಪಾವತಿಸಬೇಕು

ಆದಾಯ ಸಂಗ್ರಹ ಹೇಗೆ?

  • ಪಾರ್ಕಿಂಗ್‌ ಶುಲ್ಕ
  • ಜಾಹೀರಾತು ಶುಲ್ಕ
  • ವಾಣಿಜ್ಯ ಕಟ್ಟಡಗಳ ಬಾಡಿಗೆ, ಲೀಸ್‌ನ ಮೊತ್ತ

ಕಟ್ಟಡದ ವೈಶಿಷ್ಟ್ಯಗಳು

  • 1.5 ಲಕ್ಷ ಚ.ಅ. ವಿಸ್ತೀರ್ಣದ ಕಟ್ಟಡ
  • ತಳ ಮಹಡಿ, ಮೇಲ್ಮಹಡಿ, ನೆಲ ಮಹಡಿ ಪಾರ್ಕಿಂಗ್‌ಗೆ ಮೀಸಲು; ಟೆರೇಸ್‌ನಲ್ಲಿಯೂ ಪಾರ್ಕಿಂಗ್‌ಗೆ ಅವಕಾಶ
  • ಮೂರು ಮಹಡಿಗಳು ವಾಣಿಜ್ಯ ಚಟುವಟಿಕೆಗಳಿಗೆ ಮೀಸಲು
  • 400 ಕಾರುಗಳು 200 ದ್ವಿಚಕ್ರವಾಹನ ಪಾರ್ಕಿಂಗ್‌ ಮಾಡಲು ಸ್ಥಳಾವಕಾಶ
  • ಸ್ವಯಂಚಾಲಿತ ಮತ್ತು ಮಾನವ ಸಹಾಯದ ಪಾರ್ಕಿಂಗ್‌ ವ್ಯವಸ್ಥೆ
  • ವಾಣಿಜ್ಯ ಸಂಕೀರ್ಣ ಮತ್ತು ಕಾರ್‌ ಪಾರ್ಕಿಂಗ್‌ ಗೆ ಪ್ರತ್ಯೇಕ ಪ್ರವೇಶ
  • ಪಾರ್ಕಿಂಗ್‌ಗೆ ಕೆ.ಎಸ್‌.ರಾವ್‌ ರಸ್ತೆಯಲ್ಲಿ ಆಗಮನ, ಬಾವುಟಗುಡ್ಡೆ ರಸ್ತೆಯಲ್ಲಿ ನಿರ್ಗಮನ ವ್ಯವಸ್ಥೆ
  • ಟಾಯ್ಲೆಟ್‌ ವ್ಯವಸ್ಥೆ ಮತ್ತು ಪ್ರವಾಸಿ ಮಾಹಿತಿ ಕೇಂದ್ರ ರಚನೆ
  • ʼಮಂಗಳೂರು ಒನ್‌’ ಮೊಬೈಲ್‌ ಆ್ಯಪ್‌ ಮೂಲಕ ಪಾರ್ಕಿಂಗ್‌ ಸ್ಥಳ ಲಭ್ಯತೆಯ ಮಾಹಿತಿ

ವಾಣಿಜ್ಯ ಸಂಕೀರ್ಣದಲ್ಲಿ ಏನೇನು?

ಶಾಪಿಂಗ್‌ ಮಾಲ್‌, ಸಿನೆಮಾ/ ಮಲ್ಟಿಪ್ಲೆಕ್ಸ್‌, ಫುಡ್‌ಕೋರ್ಟ್‌, ಹೊಟೇಲ್‌- ರೆಸ್ಟೋರೆಂಟ್‌, ಹೈಪರ್‌ ಮಾರ್ಟ್‌, ಬ್ಯಾಂಕ್‌- ಎಟಿಎಂ, ಕಚೇರಿ ಸ್ಥಳ, ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕಟ್ಟಡದಲ್ಲಿ  ಮಾಡಲು ಅವಕಾಶವಿದೆ.

ಇತರ ಸ್ಮಾರ್ಟ್‌ ಸಿಟಿಗಳಲ್ಲೂ ಅನುಷ್ಠಾನ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಬರುವ ದೇಶದ ಪ್ರಮುಖ ನಗರಗಳಾದ ಇಂದೋರ್‌, ನಾಗಪುರ, ವಡೋದರಾ, ಉಜ್ಜೈನಿ, ಬೆಳಗಾವಿಯಲ್ಲೂ ಪಾರ್ಕಿಂಗ್‌ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next