70-80ರ ದಶಕದಲ್ಲಿ ಕೈಗಡಿಯಾರಗಳನ್ನು ಕಟ್ಟಿಕೊಳ್ಳುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಹೆಚ್ಚು ಗಳಿಕೆ ಉಳ್ಳವರು ಮಾತ್ರ ವಾಚ್ ಕಟ್ಟಿಕೊಳ್ಳಲು ಸಾಧ್ಯ ಎಂಬ ಭಾವನೆಯಿತ್ತು. ಮೊಬೈಲ್ ಫೋನ್‍ಗಳು ಬಂದ ಬಳಿಕ ಸಮಯ ನೋಡಲು ವಾಚ್ ಕಟ್ಟಿಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಾ ಬರುತ್ತಿದೆ. ನಿಖರ ಸಮಯದ ನೋಡಲು ಈಗ ವಾಚ್‍ಗಳನ್ನು ಅವಲಂಬಿಸಿಲ್ಲ. ಕೈಯಲ್ಲಿ ವಾಚ್ ಇದ್ದರೂ ಕರೆಕ್ಟ್ ಟೈಮ್ ಅನ್ನು ಮೊಬೈಲ್ ನಲ್ಲಿ ನೋಡಿ ಖಚಿತ ಮಾಡು ಎನ್ನುತ್ತೇವೆ. ಸಮಯ ನೋಡುವ ವಾಚ್ ಬದಲು ಈಗ ಸ್ಮಾರ್ಟ್ ವಾಚ್ ಗಳು ಯುವಜನರ ಮುಂಗೈ ಅಲಂಕರಿಸುತ್ತಿವೆ. ಆಪಲ್, ಸ್ಯಾಮ್ ಸಂಗ್, ಅಮೇಜ್‍ಫಿಟ್, ಹುವಾವೇ ಮುಂತಾದ ಕಂಪೆನಿಗಳು ಸ್ಮಾರ್ಟ್ ವಾಚ್ ತಯಾರಿಕೆಯಲ್ಲಿವೆ. ಈ ಬ್ರಾಂಡ್ ಗಳ ಸ್ಮಾರ್ಟ್ ವಾಚ್ ಗಳು ದುಬಾರಿಯಾಗಿದ್ದು, ಅಗ್ಗದ ದರದಲ್ಲಿ ಸ್ಮಾರ್ಟ್ ವಾಚ್ ಬಯಸುವವರಿಗಾಗಿ ಭಾರತೀಯ ಮೂಲದ ಬ್ರಾಂಡ್ ಸಿಸ್ಕಾ ಸ್ಮಾರ್ಟ್ ವಾಚುಗಳನ್ನು ಹೊರತರುತ್ತಿದೆ. ಇತ್ತೀಚೆಗೆ ಬಿಡುಗಡೆ ಮಾಡಿರುವ ಹೊಸ ಮಾದರಿ, ಸಿಸ್ಕಾ ಎಸ್‍ಡಬ್ಲೂ 200 ಸ್ಮಾರ್ಟ್ ವಾಚ್. ಇದು ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಲಭ್ಯವಿದ್ದು, 2,599 ರೂ. ಗೆ ದೊರಕುತ್ತದೆ.
ವಿನ್ಯಾಸ: ನೋಡಿದಾಗ ಇದು ಅಗ್ಗದ ದರ ವಾಚೆಂದು ಅನಿಸುವುದಿಲ್ಲ. ಇದು 1.28 ಇಂಚಿನ ಫುಲ್ ಟಚ್ ಎಲ್‍ಸಿಡಿ ಪರದೆ ಹೊಂದಿದೆ. 55 ವೃತ್ತಾಕಾರವಾಗಿದೆ. ವಾಚಿನ ಡಯಲ್ ಕೇಸ್ ಲೋಹದ್ದಾಗಿದೆ. ಇದರ ತೂಕ 55 ಗ್ರಾಂ ಇದೆ. ಇದರ ಸ್ಟ್ರಾಪ್ (ಬೆಲ್ಟ್) ಥರ್ಮೋ ಪ್ಲಾಸ್ಟಿಕ್ ಪಾಲಿಯುರಿಥೀನ್‍ನಿಂದ ಮಾಡಲ್ಪಟ್ಟಿದೆ. ವಾಚ್‍ಗಳಲ್ಲಿ ಸ್ಟ್ರಾಪ್‍ಗಳ ಗುಣಮಟ್ಟವೂ ಮುಖ್ಯ. ಕೆಲವು ಬ್ರಾಂಡ್‍ಗಳ ಸ್ಮಾರ್ಟ್ ಬ್ಯಾಂಡಿನ ಸ್ಟ್ರಾಪ್‍ಗಳು ಬೇಗನೆ ಕಿತ್ತು ಹೋಗುತ್ತದೆ. ಆದರೆ ಇದರ ಸ್ಟ್ರಾಪ್ ಗುಣಮಟ್ಟದಿಂದ ಕೂಡಿದ್ದು ಗಟ್ಟಿಮುಟ್ಟಾಗಿದೆ. ದಪ್ಪ ಕೈನಿಂದ ವಿದ್ಯಾರ್ಥಿಗಳ ಕೈಗೂ ಕಟ್ಟಿಕೊಳ್ಳುವಂತೆ ಕಿಂಡಿಗಳನ್ನು ನೀಡಲಾಗಿದೆ.
ಪರದೆ: ರೆಸೂಲೇಷನ್ 240*240 ಪಿಕ್ಸಲ್ ಇದ್ದು, ಪರದೆ ಗೀರು ನಿರೋಧಕವಾಗಿದೆ. ಐಪಿ68 ರೇಟೆಡ್ ನೀರು ನಿರೋಧಕ ವಿನ್ಯಾಸ ಹೊಂದಿದೆ. ನೀರಿನ ಹನಿಗಳು, ಧೂಳು, ಬೆವರು ನಿರೋಧಕವಾಗಿದೆ. 1.5 ಮೀಟರ್ ಆಳದವರೆಗೂ ನೀರನ್ನು ನಿರೋಧಿಸುತ್ತದೆ. ಪರದೆಯಲ್ಲಿ ಡಿಫಾಲ್ಟ್ ಆಗಿ ಸಮಯ ಹೃದಯಬಡಿತ ಮಾಪನ ಬ್ಯಾಟರಿ ಪರ್ಸೆಂಟೇಜ್ ತೋರಿಸುತ್ತದೆ. ವಾಚ್‍ನಲ್ಲಿ ಟಚ್ ಮೂಲಕ ಬಲಕ್ಕೆ ಒಮ್ಮೆ ಸ್ವೈಪ್ ಮಾಡಿದಾಗ ನಡಿಗೆಯ ಹೆಜ್ಜೆಗಳು, ಕಿ.ಮೀ. ಎಷ್ಟು ಕ್ಯಾಲರಿ ನಷ್ಟವಾಗಿದೆ ಎಂಬುದನ್ನು, ಇನ್ನೊಂದು ಸ್ವೈಪ್ ಮಾಡಿದಾಗ ಹೃದಯ ಬಡಿತದ ಸಂಖ್ಯೆಯನ್ನೂ, ನಂತರದ ಸ್ವೈಪ್‍ನಲ್ಲಿ ಹವಾಮಾನ ವಿವರವನ್ನೂ ತೋರುತ್ತದೆ. ಎಡಕ್ಕೆ ಸ್ವೈಪ್ ಮಾಡಿ, ರಕ್ತದ ಆಕ್ಸಿಜನ್ ಮಟ್ಟ, ಸಂಗೀತ ನಿಯಂತ್ರಣ, ಸ್ಟಾಪ್ ವಾಚ್, ಟೈಮರ್, ಮೆಸೇಜ್ ಗಳನ್ನು ವೀಕ್ಷಿಸಬಹುದು. ರೈಸ್ ಟು ವೇಕ್ ಎಂಬ ಆಯ್ಕೆ ಮಾಡಿಕೊಂಡರೆ, ನಿಮ್ಮ ಮಣಿಕಟ್ಟು ಎತ್ತಿದ ತಕ್ಷಣ ವಾಚ್‍ನ ಪರದೆ ತಂತಾನೆ ತೆರೆದುಕೊಂಡು ಸಮಯ ತೋರಿಸುತ್ತದೆ. ವಾಚ್‍ನ ಗುಂಡಿ ಒತ್ತಿ ಪರದೆ ಆನ್ ಮಾಡುವ ಪ್ರಮೇಯ ಇರುವುದಿಲ್ಲ.
ವೈಶಿಷ್ಟ್ಯಗಳು: ಈ ಸ್ಮಾರ್ಟ್ ವಾಚ್‍ನಲ್ಲಿ ದೈನಂದಿನ ಜೀವನಕ್ಕೆ ಅಗತ್ಯವಾದ ಕೆಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇವು ನಿಜಕ್ಕೂ ಉಪಯುಕ್ತವಾಗಿವೆ. ಮೊಬೈಲ್ ಫೋನ್ ನಲ್ಲಿ ಸಿಸ್ಕಾ ಬೋಲ್ಟ್ ಅಪ್ಲಿಕೇಷನ್ ಮೂಲಕ ಈ ಸೆಟಿಂಗ್‍ಗಳನ್ನು ಮಾಡಿಕೊಳ್ಳಬಹುದಾಗಿದೆ. ನಿಮಗೆ ಬೇಕಾದ ಡಯಲ್ ವಿನ್ಯಾಸ, ತೂಕಡಿಕೆ ಬಂದಾಗ ಎಚ್ಚರಿಸುವ, ನೀರು ಕುಡಿಯಲು ನೆನಪಿಸುವ, ಕೈ ಸ್ವಚ್ಚಗೊಳಿಸಲು ನೆನಪಿಸುವ, ಸೆಟಿಂಗ್ ಗಳನ್ನು ಮಾಡಿಕೊಳ್ಳಬಹುದು.
* ವಾಚ್ ಧರಿಸಿದ್ದಾಗ, ನಿಮ್ಮ ವ್ಯಾಯಾಮದಿಂದಾದ ಕ್ಯಾಲರಿ ನಷ್ಟ, ಹೃದಯದ ಬಡಿತ ಎಷ್ಟಿದೆ? ಮಲಗಿದಾಗ ಎಷ್ಟು ಸಮಯ ನಿದ್ದೆ ಮಾಡಿದಿರಿ? ಇದರಲ್ಲಿ ಸಂಪೂರ್ಣ, ಅರೆ ನಿದ್ದೆ ಎಷ್ಟಿತ್ತು ಎಂಬುದನ್ನೆಲ್ಲ ತಿಳಿಸುತ್ತದೆ. ಅಲ್ಲದೆ ಮೊಬೈಲ್‍ನಲ್ಲಿ ಒಂದು ವಾರದ, ಒಂದು ತಿಂಗಳಿನ ನಿಮ್ಮ ನಿದ್ರಾ ಸಮಯವನ್ನು ತಿಳಿಯಬಹುದು.
* ಮೊಬೈಲ್ ಗೆ ಬಂದ ಮೆಸೇಜ್ ಗಳನ್ನು ವಾಚ್‍ನಲ್ಲೇ ಓದಬಹುದು. ಕರೆ ಬಂದಾಗ ವಾಚ್ ನಲ್ಲಿ ವೈಬ್ರೇಟರ್ ಮೂಲಕ ಸೂಚನೆ ನೀಡುತ್ತದೆ. ಯಾರು ಕರೆ ಮಾಡಿದ್ದಾರೆಂದು ವಾಚ್‍ನಲ್ಲೇ ನೋಡಿಕೊಳ್ಳಬಹುದು. ಅನಗತ್ಯ ಕರೆಯಾದರೆ ವಾಚ್‍ನಲ್ಲೇ ಕರೆ ಕಡಿತಗೊಳಿಸಬಹುದು. ಮೊಬೈಲ್‍ನಲ್ಲಿ ಸಂಗೀತ ಕೇಳುತ್ತಿದ್ದರೆ, ವಾಚ್ ಮೂಲಕ ಮುಂದಿನ ಟ್ರ್ಯಾಕ್‍ಗೆ ಫಾರ್ವರ್ಡ್, ಧ್ವನಿ ಹೆಚ್ಚು ಕಡಿಮೆ ಇತ್ಯಾದಿ ನಿಯಂತ್ರಣವನ್ನು ಮಾಡಿಕೊಳ್ಳಬಹುದು.
* ಮಹಿಳೆಯರ ಆರೋಗ್ಯದ ಟ್ರ್ಯಾಕಿಂಗ್ – ಮಹಿಳೆಯರ ಪೀರಿಯಡ್ ಸೈಕಲ್, ಅಂಡೋತ್ಪತ್ತಿ ಅವಧಿ, ಗರ್ಭಧಾರಣೆಯ ಅವಧಿಯನ್ನು ಮೇಲ್ವಿಚಾರಣೆ ಮಾಡುವ ಸೌಲಭ್ಯವಿದೆ.
*ಕುಡಿಯುವ ನೀರಿನ ಜ್ಞಾಪನೆ – ದಿನವಿಡೀ ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಬಹಳ ಮುಖ್ಯ. ಸಿಸ್ಕಾ ಬೋಲ್ಟ್ ವಾಟರ್ ರಿಮೈಂಡರ್ ವೈಶಿಷ್ಟ್ಯದೊಂದಿಗೆ, ನಿಮ್ಮ ದೈನಂದಿನ ನೀರಿನ ಸೇವನೆಯ ಬಗ್ಗೆ ನೀವು ನಿಗಾ ಇಡಬಹುದು.
*ಸ್ಯಾನಿಟೈಸೇಶನ್ ಜ್ಞಾಪನೆ – ಕೋವಿಡ್ ಸಾಂಕ್ರಾಮಿಕವನ್ನು ಪರಿಗಣಿಸಿ, ಸಿಸ್ಕಾ ಸ್ಮಾರ್ಟ್ ವಾಚ್‌ನಲ್ಲಿ ಹ್ಯಾಂಡ್ ಸ್ಯಾನಿಟೈಸೇಶನ್ ಜ್ಞಾಪನೆಯ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ.
* ಹವಾಮಾನ ವರದಿ – ತಾಪಮಾನದಂತಹ ಹವಾಮಾನ ಸ್ಥಿತಿಯನ್ನು ತೋರಿಸುತ್ತದೆ ಮತ್ತು ಮಳೆ, ಮೋಡ ಅಥವಾ ಬಿಸಿಲಿನಂತಹ ಹವಾಮಾನ ಸ್ಥಿತಿಯ ಬಗ್ಗೆ ನಿಮಗೆ ತಿಳಿಸುತ್ತದೆ.
* ಎಸ್ ಪಿ ಓ 2 ಮಾನಿಟರಿಂಗ್ – ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಲು ಎಸ್‍ಪಿಓ 2 ಮಾನಿಟರಿಂಗ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಈ ವೈಶಿಷ್ಟ್ಯ ಇಂದು ಅತ್ಯಗತ್ಯ. ರಕ್ತದ ಆಮ್ಲಜನಕ ಮಟ್ಟ ಅಳೆಯಲು ಪ್ರತ್ಯೇಕ ಆಕ್ಸಿಮೀಟರ್ ಉಪಕರಣಕ್ಕೆ 2 ಸಾವಿರ ಮೇಲೆ ತೆರಬೇಕಾಗಿದೆ.
ಬ್ಯಾಟರಿ: ಇದರ ಬ್ಯಾಟರಿ ಬಾಳಿಕೆ ಭರ್ಜರಿಯಾಗಿದೆ. 10 ದಿನಗಳ ಬ್ಯಾಟರಿ ಬಾಳಿಕೆ ಇದ್ದು, ಕೇವಲ ಸಮಯ ನೋಡಲು ಕೈಗೆ ಕಟ್ಟಿಕೊಂಡರೆ 15-20 ದಿನಗಳ ಮೇಲೆ ಬರುತ್ತದೆ.
ಒಟ್ಟಾರೆ ಈ ಸ್ಮಾರ್ಟ್ ವಾಚು ನೀವು ಕೊಡುವ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ. ನೋಡಲು ಸುಂದರವಾಗಿದೆ. ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. ಎರಡರಿಂದ ಎರಡೂವರೆ ಸಾವಿರ ರೂ.ಗೆ ಒಂದು ವಾಚ್ ಅಥವಾ ಸ್ಮಾರ್ಟ್ ಬ್ಯಾಂಡ್ ಕೊಳ್ಳುವ ಬದಲು ಈ ವಾಚ್ ಕೊಳ್ಳಬಹುದಾಗಿದೆ.
-ಕೆ.ಎಸ್. ಬನಶಂಕರ ಆರಾಧ್ಯ.