ಆರಂಭಿಕ ಮತ್ತು ಮಧ್ಯಮ ದರ್ಜೆಯ ಮೊಬೈಲ್ ಗಳಲ್ಲಿ ಉತ್ತಮ ಗುಣಗಳಿರುವ ಸ್ಪೆಸಿಫಿಕೇಷನ್ ನೀಡಿ, ಕಡಿಮೆ ದರಕ್ಕೆ ನೀಡಬಹುದು ಎಂದು ಸಾಬೀತು ಮಾಡಿದ್ದು ಶಿಯೋಮಿ ಕಂಪೆನಿ. ಹಾಗಾಗಿಯೇ ಇಂದು ಅದು ಭಾರತದ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್ ಮಾರಾಟದಲ್ಲಿ ನಂ. 1 ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಜಗತ್ತಿನ ಮೊಬೈಲ್ ಮಾರುಕಟ್ಟೆಯಲ್ಲೂ ನಂ. 1 ಆಗುವ ಹಾದಿಯಲ್ಲಿ ಮುನ್ನಡೆದಿದೆ. (ಕಳೆದ ಜೂನ್ ತಿಂಗಳ ಮಾರಾಟದಲ್ಲಿ ಅದು ಜಗತ್ತಿನ ಮೊಬೈಲ್ ಫೋನ್ ಮಾರಾಟದಲ್ಲಿ ನಂ. 1 ಸ್ಥಾನಕ್ಕೇರಿತ್ತು)
ಆಯಾ ದರ ವಿಭಾಗದಲ್ಲಿ ಗ್ರಾಹಕರ ಸಂತೃಪ್ತಿಗೆ ಎಷ್ಟುಸೌಲಭ್ಯ ನೀಡಲು ಸಾಧ್ಯವೋ ಅದನ್ನು ಕೊಡಲು ಶಿಯೋಮಿ ಪ್ರಯತ್ನಿಸುತ್ತಲೇ ಇರುತ್ತದೆ. ಪ್ರತಿಸ್ಪರ್ಧಿ ಕಂಪೆನಿಗಳು 15-16 ಸಾವಿರ ರೂ.ಗಳಿಗೆ ನೀಡುವ ಹಾರ್ಡ್ ವೇರ್, ಸಾಫ್ಟ್ ವೇರ್ ಗಳನ್ನು ಶಿಯೋಮಿ 10-12 ಸಾವಿರೊಳಗೇ ನೀಡುತ್ತದೆ. ಹೀಗಾಗಿಯೇ ಅದು ಗ್ರಾಹಕರ ಮೆಚ್ಚುಗೆ ಗಳಿಸಿ, ನಂ. 1 ಸ್ಥಾನಕ್ಕೇರಲು ಸಾಧ್ಯವಾಗಿದ್ದು.
ಇದನ್ನೂ ಓದಿ:ಕನಸು ನನಸಾಗಿಸಲು ವಯಸ್ಸಿನ ಹಂಗೇಕೆ?82ನೇ ವಯಸ್ಸಿನಲ್ಲಿ ಬಾಹ್ಯಾಕಾಶ ಪ್ರಯಾಣ…
ಈಗ ಅದು ಇತ್ತೀಚಿಗೆ ಬಿಡುಗಡೆ ಮಾಡಿರುವ ಬಜೆಟ್ ದರ ಫೋನ್ ರೆಡ್ ಮಿ 10 ಪ್ರೈಮ್. ಇದು ರೆಡ್ ಮಿ 10 ಸರಣಿಗೆ ಇತ್ತೀಚಿನ ಸೇರ್ಪಡೆ. ಅಲ್ಲದೇ ರೆಡ್ ಮಿ 10 ಸರಣಿಯಲ್ಲಿ ಕಡಿಮೆ ದರ ಉಳ್ಳದ್ದು. ಇದರ ದರ 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 12,499 ರೂ. 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 14,499 ರೂ. ಬಿಳಿ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯ. ಎಂಐ ಆನ್ ಲೈನ್ ಸ್ಟೋರ್ ಮತ್ತು ಅಮೆಜಾನ್ ನಲ್ಲಿ ಫ್ಲಾಶ್ ಸೇಲ್ ಮೂಲಕ ಮಾರಾಟ ಮಾಡಲಾಗುತ್ತಿದೆ.
ಪ್ರೊಸೆಸರ್: ಇದರಲ್ಲಿ ಮೀಡಿಯಾ ಟೆಕ್ ಹೀಲಿಯೋ ಜಿ 88 ಪ್ರೊಸೆಸರ್ ಅಳವಡಿಸಲಾಗಿದೆ. ಭಾರತದಲ್ಲಿ ಈ ಪ್ರೊಸೆಸರ್ ಬಳಸಿದ ಮೊದಲ ಫೋನ್ ಇದು. ಈ ದರಕ್ಕೆ ಉತ್ತಮ ಪೊಸೆಸರ್ ಅನ್ನೇ ಶಿಯೋಮಿ ನೀಡಿದೆ. ಹಿಂದಿನ ರೆಡ್ ಮಿ 9 ಪ್ರೈಮ್ ನಲ್ಲಿ ಹೀಲಿಯೋ ಜಿ80 ಪ್ರೊಸೆಸರ್ ಬಳಸಲಾಗಿತ್ತು. ಅದಕ್ಕಿಂತ ಹೆಚ್ಚಿನ ವೇಗವನ್ನು ಈ ಪ್ರೊಸೆಸರ್ ಹೊಂದಿದೆ. ಕೆಲವು ಕಂಪೆನಿಗಳು 18 ಸಾವಿರದ ಮೊಬೈಲ್ ಗಳಲ್ಲಿ ಜಿ80 ಪ್ರೊಸೆಸರ್ ಬಳಸುತ್ತಿವೆ! ಗೇಮ್‍ಗಳನ್ನು ವೇಗವಾಗಿ ಬಳಸಲು ಹೈಪರ್ ಎಂಜಿನ್ ಗೇಮ್ ಟೆಕ್ನಾಲಜಿ ಎಂಬ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಇದಕ್ಕೆ ಎಂಐಯುಐ 12.5 ಇಂಟರ್ ಫೇಸ್ ನೀಡಲಾಗಿದೆ. ಮೊಬೈಲ್ ಫೋನ್ ಗಳಲ್ಲಿ ಎಂಐಯುಐ ತನ್ನ ನೀಟಾದ ವಿನ್ಯಾಸದಿಂದ ಹೆಸರುಗಳಿಸಿದೆ.
ಮೆಮೊರಿ ವಿಸ್ತರಣೆ ಸೌಲಭ್ಯವನ್ನು ಇದರಲ್ಲಿ ನೀಡಿರುವುದು ವಿಶೇಷ. ಆಂತರಿಕ ಸಂಗ್ರಹ ಖಾಲಿ ಇದ್ದರೆ ಅದರಲ್ಲಿರುವ 2 ಜಿಬಿಯನ್ನು ರ್ಯಾಮ್ ಗಾಗಿ ಬಳಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಇದಕ್ಕಾಗಿ ಅಡಿಷನಲ್ ಎಕ್ಸ್ ಟೆನ್‍ಷನ್ ಗೆ ಹೋಗಿ ಅಲ್ಲಿ ಮೆಮೊರಿ ಎಕ್ಸ್ ಟೆನ್ಷನ್ ಆಯ್ಕೆಯನ್ನು ಆನ್ ಮಾಡಬೇಕು. ಆಗ 2 ಜಿಬಿ ರ್ಯಾಮ್ ಹೆಚ್ಚುವರಿಯಾಗಿ ದೊರಕುತ್ತದೆ. ಹೀಗಾಗಿ ಮೊಬೈಲ್‍ನ ಕಾರ್ಯಾಚರಣೆ ಸರಾಗವಾಗಿದೆ.
ಪರದೆ ಮತ್ತು ವಿನ್ಯಾಸ: 6.5 ಇಂಚಿನ ಎಲ್‍ಸಿಡಿ ಎಫ್ ಎಚ್ ಡಿ ಪ್ಲಸ್ ಪರದೆಯನ್ನು (2400*1080) ಇದು ಹೊಂದಿದ್ದು, 90 ಹರ್ಟ್ಜ್ ರಿಫ್ರೆಶ್ ರೇಟ್ ಒಳಗೊಂಡಿದೆ. ಇದು ಸ್ಕ್ರಾಲಿಂಗ್, ಗೇಮಿಂಗ್ ಅನ್ನು ಸರಾಗ ಮಾಡಿದೆ. ಪರದೆಯ ಮೇಲೆ ಮಧ್ಯಭಾಗದಲ್ಲಿ ಮುಂಬದಿ ಕ್ಯಾಮರಾ ಲೆನ್ಸಿಗಾಗಿ ಪಂಚ್ ಹೋಲ್ ಡಿಸ್‍ಪ್ಲೇ ನೀಡಲಾಗಿದೆ. ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪದರ ಇದೆ. ಶೇ. 84ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಹೊಂದಿದೆ. ಬೆರಳಚ್ಚು ಸ್ಕ್ಯಾನರ್ ಅನ್ನು ಆನ್ ಅಂಡ್ ಆಫ್ ಬಟನ್‍ನಲ್ಲೇ ನೀಡಲಾಗಿದೆ. ಫೋನ್ ಪಾಲಿಕಾರ್ಬೊನೇಟ್ ಕವಚ ಹೊಂದಿದ್ದು, ಹಿಂಬದಿ ಗ್ಲಾಸಿ ಫಿನಿಷ್ ನೀಡಲಾಗಿದೆ.
ಕ್ಯಾಮರಾ: ಹಿಂಬದಿ ಕ್ಯಾಮರಾ 4 ಲೆನ್ಸ್ ಹೊಂದಿದೆ. 50 ಮೆ.ಪಿ. ಪ್ರೈಮರಿ ಲೆನ್ಸ್, 8 ಮೆ.ಪಿ. ಅಲ್ಟ್ರಾ ವೈಡ್, 2ಮೆ.ಪಿ. ಮ್ಯಾಕ್ರೋ ಹಾಗೂ 2 ಮೆ.ಪಿ. ಡೆಪ್ತ್ ಸೆನ್ಸರ್ ಅನ್ನು ಕ್ಯಾಮರಾ ಹೊಂದಿದೆ. ಬಜೆಟ್ ಫೋನಿನಲ್ಲೂ ಒಂದು ಮಟ್ಟಿಗೆ ಉತ್ತಮ ಕ್ಯಾಮರಾ ನೀಡಲಾಗಿದೆ. ಫೋಟೋಗಳು ತೃಪ್ತಿಕರ ಫಲಿತಾಂಶ ನೀಡುತ್ತವೆ. ಸೆಲ್ಫೀಗೆ 8 ಮೆ.ಪಿ. ಕ್ಯಾಮರಾ ನೀಡಲಾಗಿದ್ದು, ಇದು 8 ಮೆ.ಪಿ. ಮಾತ್ರನಾ ಎಂಬ ಅನುಮಾನ ಮೂಡುತ್ತದೆ! ಅಷ್ಟು ಸ್ಪಷ್ಟವಾದ ಸೆಲ್ಫೀ ಫೋಟೋ ಮೂಡಿಬರುತ್ತದೆ.
ಇದು ಎರಡು 4ಜಿ ಸಿಮ್ ಸೌಲಭ್ಯ ಹೊಂದಿದೆ. 5ಜಿ ಇಲ್ಲವೇ? ಎಂಬ ಪ್ರಶ್ನೆಗೆ ಉತ್ತರ: ಈಗ ಅಗತ್ಯವಿಲ್ಲ! ಭಾರತದಲ್ಲಿ ಇನ್ನು 2 ವರ್ಷವಾದ ಮೇಲೆ 5ಜಿ ಸೌಲಭ್ಯ ದೊರಕಬಹುದು. ಅದಕ್ಕಾಗಿ ಬಜೆಟ್ ಫೋನ್ ಗಳಲ್ಲಿ 5ಜಿ ಬೇಕು ಎಂದಾದರೆ ಇದೇ ಮೊಬೈಲ್ ನ ದರ 17 ಸಾವಿರ ಆಗಬಹುದು! ಈಗ ಇಲ್ಲದ 5ಜಿ ಗಾಗಿ ಹೆಚ್ಚುವರಿ ದರ ತೆರುವ ಅಗತ್ಯವಿಲ್ಲ.
ಈ ಮೊಬೈಲ್ ಭರ್ಜರಿ ಬ್ಯಾಟರಿ ಹೊಂದಿದೆ. 6000 ಎಂಎಎಚ್ ಬ್ಯಾಟರಿ ಇದ್ದು, ಎರಡು ದಿನದ ಬಾಳಿಕೆ ಬರುತ್ತದೆ. 18 ವ್ಯಾಟ್ಸ್ ಟೈಪ್ ಸಿ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಬಜೆಟ್ ಫೋನ್ ಆಗಿದ್ದರೂ ಸ್ಟೀರಿಯೋ ಸ್ಪೀಕರ್ ಅಳವಡಿಸಲಾಗಿದೆ.
ಮಕ್ಕಳ ಆನ್‍ಲೈನ್ ತರಗತಿಗೆ ಬಳಸಲು ಹಾಗೂ ಒಂದು ಹಂತಕ್ಕೆ ಒಳ್ಳೆಯ ಸ್ಪೆಸಿಫಿಕೇಷನ್ ಹೊಂದಿರಬೇಕು. ನೀಡುವ ದರಕ್ಕೆ ಮೌಲ್ಯ ಒದಗಿಸಬೇಕು. ಫೋನ್ ದರ ಕೈಗೆಟಕುವಂತಿರಬೇಕು ಎಂದು ಅನೇಕರು ಬಯಸುತ್ತಾರೆ. ಅಂಥವರು ರೆಡ್ ಮಿ 10 ಪ್ರೈಮ್ ಅನ್ನು ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ.