ಸದಾ ಒಂದಿಲ್ಲೊಂದು ವಿಚಾರದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿ ಇರುತ್ತಿದೆ. ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಯಿಂದಾಗಿ ಐಟಿ ಪಾರ್ಕ್‌ಗಳು, ಮನೆಗಳು, ರಸ್ತೆಗಳಿಗೆಲ್ಲ ನೀರು ತುಂಬಿ, ಬೆಂಗಳೂರಿನ ಮಾನ ಹಾಳಾಗಿತ್ತು. ಈಗ ರಸ್ತೆ ಗುಂಡಿಗಳ ವಿಚಾರದಲ್ಲಿಯೂ ಉದ್ಯಾನನಗರಿಯ ಮಾನ ಹೋಗುತ್ತಿದೆ. ಈ ವರ್ಷಾರಂಭದಿಂದ ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 11 ಮಂದಿ ಗುಂಡಿಗಳ ಕಾರಣದಿಂದಾಗಿಯೇ ಮೃತರಾಗಿದ್ದಾರೆ ಎಂದರೆ ಎಂಥ ನಾಚಿಕೆಗೇಡು.
ರವಿವಾರವೂ ನಗರದ ಯಲಹಂಕದಲ್ಲಿ ಅಪಘಾತವೊಂದು ಸಂಭವಿಸಿ ಬೈಕ್ ಸವಾರರೊಬ್ಬರು ಬಲಿಯಾಗಿದ್ದಾರೆ. ಇದಕ್ಕೂ ರಸ್ತೆ ಗುಂಡಿಯೇ ಕಾರಣ. ಗುಂಡಿ ತಪ್ಪಿಸಲು ಹೋಗಿ, ಈತ ಮೃತಪಟ್ಟಿದ್ದಾನೆ. ಇದಾದ ಮೇಲೆ ಸಾವಿಗೆ ಕಾರಣವಾದ ಗುಂಡಿಯನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿದ್ದಾರೆ. ಇಂಥದ್ದೇ ಮತ್ತೂಂದು ಘಟನೆ ಸುಜಾತಾ ಥಿಯೇಟರ್ ಬಸ್ ನಿಲ್ದಾಣದ ಮುಂದೆಯೂ ನಡೆದಿತ್ತು. ಗುಂಡಿ ತಪ್ಪಿಸಲು ಹೋಗಿ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿ, ಜತೆಯಲ್ಲಿದ್ದ ಮತ್ತೂಬ್ಬ ಮಹಿಳೆ ಗಾಯಗೊಂಡಿದ್ದರು. ವರ್ಷಾರಂಭದಿಂದಲೂ ಬೆಂಗಳೂರಿನಲ್ಲಿ ಈ ಗುಂಡಿಗಳ ಕಾಟ ಮುಂದುವರಿದೇ ಇದೆ. ಅದರಲ್ಲೂ ಮಳೆ ಹೆಚ್ಚಾದ ಕಾರಣದಿಂದಾಗಿ ಚೆನ್ನಾಗಿದ್ದ ರಸ್ತೆಗಳೂ ಹಾಳಾಗಿ ಹೋಗಿವೆ. ಆದರೆ ಗುಂಡಿ ಬಿದ್ದ ತತ್‌ಕ್ಷಣ ಅತ್ತ ಗಮನಹರಿಸದೇ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಈ ರೀತಿಯ ಸಮಸ್ಯೆಗಳು ಆಗುತ್ತಿವೆ ಎಂಬ ಆರೋಪಗಳು ಸಾರ್ವಜನಿಕರ ಕಡೆಯಿಂದಲೇ ಕೇಳಿಬರುತ್ತಲೇ ಇದೆ.
ಈ ಸಮಸ್ಯೆ ಕೇವಲ ವಿಪಕ್ಷಗಳ ಟೀಕಾ ಮಾತುಗಳು ಮತ್ತು ಸಾರ್ವಜನಿಕರ ಸಿಟ್ಟಿಗಷ್ಟೇ ಸೀಮಿತವಾಗಿಲ್ಲ. ರಾಜ್ಯ ಹೈಕೋರ್ಟ್ ಕೂಡ ಈ ಬಗ್ಗೆ ಸಿಟ್ಟಾಗಿದೆ. ಇನ್ನೂ ಯಾವಾಗ ಗುಂಡಿ ಮುಚ್ಚುತ್ತೀರಿ ಎಂದು ನೇರವಾಗಿಯೇ ಪ್ರಶ್ನಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಕೂಡ ಗುಂಡಿ ಮುಚ್ಚಲು ಒಂದಷ್ಟು ದಿನಗಳ ಗಡುವು ಪಡೆದುಕೊಂಡು ಹೊರಬರುತ್ತಿದೆ. ಬೆಂಗಳೂರಿನ ಗುಂಡಿ ಅವಾಂತರದ ಬಗ್ಗೆ ಬಿಬಿಎಂಪಿಯೇ ನೀಡಿರುವ ಮಾಹಿತಿ ಆಘಾತಕಾರಿಯಾಗಿದೆ. ಅಂದರೆ ಉದ್ಯಾನಗರಿಯಲ್ಲಿದ್ದ ಒಟ್ಟಾರೆ ಗುಂಡಿಗಳ ಸಂಖ್ಯೆ 30, 572. ಇದರಲ್ಲಿ ಬಿಬಿಎಂಪಿ 19,256 ಗುಂಡಿಗಳನ್ನು ಮುಚ್ಚಿದೆ. ಇನ್ನೂ 11,316 ಗುಂಡಿಗಳನ್ನು ಮುಚ್ಚಲು ಬಾಕಿ ಇದೆ. ಪ್ರತೀ ದಿನವೂ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುತ್ತಿದೆ. ಆದರೆ ದುರದೃಷ್ಟವಶಾತ್ ಒಂದು ಗುಂಡಿ ಮುಚ್ಚಿದ ಮೇಲೆ ಮಗದೊಂದು ಗುಂಡಿಗಳು ಕಾಣಿಸುತ್ತಲೇ ಇವೆ.
ಏನೇ ಆಗಲಿ ಬಿಬಿಎಂಪಿ ಇನ್ನಾದರೂ ಎಚ್ಚರಗೊಳ್ಳಲೇಬೇಕು. 11 ಮಂದಿಯ ಜೀವ ಕಳೆದಿರುವ ಗುಂಡಿಗಳ ಬಗ್ಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಯತ್ನವನ್ನಾದರೂ ಮಾಡಿಕೊಳ್ಳಬೇಕು. ಇನ್ನೇನು ಬುಧವಾರದಿಂದ ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಆರಂಭವಾಗಲಿದ್ದು, ಜಗತ್ತಿನ ಮೂಲೆ ಮೂಲೆಗಳಿಂದ ಹೂಡಿಕೆದಾರರು ನಗರಕ್ಕೆ ಆಗಮಿಸಲಿದ್ದಾರೆ. ಇವರ ಕಣ್ಣಲ್ಲಿ ಬೆಂಗಳೂರು ಎಂಬುದು ಸುಂದರವಾದ ನಗರವಾಗಿದೆ. ಅಲ್ಲದೆ, ಇಲ್ಲಿನ ವಾತಾವರಣವೂ ಉತ್ತಮವಾಗಿದೆ ಎಂಬ ಭಾವನೆಯೂ ಅವರಲ್ಲಿದೆ.
ಆದರೆ ಗುಂಡಿಗಳು, ಮಳೆಯಿಂದಾಗುವ ಅವಾಂತರಗಳಿಂದಾಗಿ ಬೆಂಗಳೂರು ಹೆಸರು ಮತ್ತಷ್ಟು ಕೆಡುವುದು ಬೇಡ. ಅಲ್ಲದೆ ಹೈಕೋರ್ಟ್ ಮತ್ತೆ ಮತ್ತೆ ಈ ಬಗ್ಗೆ ಬಿಬಿಎಂಪಿ ಬಗ್ಗೆ ಸಿಟ್ಟಾಗುವುದೂ ಬೇಡ. ಅತ್ಯಂತ ವೇಗವಾಗಿ ಗುಂಡಿಗಳನ್ನು ಮುಚ್ಚಿ ಬೆಂಗಳೂರು ಹೆಸರನ್ನು ಉಳಿಸಲಿ.