ನವದೆಹಲಿ: ಇಲ್ಲಿನ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲೊಂದು ವಿಶ್ವದಾಖಲೆಗೆ ವೇದಿಕೆ ಸಿದ್ಧವಾಗಿದೆ. ಹೊರಾವರಣದಲ್ಲಿ ಸಿದ್ಧವಾದ ಅತಿದೀರ್ಘ ಗೋಡೆಚಿತ್ರವೆಂಬ ಖ್ಯಾತಿ ಸದ್ಯದಲ್ಲೇ ಇದಕ್ಕೆ ಸಿಗಲಿದೆ.
ಪ್ರಸ್ತುತ ದ.ಕೊರಿಯ ಹೆಸರಿನಲ್ಲಿ ಈ ವಿಶ್ವದಾಖಲೆಯಿದೆ. ಅಲ್ಲಿನ ಸ್ಥಳವೊಂದರಲ್ಲಿ 23,688 ಚದರ ಮೀಟರ್ ದೂರದವರೆಗೆ ಗೋಡೆಚಿತ್ರ ನಿರ್ಮಾಣವಾಗಿದೆ. ಪ್ರಗತಿ ಮೈದಾನದಲ್ಲಿ 98,000 ಚದರ ಮೀಟರ್ ದೂರ ಗೋಡೆಚಿತ್ರವಿರಲಿದೆ!
ಅಂದರೆ 3 ಕಿ.ಮೀ. ದೂರ ಅತ್ಯದ್ಭುತ ಚಿತ್ರಗಳು ಕಣ್ಣಿಗೆ ಕಟ್ಟಲಿವೆ. ದೆಹಲಿ ರಾಷ್ಟ್ರೀಯ ರಾಜಧಾನಿ. ಇಲ್ಲಿ ದೇಶದ ಮೂಲೆಮೂಲೆಗಳಿಂದ ಬಂದು ಜನ ನೆಲೆಸಿದ್ದಾರೆ. ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದಾರೆ.
ಹಾಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹಬ್ಬಗಳನ್ನು ಗೋಡೆಗಳಲ್ಲಿ ಚಿತ್ರಿಸಲಾಗಿದೆ. ಎಲ್ಲ ಜನರ ಸಂಸ್ಕೃತಿಗಳೂ ಇಲ್ಲಿ ಕಾಣುತ್ತವೆ. ವರ್ಷದ ಆರೂ ಋತುಗಳಲ್ಲಿ ಭಾರತೀಯರ ಜೀವನಕ್ರಮ ಹೇಗಿರುತ್ತದೆ ಎಂಬ ಚಿತ್ರಗಳೂ ಇವೆ. ದೆಹಲಿಯ ಸ್ಥಳೀಯ ಸಂಸ್ಕೃತಿಯೂ ಚಿತ್ರಿತವಾಗಿ ಗೋಡೆ ನಳನಳಿಸುತ್ತಿದೆ.
ಒಂದು ಕಡೆಯಿಂದ ಈ ಚಿತ್ರಗಳನ್ನು ನೋಡಿಕೊಂಡು ಹೊರಟರೆ, ತನ್ನೊಂದಿಗೆ ಚಿತ್ರಗಳೂ ಚಲಿಸುತ್ತಿವೆಯೋ ಎಂಬ ಭಾವವನ್ನು ನೋಡುಗ ತಳೆಯುತ್ತಾನೆ. ಇಂತಹ ಭಾವವನ್ನು ಮೂಡಿಸುವುದಕ್ಕೆ ಕೈನೆಟಿಕ್ ಚಿತ್ರ ಮಾದರಿ ಎನ್ನುತ್ತಾರೆ. ವಿಶೇಷವೆಂದರೆ ಎಲ್ಲೂ ಈ ಚಿತ್ರಗಳಿಗೆ ತಡೆಯಿಲ್ಲದೇ ನಿರಂತರವಾಗಿ ಸಾಗುತ್ತವೆ. ಈಗಾಗಲೇ ಸುರಂಗ ಮಾರ್ಗ ನಿರ್ಮಾಣ, ಚಿತ್ರರಚನೆ ಶೇ.90 ಮುಗಿದಿದೆ. ಸದ್ಯದಲ್ಲೇ ವಿಶ್ವದಾಖಲೆ ಪಟ್ಟಿಗೂ ಸೇರಿಕೊಳ್ಳಲಿದೆ.