ಹೊಸದಿಲ್ಲಿ: ಪ್ರಯಾಗರಾಜ್ ನಲ್ಲಿ ಏಪ್ರಿಲ್ 15 ರಂದು ಪೊಲೀಸ್ ಕಸ್ಟಡಿಯಲ್ಲಿದ್ದ ಮಾಜಿ ಲೋಕಸಭಾ ಸದಸ್ಯ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆ ಮಾಡಲು “ಯಾರೋ ಸಹಕರಿಸಿದ್ದಾರೆ” ಎಂದು ಗಮನಿಸಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ 2017 ರಿಂದ ನಡೆದ 183 ಪೊಲೀಸ್ ಎನ್‌ಕೌಂಟರ್ ಗಳ ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಳಿದೆ.
ರಾಜ್ಯ ಪೊಲೀಸರ ಪ್ರಕಾರ, ಯೋಗಿ ಆದಿತ್ಯನಾಥ್ ಸರ್ಕಾರವು ಮಾರ್ಚ್ 2017 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಪೊಲೀಸ್ ಎನ್ ಕೌಂಟರ್ ಗಳಲ್ಲಿ 183 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹಲವಾರು ಎನ್ ಕೌಂಟರ್ ಗಳನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಯೋಗಿ ಸರ್ಕಾರದ ವಿರೋಧ ಪಕ್ಷಗಳು ಹಲವು ಬಾರಿ ಹೇಳಿವೆ.
ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರ ಪೀಠವು ಶುಕ್ರವಾರ ಈ ಎನ್‌ಕೌಂಟರ್‌ಗಳ ವಿವರಗಳು, ತನಿಖೆಯ ಸ್ಥಿತಿ, ಸಲ್ಲಿಸಿದ ಚಾರ್ಜ್ ಶೀಟ್‌ಗಳು ಮತ್ತು ವಿಚಾರಣೆಯ ಸ್ಥಿತಿಯ ವಿವರಗಳನ್ನು ಆರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ:Blockbuster Gadar 2: 100 ಕೋಟಿ ಗಳಿಕೆಯತ್ತ ಸನ್ನಿ ಡಿಯೋಲ್ ಚಿತ್ರ
5 ರಿಂದ 10 ಮಂದಿ ಆತನಿಗೆ (ಅತಿಕ್) ಕಾವಲು ಕಾಯುತ್ತಿದ್ದರು. ಯಾರೋ ಸುಮ್ಮನೆ ಬಂದು ಗುಂಡು ಹಾರಿಸುವುದು ಹೇಗೆ? ಇದು ಹೇಗೆ ನಡೆಯುತ್ತದೆ? ಯಾರೋ ಶಾಮೀಲಾಗಿದ್ದಾರೆ,’’ ಎಂದು ಪೀಠ ಗಮನಿಸಿತು.
ಗ್ಯಾಂಗ್ ಸ್ಟರ್-ರಾಜಕಾರಣಿ ಅಹ್ಮದ್ ಅವರ ಸಹೋದರಿ ಆಯಿಷಾ ನೂರಿ ತನ್ನ ಸಹೋದರರ ಹತ್ಯೆಯ ಸಮಗ್ರ ತನಿಖೆಗೆ ನಿರ್ದೇಶನವನ್ನು ಕೋರಿ ಮಾಡಿದ ಮನವಿಯ ಮೇರೆಗೆ ಯುಪಿ ಸರ್ಕಾರಕ್ಕೆ ನೋಟಿಸ್ ನೀಡಿದೆ.