ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಟೀಕೆ ಮುಂದುವರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಂಗಾಳದ ಜನರು ಎಂದಿಗೂ ವಿಭಜಕ ರಾಜಕೀಯಕ್ಕೆ ತಲೆಬಾಗುವುದಿಲ್ಲ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಪಂಚಾಯತ್ ರಾಜ್ ಪರಿಶದ್ ಜೊತೆ ವಿಡಿಯೋ ಕಾನ್ಫರೆನ್ಸ್ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೇಗೆ ರಕ್ತದೊಂದಿಗೆ ಆಡಿದೆ ಎಂದು ಇಡೀ ದೇಶವೇ ನೋಡಿದೆ. ಇಷ್ಟೆಲ್ಲಾ ಮಿತಿಮೀರಿದ ಹೊರತಾಗಿಯೂ, ಬಂಗಾಳದ ಜನರು ಬಿಜೆಪಿಗೆ ಆಶೀರ್ವಾದ ಮಾಡುವುದನ್ನು ಮುಂದುವರೆಸಿದ್ದಾರೆ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಆದರೆ ಅವರು ಗೆದ್ದಾಗ, ಅವರಿಗೆ ಮೆರವಣಿಗೆಗಳಿಗೆ ಅವಕಾಶ ನೀಡಲಿಲ್ಲ ಮತ್ತು ಅವರ ಮೇಲೆ ಜೀವ ಬೆದರಿಕೆಯ ದಾಳಿಗಳು ನಡೆದವು” ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಮಮತಾ, ರಾಜ್ಯದ ಬಿಜೆಪಿ ನಾಯಕರನ್ನು ಸಂತೋಷಪಡಿಸಲು ನರೇಂದ್ರ ಮೋದಿ ಅವರು ಬಂಗಾಳವನ್ನು “ಅವಮಾನಿಸಿದರು, ವಂಚಿಸಿದರು, ತುಳಿಸಿದರು ಮತ್ತು ನೋವನ್ನುಂಟುಮಾಡಿದರು” ಎಂದು ಹೇಳಿದರು.
ವಿದೇಶಗಳಿಗೆ ಭೇಟಿ ನೀಡುವುದು, ಡೀಲ್‌ಗಳನ್ನು ಮಾಡುವುದು, ಉಡುಗೊರೆಗಳನ್ನು ನೀಡುವುದು, ಪ್ರಮಾಣಪತ್ರಗಳೊಂದಿಗೆ ಹಿಂದಿರುಗುವುದು ಮತ್ತು ಅವರ ಪ್ರವಾಸಗಳ ಕುರಿತು ಸಂಸತ್ತಿಗೆ ವಿವರಸಿಲು ಅವರು ಹಿಂಜರಿಯಲಿಲ್ಲ ಎಂದು ಮಮತಾ ಆರೋಪಿಸಿದರು.
“ಜನರಿಗೆ ಮಾನವೀಯತೆಯ ಸಂದೇಶವನ್ನು ನೀಡುವ ಬದಲು, ಪ್ರಧಾನಿಯವರು ಇಂದು ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳವನ್ನು ಕೆಣಕಲು ನಿರ್ಧರಿಸಿದ್ದಾರೆ. ಬಂಗಾಳವನ್ನು ನೆನಪಿಸಿಕೊಂಡಿದ್ದಕ್ಕಾಗಿ ನಾನು ಪ್ರಧಾನಿ ಕುರ್ಚಿಗೆ ಧನ್ಯವಾದ ಹೇಳುತ್ತೇನೆ, ವ್ಯಕ್ತಿಗೆ ಅಲ್ಲ. ಇಲ್ಲಿ ಬಿಜೆಪಿ ನಾಯಕರನ್ನು ತೃಪ್ತಿಪಡಿಸಲು ಅವರು ಬಂಗಾಳವನ್ನು ಅವಮಾನಿಸಿದ್ದಾರೆ. .100 ದಿನಗಳ ಕೆಲಸ (MGNREGA) ಯೋಜನೆಯಡಿ ಬಡವರ ವೇತನವನ್ನು ತಡೆಹಿಡಿಯಲಾಗಿದೆ. ಈ ಯೋಜನೆಗಾಗಿ ಭಾರತ ಸರ್ಕಾರವು ಸತತ ಐದು ಬಾರಿ ಅಗ್ರಸ್ಥಾನದ ರಾಜ್ಯವಾಗಿ ನಮಗೆ ಬಹುಮಾನ ನೀಡಿದೆ,” ಮಮತಾ ಬ್ಯಾನರ್ಜಿ ಹೇಳಿದರು.
“ಮಣಿಪುರವು ಕಳೆದ 100 ದಿನಗಳಿಂದ ಹೊತ್ತಿ ಉರಿಯುತ್ತಿದೆ, ಮಣಿಪುರದಂತಹ ಸಣ್ಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಲು ಪ್ರಧಾನಿಗೆ ಸಾಧ್ಯವಾಗದಿದ್ದರೆ ಅವರು ಇಡೀ ದೇಶವನ್ನು ಹೇಗೆ ನಡೆಸುತ್ತಾರೆ. ಪ್ರತಿ ಹೆಜ್ಜೆಯಲ್ಲೂ ಬಂಗಾಳವನ್ನು ದೂಷಿಸುತ್ತಾ, ಬೆದರಿಸುತ್ತಾ ಹೋದರೆ ಅವರು ದೇಶವನ್ನು ಹೇಗೆ ನಡೆಸಬಲ್ಲರು? ಬಂಗಾಳದ ಜನರು ಎಂದಿಗೂ ವಿಭಜನೆ ಮತ್ತು ಗಲಭೆಗಳ ರಾಜಕೀಯಕ್ಕೆ ಶರಣಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು”ಎಂದು ಅವರು ಹೇಳಿದರು.