Advertisement

ಅ.17ರಿಂದ ನವರಾತ್ರಿ ವೈಭವ; ದೇಶಾದ್ಯಂತ ಸಂಭ್ರಮ, ಎಲ್ಲೆಲ್ಲಿ ಹೇಗೆ ಆಚರಣೆ ನಡೆಯುತ್ತೆ

11:19 AM Oct 15, 2020 | Nagendra Trasi |

ದೇಶಾದ್ಯಂತ ಶನಿವಾರದಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ. ಅಸುರ ಶಕ್ತಿ ಮಹಿಷಾಸುರನ್ನು ಸಂಹ ರಿಸಿದ ದೇವಿ ದುರ್ಗೆಯನ್ನು 9 ದಿನಗಳ ರಾತ್ರಿ (ನವರಾತ್ರಿ) ವಿಶೇಷ ಹಾಗೂ ವಿವಿಧ ರೀತಿಯಲ್ಲಿ ಪೂಜಿಸುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯವೆಂದೇ ಹೇಳಬಹುದು.

Advertisement

ಕರ್ನಾಟಕ
ಇಲ್ಲಿನ ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದ ಮೆರವಣಿಗೆ, ವಿವಿಧ ಪ್ರದರ್ಶನ ಇಲ್ಲಿನ ವಿಶೇಷತೆ. ಮೈಸೂರು, ಮಂಗಳೂರು ಸಹಿತ ರಾಜ್ಯದ ವಿವಿಧೆಡೆ ಅತ್ಯಂತ ವೈಭವದಿಂದ 10 ದಿನಗಳ ಉತ್ಸವವಾಗಿ ಆಚರಿಸಲಾಗುತ್ತದೆ.

ಮಹಾರಾಷ್ಟ್ರ
ನವರಾತ್ರಿ ಎಂದರೆ ಇಲ್ಲಿ ಹೊಸ ಆರಂಭ. ಮನೆ, ಕಾರು ಖರೀದಿ, ಹೊಸ ಉದ್ಯಮ ಆರಂಭ ಎಲ್ಲೆಡೆ ಸಾಮಾನ್ಯ. ಮದುವೆಯಾದ ಮಹಿಳೆಯರನ್ನು ಸ್ನೇಹಿತರು,
ಬಂಧುಗಳು ಕರೆಸಿ ಬಾಗಿನದ ಜತೆಗೆ ಉಡುಗೊರೆ ಕೊಡುವ ಸಂಪ್ರದಾಯವಿದೆ. ಬಹುತೇಕ ಎಲ್ಲ ಭಾಗಗಳಲ್ಲಿ ಗರ್ಭಾ ಮತ್ತು ದಾಂಡಿಯಾ ನೃತ್ಯದ ಸಂಭ್ರಮವನ್ನು ಕಾಣಬಹುದು
.
ಗುಜರಾತ್‌
ಅತ್ಯಂತ ವೈಭವದಿಂದ 9 ದಿನಗಳ ಕಾಲ ಮಾ ಶಕ್ತಿಯ ಆರಾಧನೆಯಲ್ಲಿ ಪ್ರತಿನಿತ್ಯ ಸಾಂಪ್ರದಾಯಿಕ ದಿರಿಸು ಧರಿಸಿ ಸಂಭ್ರಮಿಸುವ ಜನರು ಸಂಜೆ ಮಣ್ಣಿನ ಮಡಕೆಯಲ್ಲಿ ದೀಪವನ್ನು ಉರಿಸಿ ಗರ್ಭಾ, ದಾಂಡಿಯಾರಸ್‌ ನೃತ್ಯವಾಡುತ್ತಾರೆ.

ಪಶ್ಚಿಮ ಬಂಗಾಲ, ಒರಿಸ್ಸಾ,ಬಿಹಾರ
ನವರಾತ್ರಿಯ ಕೊನೆಯ ನಾಲ್ಕು ದಿನ ಅಂದರೆ ಸಪ್ತಮಿ, ಅಷ್ಟಮಿ, ನವಮಿ ಮತ್ತು ದಶಮಿಯಂದು ದುರ್ಗೆಯನ್ನು ಆರಾಧಿಸಲಾಗುತ್ತದೆ. ಪಶ್ಚಿಮ ಬಂಗಾಲದಲ್ಲಿ ಇದಕ್ಕಾಗಿ ದೊಡ್ಡ ಪೆಂಡಾಲ್‌ಗ‌ಳನ್ನು ನಿರ್ಮಿಸಲಾಗುತ್ತದೆ. ಮಹಿಷಾಸುರನನ್ನು ಮರ್ದಿಸುವ ಬೃಹತ್‌ ದುರ್ಗಾ ದೇವಿಯ ವಿಗ್ರಹದೊಂದಿಗೆ ಗಣಪತಿ, ಕಾರ್ತಿಕೇಯ, ಸರಸ್ವತಿ ದೇವಿಯ ಆರಾಧನೆಯೂ ನಡೆಯುತ್ತದೆ.

ತಮಿಳುನಾಡು
ಇಲ್ಲಿ ಆರಂಭದ ಮೂರು ದಿನ ದುರ್ಗೆ,ಅನಂತರ ಮೂರು ದಿನ ಲಕ್ಷಿ ಕೊನೆಯ ಮೂರು ದಿನ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಸ್ನೇಹಿತರು, ಬಂಧುಗಳು,
ನೆರೆಹೊರೆಯವರನ್ನು ಮನೆಗೆ ಊಟಕ್ಕೆ ಕರೆದು ಬಟ್ಟೆ, ಬಂಗಾರ, ಸಿಹಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ವಿಶೇಷ. ಇಲ್ಲಿನ ವಿಶೇಷತೆಯೆಂದರೆ ಕೋಲು ಅಲಂಕಾರ. ಇದರಲ್ಲಿರುವ ಒಂಬತ್ತು ಮೆಟ್ಟಿಲುಗಳು 9 ರಾತ್ರಿಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಮೆಟ್ಟಿಲಿನಲ್ಲೂ ಗೊಂಬೆ, ದೇವದೇವಿಯರ ಪ್ರತಿಮೆಗಳನ್ನಿಟ್ಟು ಪೂಜಿಸಲಾಗುತ್ತದೆ.

Advertisement

ಆಂಧ್ರಪ್ರದೇಶ
ಬಟುಕಮ್ಮ ಪಾಂದುಗ (ತಾಯಿ ದೇವಿ ಜೀವಂತವಾಗಿ ಬಾ) ಎಂದು ಕರೆಯುವ ಆಚರಣೆ ಇಲ್ಲಿನ ವಿಶೇಷ. ಶಕ್ತಿಯ ಪ್ರತೀಕವಾಗಿ 9 ದೀಪಗಳನ್ನಿಟ್ಟು ಆಯಾ ಕಾಲದಲ್ಲಿ ಸಿಗುವ ಹೂವುಗಳಿಂದ ಅಲಂಕರಿಸಲಾಗುತ್ತದೆ. ಹೆಚ್ಚಾಗಿ ಮಹಿಳೆಯರು ಸಾಂಪ್ರದಾಯಿಕ ಸೀರೆ‌, ಆಭರಣ ಧರಿಸಿ ಸಂಭ್ರಮಿಸುತ್ತಾರೆ.

ಕೇರಳ
ಕೊನೆಯ ಮೂರು ದಿನಗಳ ಕಾಲ ಸರಸ್ವತಿ ದೇವಿಯ ಪ್ರತೀ ಕವಾದ ಪುಸ್ತಕ, ಸಂಗೀತ ಪರಿಕರಗಳನ್ನು ಪೂಜಿಸಿ, ದಶಮಿಯ ಬಳಿಕ ಅದನ್ನು ಓದಲು ಕೊಡಲಾಗುತ್ತದೆ.

ಹಿಮಾಚಲ ಪ್ರದೇಶ
ಇಲ್ಲಿನ ಹಿಂದೂಗಳಿಗೆ ನವರಾತ್ರಿ ಬಹುದೊಡ್ಡ ಉತ್ಸವ. ಎಲ್ಲ ಕಡೆ 9 ದಿನಗಳ ಉತ್ಸವ ಕೊನೆಗೊಂಡ ಬಳಿಕ ಇಲ್ಲಿ 10ನೇ ದಿನದಿಂದ 9 ದಿನಗಳನವರಾತ್ರಿ ಉತ್ಸವ ನಡೆಸಲಾಗುತ್ತದೆ. 10ನೇ ದಿನ ಕಲ್ಲು ದುಶೆರಾ (ರಾಮ ಆಯೋಧ್ಯೆಗೆ ಮರಳಿದ ದಿನ) ವನ್ನು ಆಚರಿಸಲಾಗುತ್ತದೆ. ಈ ದಿನ ದೇವಸ್ಥಾನಗಳಲ್ಲಿ
ದೇವರ ಪ್ರತಿಮೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ದುರ್ಗಾ ದೇವಿಯ ಆರಾಧನೆಯೂ ನಡೆಯುತ್ತದೆ.

ಪಂಜಾಬ್‌
ಇಲ್ಲಿ 7 ದಿನಗಳ ಉಪವಾಸ ವ್ರತದೊಂದಿಗೆ ನವರಾತ್ರಿ ಉತ್ಸವ ಆರಂಭಿಸಲಾಗುತ್ತದೆ. ಅಷ್ಟಮಿ ಮತ್ತು ನವಮಿಯಂದು 9 ಮಕ್ಕಳನ್ನು ಕರೆಸಿ ಪೂಜಿಸಲಾಗುತ್ತದೆ.
ಇದನ್ನು ಕಾಂಜಿಕಾ ಎಂದು ಕರೆಯಲಾಗುತ್ತದೆ. ದೇವಿಯ ಆರಾಧನೆ, ರಾತ್ರಿ ಪೂರ್ತಿ ಜಾಗರಣೆ ಇಲ್ಲಿನ ವಿಶೇಷತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next