ದುಬೈ: ಐಸಿಸಿ ವನಿತಾ ಟಿ20 ವಿಶ್ವಕಪ್ 2024ರಲ್ಲಿ (Women’s T20 World Cup 2024) ಆಡಿದ ಮೊದಲ ಪಂದ್ಯದಲ್ಲಿ ಭಾರತ ವನಿತಾ ತಂಡವು ಹೀನಾಯ ಸೋಲು ಕಂಡಿದೆ. ನ್ಯೂಜಿಲ್ಯಾಂಡ್ ವಿರುದ್ದದ ದುಬೈನಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್ ಬಳಗವು 58 ರನ್ ಅಂತರದ ಸೋಲು ಕಂಡಿದೆ.
ಶುಕ್ರವಾರ (ಆ.04) ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ವಿರುದ್ದ 58 ರನ್ ಗಳ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 160 ರನ್ ಮಾಡಿದರೆ, ಭಾರತವು 19 ಓವರ್ ಗಳಲ್ಲಿ ಕೇವಲ 102 ರನ್ ಗಳಿಗೆ ಆಲೌಟಾಯಿತು.
ಬಲಿಷ್ಠ ತಂಡಗಳಿರುವ ಗ್ರೂಪ್ ಎ ನಲ್ಲಿರುವ ಭಾರತಕ್ಕೆ ಇದೀಗ ಸೆಮಿ ಫೈನಲ್ ಪ್ರವೇಶ ಕಷ್ಟಕರವಾಗಿದೆ. ಕಿವೀಸ್ ವಿರುದ್ದದ ಸೋಲು ಭಾರತದ ಸೆಮಿಫೈನಲ್ ನಿರೀಕ್ಷೆಗೆ ಕಡಿವಾಣ ಹಾಕಿದೆ. ನ್ಯೂಜಿಲ್ಯಾಂಡ್, ಪಾಕಿಸ್ತಾನ, ಏಷ್ಯನ್ ಚಾಂಪಿಯನ್ ಶ್ರೀಲಂಕಾ ಮತ್ತು ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯ ತಂಡಗಳು ಭಾರತವಿರುವ ಎ ಗುಂಪಿನಲ್ಲಿದೆ. ಪ್ರತಿ ಗುಂಪಿನಿಂದ ಮೊದಲ ಎರಡು ತಂಡಗಳು ಮಾತ್ರ ಸೆಮಿ ಫೈನಲ್ ಹಂತವನ್ನು ಪ್ರವೇಶಿಸುತ್ತವೆ. ನ್ಯೂಜಿಲ್ಯಾಂಡ್ ವಿರುದ್ಧದ ಭಾರಿ ಸೋಲಿನೊಂದಿಗೆ ಭಾರತದ ರನ್-ರೇಟ್ ಕೂಡಾ -2.900 ಆಗಿ ಹೀನಾಯ ಪರಿಸ್ಥಿತಿಗೆ ತಳ್ಳಿದೆ.
ಭಾರತವು ಸೆಮಿ-ಫೈನಲ್‌ಗೆ ಪ್ರವೇಶಿಸಲು ಪಾಕಿಸ್ತಾನ (ಭಾನುವಾರ) ಮತ್ತು ಶ್ರೀಲಂಕಾ (ಅಕ್ಟೋಬರ್ 9) ತಂಡಗಳನ್ನು ಉತ್ತಮ ಅಂತರದಿಂದ ಸೋಲಿಸಬೇಕಾಗಿದೆ. ಇದರಿಂದ ಅವರು ನಾಲ್ಕು ಅಂಕಗಳನ್ನು ಪಡೆಯುವುದು ಮಾತ್ರವಲ್ಲದೆ ತಮ್ಮ ರನ್-ರೇಟ್ ಕೂಡಾ ಸುಧಾರಿಸಬೇಕಿದೆ. ಭಾರತದ ಕೊನೆಯ ಗ್ರೂಪ್ ಹಂತದ ಪಂದ್ಯವು ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಭಾರತವು ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಉತ್ತಮ, ಒಂದು ವೇಳೆ ಸೋತರೆ, ಮತ್ತೊಂದೆಡೆ ನ್ಯೂಜಿಲ್ಯಾಂಡ್ ತನ್ನ ಉಳಿದಿರುವ ಎರಡು ಪಂದ್ಯಗಳಲ್ಲಿ ಸೋತರೆ ನಂತರ ಉತ್ತಮ ರನ್-ರೇಟ್ ಆಧಾರದಲ್ಲಿ ಮುಂದಿನ ಹಂತಕ್ಕೆ ತಲುಪಬಹುದು.