Advertisement

IFFI Goa: ಭಾರತೀಯ ಭಾಷಾ ಚಿತ್ರಗಳ ಹೆದ್ದೆರೆಯಲ್ಲಿ ಕನ್ನಡ ಕರಗಿ ಹೋಗಿದ್ದು ಹೇಗೆ?

12:49 PM Nov 25, 2019 | Nagendra Trasi |

ಪಣಜಿ: ಭಾರತೀಯ ಭಾಷಾ ಚಿತ್ರರಂಗದಲ್ಲಿನ ಹೊಸ ಅಲೆಯ ಚಿತ್ರಗಳೆಂಬ ಹೆದ್ದೆರೆಯಲ್ಲಿ ಕನ್ನಡ ಕರಗಿ ಹೋಯಿತೇ? ಈ ಪ್ರಶ್ನೆ ಉದ್ಭವಿಸಿರುವುದು ಗೋವಾದಲ್ಲಿ ನಡೆಯುತ್ತಿರುವುದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಲ್ಲಿ.

Advertisement

ಐವತ್ತನೇ ವರ್ಷವನ್ನು ನೆನಪಿಸಿಕೊಳ್ಳಲು ಹಲವಾರು ವಿಭಾಗಗಳನ್ನು ರೂಪಿಸಲಾಗಿದೆ. 50 ವರ್ಷದ ಹಿಂದೆ [1963 ರಲ್ಲಿ] ಬಿಡುಗಡೆಯಾದ ಹನ್ನೊಂದು ಭಾರತೀಯ ಭಾಷೆಯ ಚಿತ್ರಗಳನ್ನು ತೋರಿಸಲಾಗುತ್ತಿದೆ. ಹಾಗೆಯೇ ಹೊಸ ಅಲೆಯ ಚಲನಚಿತ್ರಗಳ ಭಾಗವೊಂದಿದೆ. ಇದನ್ನೂ ಬಿಂಬಿಸುತ್ತಿರುವುದು ಹೊಸ ಅಲೆಯ ಚಿತ್ರಗಳಿಗೆ ಪ್ರೋತ್ಸಾಹಕರ ವಾತಾವರಣ ನಿರ್ಮಿಸಬೇಕೆಂಬ ಸದುದ್ದೇಶ, ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿ ಪರೋಕ್ಷ ಅಗತ್ಯಗಳನ್ನು ಈಡೇರಿಸಿಕೊಳ್ಳುವ ದೂರದೃಷ್ಟಿಯಿಂದ ಆರಂಭವಾಗಿದ್ದು ಈ ಚಿತ್ರೋತ್ಸವಗಳು. ಈ ಮಾತಿಗೆ ಈಗಿನ ಇಫಿ ಚಿತ್ರೋತ್ಸವವೂ ಸೇರಿಕೊಳ್ಳುತ್ತದೆ.

ಈ ದೃಷ್ಟಿಯಿಂದ ಚಿತ್ರೋತ್ಸವದ 50 ನೇ ವರ್ಷದ ಉತ್ಸವದಲ್ಲಿ ಹೊಸ ಅಲೆಯ ಸಿನಿಮಾ ಎಂಬ ವಿಭಾಗವಿದೆ. ಇದರಲ್ಲಿ 1950 ಇಂದ 1970 ರ ಕೊನೆಯವರೆಗೂ [1980 ರ ಆರಂಭ] ಜನಪ್ರಿಯ ಅಲೆಗಳ ಸಿನಿಮಾ ಮಧ್ಯೆ ಹೊಸ ರೂಪ, ಹೊಸ ವಿನ್ಯಾಸ ಹಾಗೂ ಹೊಸ ಬಗೆಯ ನಿರ್ವಹಣೆ [ಆಯವ್ಯಯ]ಯಿಂದ ಉದಯಿಸಿದ್ದೇ ಹೊಸ ಅಲೆಗಳ ಚಿತ್ರ. ಸಾಮಾಜಿಕ ಸಮಸ್ಯೆಗಳ ತೀವ್ರತೆಯನ್ನು ವಾಸ್ತವದ ಭಿತ್ತಿಯ ಮೇಲೆ ಚಿತ್ರಿಸಲು ಹೊರಟವರು ಪ್ರಯತ್ನಶೀಲರು. ಬಂಗಾಳಿಯ ಋತ್ವಿಕ್‌ ಘಟಕ್‌ ಈ ನೆಲೆಯಲ್ಲಿ ಮುಂಚೂಣಿಯಲ್ಲಿದ್ದವರು. 1970 ರ ನಂತರ ಬಂದ ಹಲವು ಹೊಸ ಅಲೆಯ ಚಿತ್ರ ನಿರ್ದೇಶಕರ ಮೇಲೆ ಋತ್ವಿಕ್‌ ಘಟಕ್‌ ಪ್ರಭಾವ ಬೀರಿದವರು.

ಹಾಗಾಗಿ ಉತ್ಸವದಲ್ಲಿ ಋತ್ವಿಕ್‌ ಘಟಕ್‌ ರ ‘ಅಜಾಂತ್ರಿಕ್‌‘, ‘ಮೇಘ ದಕ್ಕ ತಾರಾ‘ ಪ್ರದರ್ಶಿತವಾಗುತ್ತಿವೆ. ಎರಡೂ ಬಹಳ ವಿಭಿನ್ನವೆನಿಸುವ ಚಿತ್ರಗಳು. ಇದರೊಂದಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಮೃಣಾಲ್‌ ಸೇನ್‌ ರ, ‘ಭುವನ್‌ ಶೋಮ್‌’, ಮಣಿಕೌಲ್‌ ಅವರ ‘ಉಸ್ಕಿ ರೋಟಿ’ ಹಾಗೂ ’ದುವಿದಾ’, ಜಿ. ಅರವಿಂದನ್‌ ಅವರ ‘ತಂಪು’ ಮತ್ತು ‘ಉತ್ಗರಾಯಣ‘, ಆಡೂರು ಗೋಪಾಲಕೃಷ್ಣನ್‌  ‘ಸ್ವಯಂವರಂ’, ಕುಮಾರ್‌ ಸಹಾನಿಯವರ ‘ತರಂಗ್‌’, ಜಾನ್‌ ಅಬ್ರಹಾಂರ ‘ಅಗ್ರಹಾರತಿಕಜುತೈ‘, ಶ್ಯಾಮ್‌ ಬೆನಗಲ್‌ ಅವರ ‘ಅಂಕುರ್‌‘ ಹಾಗೂ ‘ಭೂಮಿಕಾ‘ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

Advertisement

ಅನುಮಾನವೇ ಇಲ್ಲ ; ಇವರೆಲ್ಲರೂ ಭಾರತೀಯ ಭಾಷಾ ಚಿತ್ರರಂಗದ ಹೊಸ ಅಲೆಯನ್ನು ರೂಪಿಸಿದವರೇ? ಆದರೆ ಕನ್ನಡದಲ್ಲಿ ಈ ಹೊಸ ಅಲೆ ಉದ್ಭವಿಸಲೇ ಇಲ್ಲವೇ ಎಂಬುದು ಕೇಳಿಬರುತ್ತಿರುವ ಪ್ರಶ್ನೆ.

ಸಂಸ್ಕಾರ ವಿರಲಿಲ್ಲವೇ?

ಕನ್ನಡದಲ್ಲಿ ಪಟ್ಟಾಭಿರಾಮ ರೆಡ್ಡಿಯವರ ಸಂಸ್ಕಾರ ಚಿತ್ರ ನಿರ್ಮಾಣವಾಗಿ ಪ್ರದರ್ಶಿತವಾಗಿದ್ದು 1970ರಲ್ಲಿ. ಆ ವರ್ಷದ ರಾಷ್ಟ್ರೀಯ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪಡೆದುಕೊಂಡಿತ್ತು. ಹೊಸ ಅಲೆಯ ನೆಲೆಯಲ್ಲಿ ಗುರುತಿಸಲಾದ ಎಲ್ಲ ಮಾನದಂಡಗಳು [ಹೊಸ ಬಗೆಯ ನಿರೂಪಣೆ, ಕಥಾವಸ್ತು, ಕಡಿಮೆ ಬಜೆಟ್‌ ಇತ್ಯಾದಿ] ಇದಕ್ಕೂ ಅನ್ವಯಿಸಬಹುದಾಗಿತ್ತು. ಅದರಿಂದಲೇ ಹೊಸ ಅಲೆಯ ಚಿತ್ರಗಳಿಗೆ ಕೊಂಚ ವೇಗ ಒದಗಿತು. ಬಳಿಕ 1977 ರಲ್ಲಿ ಗಿರೀಶ್‌ ಕಾಸರವಳ್ಳಿಯವರ ಘಟಶ್ರಾದ್ಧ ಸಿನಿಮಾ ಪ್ರದರ್ಶಿತವಾಯಿತು. ಪ್ರಥಮ ಸ್ವರ್ಣ ಕಮಲ ಪ್ರಶಸ್ತಿಯನ್ನು [ರಾಷ್ಟ್ರೀಯ ಪ್ರಶಸ್ತಿ] ಯನ್ನು ಪಡೆದರು ಗಿರೀಶ್‌.  ಇದುವರೆಗೂ ತಮ್ಮ ನಾಲ್ಕು ಸ್ವರ್ಣ ಕಮಲ ಪ್ರಶಸ್ತಿ ಪಡೆದ ದಕ್ಷಿಣ ಭಾರತ ಚಿತ್ರರಂಗದ ಏಕೈಕ ನಿರ್ದೇಶಕರೆಂದರೆ ಗಿರೀಶ್‌.

ಈ ದೃಷ್ಟಿಕೋನದಲ್ಲಿ ನೋಡುವಾಗ, ಸಂಸ್ಕಾರ ಹಾಗೂ ಘಟಶ್ರಾದ್ಧ ಆಯ್ಕೆಯ ಮಾನದಂಡಗಳನ್ನು ಪೂರೈಸುತ್ತಿದ್ದವು. ಆದರೆ ಅವುಗಳಾವೂ ಆಯ್ಕೆಯಾಗಿಲ್ಲ. ಹಾಗಾಗಿ ಯಾವ ಹೆದ್ದೆರೆಯಲ್ಲಿ ನಮ್ಮ ಕನ್ನಡದ ಹೊಸ ಅಲೆ ಮುಳುಗಿ ಹೋಯಿತೋ ತಿಳಿಯುತ್ತಿಲ್ಲ.

ಹೀಗಾಗಿರಬಹುದೇ?

ಇದೊಂದು ಊಹೆ. ಆದರೂ, ಇದಕ್ಕೆ ಹಲವು ಕಾರಣಗಳು ತೋರುತ್ತಿವೆ. ಹೊಸ ಅಲೆಯ ಚಿತ್ರಗಳನ್ನೂ ಭಾರತೀಯ ನೆಲೆಯಲ್ಲಿ ಗುರುತಿಸಿದ್ದು ಎರಡು ಮಾದರಿಗಳಲ್ಲಿ. ಒಂದು-ನಿಜವಾದ ಭಾರತೀಯ ಅಸ್ಮಿತೆ ಇದ್ದ ಚಿತ್ರಗಳು ಎಂದರೆ ನೈಜ ಭಾರತೀಯ ನೆಲೆಯ ಹೊಸ ಅಲೆಯ ಚಿತ್ರಗಳು. ಮತ್ತೊಂದು-ಯುರೋಪಿಯನ್‌ ಶೈಲಿಯಿಂದ ಪ್ರಭಾವಿತವಾದ [ನಿಯೋ ರಿಯಲಿಸ್ಟಿಕ್‌ ] ನವ ವಾಸ್ತವವಾದಿ ಚಿತ್ರಗಳು. ಎರಡನ್ನೂ ಒಟ್ಟಾಗಿ ಕರೆಯುವಾಗ ಹೊಸ ಅಲೆಯ ಚಿತ್ರಗಳೆಂದೇ ಹೇಳುವುದುಂಟು. ಆಯ್ಕೆ ಸಮಿತಿಯ ಪಟ್ಟಿಯನ್ನು ಒಮ್ಮೆ ಕಾಣುವಾಗ ಈ ಊಹೆಯೇ ನಿಜವೆನಿಸುವುದುಂಟು.

ಈ ಪಟ್ಟಿಯಲ್ಲಿ ಹೊಸ ಅಲೆಯ ಚಿತ್ರಗಳ ಪ್ರವರ್ತಕ ಎನಿಸುವ ಸತ್ಯಜಿತ್‌ ರೇ ಸಹ ಸ್ಥಾನ ಪಡೆದಿಲ್ಲ.  ಬಿಮಲ್‌ರಾಯ್‌ ಸಹ ಇಲ್ಲ. ಗಿರೀಶ್‌ ಕಾಸರವಳ್ಳಿಯವರೂ ಇದೇ ಸಾಲಿನಲ್ಲಿರುವವರು. ಪಟ್ಟಿಯಲ್ಲಿರುವ ಋತ್ವಿಕ್‌ ಘಟಕ್‌, ಮೃಣಾಲ್ ಸೇನ್‌, ಜಿ. ಅರವಿಂದನ್‌, ಶ್ಯಾಮ್‌ ಬೆನಗಲ್‌ ಎಲ್ಲರೂ ಮೊದಲನೇ ಸಾಲಿನಲ್ಲಿ ಗುರುತಿಸಲ್ಪಡುವವರು. ಆಡೂರು ಸಹ ಒಬ್ಬ ಒಳ್ಳೆಯ ಚಿತ್ರ ನಿರ್ದೇಶಕ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವರ ಶೈಲಿಯೂ ನವ ವಾಸ್ತವವಾದದ್ದೇ. ಹಾಗಾದರೆ ಅವರು ಹೇಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದರು ? ಎಂಬುದೇ ಮತ್ತೊಂದು ಪ್ರಶ್ನೆ.

-ರೂಪರಾಶಿ

Advertisement

Udayavani is now on Telegram. Click here to join our channel and stay updated with the latest news.

Next