Advertisement

ಒಂದು ಕೊಂಬಿನ ಕಥೆ: ಯಕ್ಷ ಮಹಿಷನಿಗೆ ಕೊಂಬು ಬಂದ ಬಗೆ…!

01:06 PM May 05, 2017 | Karthik A |

ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನದಲ್ಲಿ ಬಣ್ಣಬಣ್ಣದ ವೇಷಗಳೇ ಒಂದು ಆಕರ್ಷಣೆಯಾದರೆ ಇನ್ನು ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಬರುವ ಮಹಿಷಾಸುರ ಪಾತ್ರದ ಗತ್ತು ವೈಭವದ ತೂಕವೇ ಬೇರೆ. ಇಡೀ ಪ್ರಸಂಗದಲ್ಲಿ ಜನರ ಭಾವನೆಯಲ್ಲಿ ಉಳಿದೆಲ್ಲ ಪಾತ್ರಗಳಿಗಿಂತ ದೇವಿ ಹಾಗೂ ಮಹಿಷಾಸುರ ಪಾತ್ರಗಳು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಅನತಿ ದೂರದಿಂದ ದೊಂದಿ ಬೆಳಕಿನಾಟದಲ್ಲಿ ಬಂದು ಸಭಾ ಮಧ್ಯದಿಂದ ಗತ್ತಿನಲ್ಲಿ ರಂಗಕ್ಕೆ ಮಹಿಷಾಸುರ ಪ್ರವೇಶಿಸುವ ರೀತಿಯನ್ನು ಕಲಾಭಿಮಾನಿಗಳು ಅದೆಷ್ಟು ಸಲ ಕಣ್ತುಂಬಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬಳಿಕ ರಂಗದಲ್ಲಿ ಒಡ್ಡೋಲಗ, ಮಾಲಿನಿ ಜತೆ ಸಂಭಾಷಣೆ, ‘ಅಷ್ಟಭುಜದಿ ಮೆರವ ನಾರಿ…’ ಎಂದು ಅಬ್ಬರದಿಂದ ದೇವಿಯನ್ನು ಎದುರುಗೊಂಡು ಆಕೆಯ ಜತೆಗೆ ಯುದ್ಧ ಮಾಡುವ ವಿಧಾನ ಇತ್ಯಾದಿ ಎಲ್ಲ ದೃಶ್ಯಗಳಿಗೂ ಪ್ರೇಕ್ಷಕ ತಾನು ಕುಳಿತಲ್ಲಿಯೇ ರೋಮಾಂಚನಗೊಳ್ಳುತ್ತಾನೆ. ಇಂತಹ ವಿಶಿಷ್ಟ ವೇಷಭೂಷಣದ ಮಹಿಷಾಸುರನಿಗೆ ಕಿರೀಟ ಇಲ್ಲ, ಬದಲಾಗಿ ದೊಡ್ಡ ಕೊಂಬು ಕಟ್ಟಲಾಗುತ್ತದೆ ; ಹಾಗಾದರೆ ಮಹಿಷಾಸುರನಿಗೆ ಕೊಂಬು ಧರಿಸುವ ಕ್ರಮ ಪ್ರಾರಂಭವಾದದ್ದು ಎಲ್ಲಿಂದ ಮತ್ತು ಯಾವಾಗ ಎಂಬ ಯಕ್ಷಾಸಕ್ತರ ಪ್ರಶ್ನೆಗೆ ಹೀಗೊಂದು ಸಮಾಧಾನಕರ ಉತ್ತರ ಲಭ್ಯವಾಗಿದೆ.

Advertisement

ಕಲಾವಿದ ಉಜಿರೆ ಅಶೋಕ್‌ ಭಟ್‌ ಉದಯವಾಣಿಗೆ ನೀಡಿರುವ ಮಾಹಿತಿ ಹೀಗಿದೆ; 1930ರ ಆಸುಪಾಸಿನಲ್ಲಿ ಕಾಸರಗೋಡಿನ ಕಲೆಕೋಡ್ಲು ಎಂಬಲ್ಲಿ ಗಣಪತಿ ಎಂಬವರು ಮಹಿಷಾಸುರನಿಗೆ ಕೊಂಬು ಕಟ್ಟುವ ಕ್ರಮ ಆರಂಭಿಸಿದರು. ಅಡಿಕೆ ಮರದ ಹಾಳೆಯನ್ನು ಕತ್ತರಿಸಿ ಅದಕ್ಕೆ ಬಟ್ಟೆ ಸುತ್ತಿ ಎದೆಪದಕವನ್ನು ಅದರ ಮೇಲೆ ಇಟ್ಟು ತಲೆಗೆ ಜೋಡಿಸುವ ಕ್ರಮ ಆರಂಭಿಸಿದರು. ಅಲ್ಲಿಂದ ಕೊಂಬಿನ ಮಹಿಷಾಸುರ ಪರಿಪಾಠ ಆರಂಭವಾಯಿತು ಎಂದು ಖ್ಯಾತ ಚೆಂಡೆ ವಾದಕ ನೆಡ್ಲೆ ನರಸಿಂಹ ಭಟ್ಟರು ಹೇಳುತ್ತಿದ್ದರು ಎಂದು ಅಶೋಕ ಭಟ್ಟರು ನೆನಪಿಸುತ್ತಾರೆ. ನಂತರ ಕುಂಬಳೆ ಕುಟ್ಯಪ್ಪು ಅವರು ಇದಕ್ಕೆ ಇನ್ನಷ್ಟು ಪರಿಷ್ಕಾರಗಳನ್ನು ನೀಡಿ ಕೋಣದ ನಡೆ, ನೆಕ್ಕುವುದು, ಮೇಲ್ಮುಖವಾಗಿ ದೊಂದಿ ಹಿಡಿಯುವುದು ಇತ್ಯಾದಿ ಆರಂಭಿಸಿದರು. ಆ ಕಾಲದಲ್ಲಿ ಕಲಾವಿದರು ಬಳಸುತ್ತಿದ್ದ ಕೊಂಬುಗಳು ತುಂಬಾ ಭಾರವಾಗಿದ್ದವು ಎಂಬುದನ್ನೂ ಸಹ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ರೀತಿಯ ವಿಶಿಷ್ಟ ಮಹಿಷ ವೇಷ ಆಗಿನ ಕಾಲದಲ್ಲಿ ಹಳ್ಳಿ ಜನರನ್ನು ಆಕರ್ಷಿಸಲು ಅಪೇಕ್ಷಣೀಯವಾಗಿತ್ತು. ನಂತರ ಗಾಂಧಿ ಮಾಲಿಂಗಣ್ಣ ಎಂದೇ ಕರೆಯಲ್ಪಡುತ್ತಿದ್ದ ಬಣ್ಣದ ಮಾಲಿಂಗರು ವಿಶಿಷ್ಟ ನಡೆಯನ್ನು ಮಹಿಷಾಸುರ ಪಾತ್ರಕ್ಕೆ ಒದಗಿಸಿದರು.

ಇನ್ನು, ಮಾಲಿಂಗ ಹಾಗೂ ಕುಟ್ಯಪ್ಪು ಅವರ ನಡೆಯನ್ನು ಸಮ್ಮಿಳಿತಗೊಳಿಸಿದ ಮಹಿಷಾಸುರ ಪಾತ್ರ ಗಂಗಯ್ಯ ಶೆಟ್ಟರದು. ಬಣ್ಣದ ಕುಟ್ಯಪ್ಪು ಅವರ ಆಂಗಿಕ ಅಭಿನಯ, ಬಣ್ಣದ ಮಾಲಿಂಗ ಅವರ ಬೀಸುನಡೆಯನ್ನು ಅನುಸರಿಸಿ ಮಹಿಷಾಸುರ ಪಾತ್ರಕ್ಕೆ ವಿಶಿಷ್ಟ ಖ್ಯಾತಿಯನ್ನು ಕೊಟ್ಟವರು ಗಂಗಯ್ಯ ಶೆಟ್ಟರು. ಎಳೆ ವಯಸ್ಸಿನಲ್ಲಿ ರಂಗವನ್ನು ಹುಡಿ ಮಾಡುವ ಮಹಿಷಾಸುರನಾಗಿ ನಂತರದ ದಿನಗಳಲ್ಲಿ ಹೊಂತಕಾರಿ ಮಹಿಷಾಸುರನಾದರು. ಯುವರಾಜನಿಗೆ ಶೋಣಿತಾಪುರದ ಅರಸನಾದಂತೆ ಅಭಿನಯ ಪ್ರದರ್ಶಿಸುತ್ತಿದ್ದರು. 40ರ ವಯಸ್ಸಿನ ನಂತರ ಬಂದ ಪ್ರೌಢತೆ ಬೇರೆಯೇ. ದೊಂದಿ ಹಿಡಿಯುವಲ್ಲಿಂದ ಆರಂಭಿಸಿ ಕಲಾವಿದನ ಬೆಳವಣಿಗೆ ಜತೆಗೆ ಪಾತ್ರದ ಬೆಳವಣಿಗೆ ಹೊಸ ಆಯಾಮ ಕೊಟ್ಟರು. ಅತ್ಯಂತ ಕಿರಿಯ ಪ್ರಾಯದಲ್ಲಿ ಅಂದರೆ ತನ್ನ 18ನೆ ವಯಸ್ಸಿನಲ್ಲಿ ಪ್ರಬುದ್ಧ ಮಹಿಷಾಸುರ ವೇಷ ಮಾಡುವ ಮೂಲಕ ಮಹಿಷಾಸುರ ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಗೇರುಕಟ್ಟೆ ಗಂಗಯ್ಯ ಶೆಟ್ಟರು ನಂತರ ಆ ಪಾತ್ರಕ್ಕೊಂದು ಸ್ವರೂಪ ಕೊಡುತ್ತಾ ಸಾಗಿದರು ಮತ್ತು ಇತ್ತೀಚೆಗಷ್ಟೆ ತಮ್ಮ ನೆಚ್ಚಿನ ಅರುಣಾಸುರನ ಪಾತ್ರವನ್ನು ನಿರ್ವಹಿಸುತ್ತಿರುವಾಗಲೇ ರಂಗದಲ್ಲೇ ಮರೆಯಾದರು.

ಹೀಗೆ ಮುಖ್ಯವಾಗಿ ತೆಂಕುತಿಟ್ಟಿನ ಯಕ್ಷಗಾನದಲ್ಲಿ ಅದರಲ್ಲೂ ‘ದೇವಿ ಮಹಾತ್ಮೆ ಪ್ರಸಂಗ’ದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು, ಜನಪ್ರಿಯತೆಯನ್ನು ಹೊಂದಿರುವ ಮಹಿಷಾಸುರ ಪಾತ್ರವನ್ನು ಇಂದಿಗೂ ಹಲವಾರು ಕಲಾವಿದರು ಅತ್ಯಂತ ಶ್ರದ್ಧೆ ಹಾಗೂ ನಾಜೂಕಿನಿಂದ ಮಾಡುತ್ತಾ ಬಂದಿದ್ದಾರೆ ಮತ್ತು ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ ಕೂಡಾ.

– ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next