Advertisement

ಒಳ್ಳೇ ಸಿನಿಮಾ ಹೇಗಾಗುತ್ತೆ ಗೊತ್ತಾ?

06:00 AM Sep 21, 2018 | Team Udayavani |

“ನಾನು ಈ ಕಥೆ ಕೇಳ್ಳೋಕೆ ಅಂತ ಬೆಂಗಳೂರಿಗೆ ಬಂದೆ. ಕಥೆ ಬರೆದಿದ್ದ ಕಾರ್ತಿಕ್‌ ಅತ್ತಾವರ್‌ ಕಥೆ ಹೇಳಿ ಹನ್ನೆರೆಡು ನಿಮಿಷದ ಹೊತ್ತಿಗೆ ನಿಲ್ಲಿಸಿಬಿಟ್ಟರು. ಅದಾಗಲೇ ನನಗೆ ಕಥೆಯಲ್ಲೇನೋ ಇದೆ ಅಂತ ಅರ್ಥ ಆಗಿತ್ತು. ಸರಿ, ಮುಂದೆ ಕ್ಲೈಮ್ಯಾಕ್ಸ್‌ ಮಾತ್ರ ಹೇಳಿ ಅಂದೆ. ಅವರಿಗೆ ಕ್ಲೈಮ್ಯಾಕ್ಸ್‌ ಹೇಳ್ಳೋಕೆ ಆಗಲೇ ಇಲ್ಲ. ಮೂರು ದಿನ ಬಿಟ್ಟು ಮತ್ತೆ ಬನ್ನಿ ಅಂತ ಹೇಳಿ ಕಳುಹಿಸಿದೆ. ಪುನಃ ಮೂರು ದಿನ ನಂತರ ಬಂದರು. ಆಗಲೂ ಕ್ಲೈಮ್ಯಾಕ್ಸ್‌ ಹೇಳಲು ಸಾಧ್ಯವಾಗಲೇ ಇಲ್ಲ. ಕೊನೆಗೆ ನಿರ್ದೇಶಕ ಅಶ್ವತ್ಥ್ ಸ್ಯಾಮ್ಯುಯಲ್‌ ಬಿಡಿಸಿ ಹೇಳಿದರು. ನಾನೇನು ಅಂದುಕೊಂಡಿ ದ್ದೆನೋ ಅದೆಲ್ಲವೂ ಅಲ್ಲಿತ್ತು. ಹೊಸತನವಿತ್ತು. ಹಾಗಾಗಿ ಚಿತ್ರ ಒಪ್ಪಿಕೊಂಡೆ…’

Advertisement

– ಹೀಗೆ “ಅನುಕ್ತ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ ಬಗ್ಗೆ ನಟ ಸಂಪತ್‌ ರಾಜ್‌ ಹೇಳುತ್ತಾ ಹೋದರು. ಅಂದು ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಯಿತು. ಟೀಸರ್‌ ನೋಡಿದ ಸಂಪತ್‌ ರಾಜ್‌, “ಜನರನ್ನು ಚಿತ್ರ ಮಂದಿರದವರೆಗೆ ಕರೆತರಲು ಇದಿಷ್ಟು ಸಾಕು’ ಅಂತ ಹೇಳುತ್ತಲೇ, “ಒಳ್ಳೇ ಸಿನಿಮಾ ಆಗುವುದೆಂದರೆ ಅದು ಕಥೆ ಚೆನ್ನಾಗಿದ್ದಾಗ, ಅದಕ್ಕೆ ಪಕ್ಕಾ ತಯಾರಿ ಇದ್ದಾಗ, ಅಂಥದ್ದಕ್ಕೊಂದು ಬೆಂಬಲ ಇದ್ದಾಗ. ಇಲ್ಲಿ ಎಲ್ಲವೂ ಸರಿಯಾಗಿದೆ. ಹಾಗಾಗಿ ಕನ್ನಡಕ್ಕೊಂದು ಹೊಸತನದ ಚಿತ್ರ ಇದಾಗಲಿದೆ. ನನ್ನ ಪಾತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಹೈಲೆಟ್‌ ಅದು. ತುಂಬ ಗ್ಯಾಪ್‌ ಬಳಿಕ ನಾನಿಲ್ಲಿ ಅನು ಪ್ರಭಾಕರ್‌ ಜೊತೆ ನಟಿಸಿದ್ದೇನೆ. ಹೊಸ ತಂಡವಾದರೂ, ಪಕ್ಕಾ ತಯಾರಿ ಮಾಡಿಕೊಂಡೇ ಚಿತ್ರ ಮಾಡಿದೆ. ನನಗೆ ಹೊಸ ತಂಡ ಅಂತ ಅನಿಸಲೇ ಇಲ್ಲ. ಅಷ್ಟರಮಟ್ಟಿಗೆ ತಯಾರಿ ಇತ್ತು’ ಎಂದರು ಸಂಪತ್‌ ರಾಜ್‌.

ನಿರ್ದೇಶಕ ಅಶ್ವತ್ಥ್ ಸ್ಯಾಮ್ಯುಯಲ್‌, ನಮ್ಮಂತಹ ಹೊಸಬರ ಜೊತೆ ದಿಗ್ಗಜರು ಸಾಥ್‌ ನೀಡಿದ್ದಾರೆ. ನನ್ನ ತಪ್ಪುಗಳನ್ನು ತಿದ್ದಿದ್ದಾರೆ. ಸಂಪತ್‌ ರಾಜ್‌ ಸರ್‌, ಕ್ಲೈಮ್ಯಾಕ್ಸ್‌ ದೃಶ್ಯ ಯಾಕೋ ಸರಿ ಬಂದಿಲ್ಲ, ಮತ್ತೂಮ್ಮೆ ಮಾಡೋಣ ಅಂತ ಕಾಳಜಿ ವಹಿಸಿ ಆ ದೃಶ್ಯ ಚಿತ್ರೀಕರಣ ಮಾಡಿಸಿದರು. ಇಲ್ಲಿ ಎಲ್ಲರ ಸಹಕಾರ, ಪ್ರೋತ್ಸಾಹದಿಂದ “ಅನುಕ್ತ’ ನಿರೀಕ್ಷೆ ಮೀರಿ ಮೂಡಿಬಂದಿದೆ’ ಅಂದರು ಅಶ್ವತ್ಥ್.

ನಾಯಕ ಕಾರ್ತಿಕ್‌ ಅತ್ತಾವರ್‌ ಚಿತ್ರಕ್ಕೆ ಕಥೆ ಕೂಡ ಕೊಟ್ಟಿದ್ದಾರೆ. “ನಿರ್ದೇಶಕರ ಶ್ರಮ, ನಿರ್ಮಾಪಕರ ಸಹಕಾರ ಮತ್ತು ಸಂಪತ್‌ ರಾಜ್‌, “ಸಿದ್ಲಿಂಗು” ಶ್ರೀಧರ್‌ ಅವರಂತಹ ಪ್ರೋತ್ಸಾಹದಿಂದ ಚಿತ್ರ ನನ್ನೆಲ್ಲಾ ನಿರೀಕ್ಷೆ ಮೀರಿ ಬಂದಿದೆ’ ಎಂಬ ವಿವರ ಕೊಟ್ಟರು ಕಾರ್ತಿಕ್‌ ಅತ್ತಾವರ್‌.

“ಸಿದ್ಲಿಂಗು’ ಶ್ರೀಧರ್‌ ಅವರಿಗೆ ಟೀಸರ್‌ ನೋಡಿದಾಗ, ಸಿನಿಮಾ ನೋಡಲೇಬೇಕೆನಿಸುತ್ತಿದೆಯಂತೆ. ಇಲ್ಲಿ ಎಲ್ಲರೂ ಹೊಸಬರೇ. ಆದರೆ, ಎಲ್ಲರೂ ಅನುಭವಿಗಳಂತೆ ಕೆಲಸ ಮಾಡಿದ್ದಾರೆ. ಅವರ ಶ್ರಮ ಈ ಟೀಸರ್‌ನಲ್ಲಿ ಕಾಣುತ್ತದೆ’ ಎಂಬುದು ಶ್ರೀಧರ್‌ ಅವರ ಮಾತು.

Advertisement

ದುಬೈನಲ್ಲಿ ವಾಸವಾಗಿರುವ ನಿರ್ಮಾಪಕ ಹರೀಶ್‌ ಬಂಗೇರ ಅವರಿಗೆ ಮೊದಲಿನಿಂದಲೂ ಕನ್ನಡ ದಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡ ಬೇಕೆಂಬ ತುಡಿತ ಇತ್ತಂತೆ. ಅದು “ಅನುಕ್ತ’ ಮೂಲಕ ಈಡೇರಿದೆ ಎಂದು ಹೇಳುವ ಹರೀಶ್‌ ಬಂಗೇರ, ಒಳ್ಳೆಯ ಚಿತ್ರ ಮಾಡಿದ ತೃಪ್ತಿ ನನಗಿದೆ. ಹೊಸ ಪ್ರತಿಭೆಗಳೇ ಇಂದು ಸದ್ದು ಮಾಡುತ್ತಿವೆ. ಆ ಸಾಲಿಗೆ “ಅನುಕ್ತ’ ಸೇರಲಿದೆ’ ಎಂಬ ವಿಶ್ವಾಸ ಅವರದು.

ನೊಬಿನ್‌ ಪಾಲ್‌ ಸಂಗೀತ ನೀಡಿದ್ದಾರೆ. ಇಲ್ಲಿ ಹಿನ್ನೆಲೆ ಸಂಗೀತಕ್ಕೆ ಮಂಗ ಳೂರಿನ ಕೆಲ ವಿಶೇಷ ವಾದ್ಯ ಬಳಸಿ ದ್ದಾಗಿ ಹೇಳಿಕೊಂಡರು. ಅವರ ಪ್ರಕಾರ, ಇದು ಕನ್ನಡಕ್ಕೆ ಬೆಸ್ಟ್ ಥ್ರಿಲ್ಲರ್‌ ಸಿನಿಮಾ ಆಗಲಿದೆ ಎಂಬ ವಿಶ್ವಾಸ ಅವರದ್ದು. ವಿಶ್ವ ಸಂಕಲನ ಮಾಡಿದರೆ, ಸಂತೋಷ್‌ ಕಾರ್ತಿಕ್‌ ಜೊತೆ ಕಥೆ ಬರೆದಿದ್ದಾರೆ. ನವೀನ್‌ ಶರ್ಮ, ಕಿರಣ್‌ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಮನೋಹರ್‌ ಜೋಶಿ ಛಾಯಾಗ್ರಹಣವಿದೆ. 

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next