Advertisement

ನಗರಗಳು ಕುದಿವ ಕುಲುಮೆಗಳಾಗುವುದನ್ನು ತಡೆಯೋದು ಹೇಗೆ?

06:00 AM May 05, 2018 | |

ನಗರಗಳಿಗೆ ಮರಗಳು ಬೇಕು ಎಂಬುದು ಹೊಸ ಮಾತಲ್ಲ, ಬಹಳ ಹಳೆಯದು. ಆದರೂ ಗಮನಕೊಟ್ಟಿದ್ದು ಕಡಿಮೆ. ಭವಿಷ್ಯದಲ್ಲಿ ನಾವು ಓವನ್‌ನಲ್ಲಿ ಬೇಯುವ ಮೈದಾಹಿಟ್ಟಿನ ಬ್ರೆಡ್‌ನ‌ಂತೆಯೇ.

Advertisement

ದೇಶದಷ್ಟೇ ಅಲ್ಲ; ಜಗತ್ತಿನ ಯಾವುದೇ ಮಹಾನಗರಗಳ ಬಗ್ಗೆ ಮಾತು ಆರಂಭಿಸುವ ಮೊದಲೇ ಸುಸ್ತಾಗಿ ಬಿಡುತ್ತೇವೆ. ಯಾರಲ್ಲಾ ದರೂ ಬೆಂಗಳೂರು ಎಂದು ಮಾತು ಆರಂಭಿಸಿ. “ಬಹಳ ಪೊಲ್ಯೂಷನ್‌ ಅಂತೆ, ಮರಗಳೇ ಇಲ್ವಂತೆ. ಕಷ್ಟ ಆಗೋಲ್ವಾ ಇರೋಕೆ?’ ಎಂದು ಪ್ರಶ್ನೆಗಳ ಸರಮಾಲೆಯೇ ನಮ್ಮ ಕಣ್ಣೆದುರು ನಿಲ್ಲುತ್ತದೆ. ಈ ಮಾತು ಈಗಾಗಲೇ ಹೇಳಿದಂತೆ ಬೆಂಗಳೂರಿಗಷ್ಟೇ ಅಲ್ಲ; ಎಲ್ಲ ನಗರಗಳಿಗೂ. ವಿಚಿತ್ರವೆಂದರೆ, ನಮ್ಮ ಬಹುತೇಕ ನಗರಗಳನ್ನು ನೋಡಿದರೆ ಮೇಲಿನ ಮಾತಿಗೂ ವಾಸ್ತವಕ್ಕೂ ಬಹಳ ಭಿನ್ನವಾಗಿರುವುದಿಲ್ಲ. ಪ್ರತಿ ಮಹಾ ನಗರಗಳೂ ಇಂದು ಬೇಕಾಬಿಟ್ಟಿಯಾಗಿ ಬೆಳೆಯುತ್ತಿರುವುದು ತನ್ನಲ್ಲಿನ ಸುಸ್ಥಿರತೆಯ ಮೂಲದ್ರವ್ಯವಾದ ಪರಿಸರವನ್ನು ಬಲಿಗೊಡುತ್ತಲೇ. ಹಸಿರು ರಾಶಿಯನ್ನು ದುಂದು ವ್ಯಯ ಮಾಡುತ್ತಲೇ ಎಲ್ಲ ಅಭಿವೃ ದ್ಧಿಯ ಕನಸು ಸೃಷ್ಟಿಯಾಗುತ್ತಿರುವುದು. ಹಾಗೆಂದು ನಾವು ವನ ಮಹೋತ್ಸವಗಳನ್ನು ನಿಲ್ಲಿಸಿಲ್ಲ. ನಮ್ಮ ಇಲಾಖೆಗಳು ಬೆಂಗಳೂರು ಸೇರಿ ದಂತೆ ಎಲ್ಲೆಡೆಯೂ ಪ್ರತಿ ವರ್ಷ ವನಮಹೋತ್ಸವವನ್ನು ನಡೆಸುತ್ತವೆ. 

ಜೂನ್‌ 5 ರಂದು ವಿಶ್ವ ಪರಿಸರ ದಿನವನ್ನೂ ಭರ್ಜರಿಯಾಗಿಯೇ ಆಚರಿಸುತ್ತೇವೆ. ಯಾವುದಾದರೂ ಪಂಚತಾರಾ ಹೋಟೆಲ್‌ನಲ್ಲಿ ಸಾಕಷ್ಟು ದೊಡ್ಡದೇ ಎನಿಸುವಂಥ ಕಾರ್ಯಕ್ರಮಇಟ್ಟು, ಬೇಕಾಬಿಟ್ಟಿ ವಿದ್ಯುತ್‌, ಸಂಪನ್ಮೂಲಗಳನ್ನು ಯಥೇತ್ಛವಾಗಿ ಬಳಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸಬೇಕಿದೆ ಎಂದು ಭಾಷಣ ಕೇಳಿ ತಣ್ಣಗಾಗುತ್ತೇವೆ. ಇದೇ ಮಾತು ವಿಶ್ವ ಭೂಮಿ ದಿನಕ್ಕೂ ಅನ್ವಯಿಸುವಂಥದ್ದು. ನಮ್ಮಲ್ಲಿ ಬಹುತೇಕರಿಗೆ ಪ್ರತಿ ದಿನದ ಆಚರಣೆಗಳು ಮುಗಿಸಿಬಿಡಬೇಕಾದ ಅವಸರದ ಒಂದು ಕಟ್ಟಳೆಯಷ್ಟೇ. 

ಬೆಂಗಳೂರಿನ ಕಥೆ
ಹಿಂದೆ ಕಾಡೆಂದರೆ ದಟ್ಟ ಕಾನನ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದ ಕಾಲವಿತ್ತು. ನೀವು ಯಾವುದೇ ನಗರಕ್ಕೆ ಹತ್ತೋ, ಇಪ್ಪತ್ತೋ ವರ್ಷಗಳ ಬಳಿಕ ಬಂದವರು ಉದ್ಗರಿಸುವುದೇ ಹೀಗೆ, “ಅಬ್ಟಾ..ಏನಿದು? ಇಷ್ಟೊಂದು ಬಿಲ್ಡಿಂಗ್ಸ್‌. ನಾನು ಈ ಊರಿನಲ್ಲಿದ್ದಾಗ ಇಲ್ಲೆಲ್ಲಾ ಬರಲಿಕ್ಕೇ ಆಗುತ್ತಿರಲಿಲ್ಲ. ಬರೀ ಕಾಡು..ಗಿಡ ಮರಗಳು. ಕ್ರೂರ ಪ್ರಾಣಿಗಳೆಲ್ಲಾ ಇದ್ದವು’ ಎಂದು ವಿವರಿಸುತ್ತಾರೆ. ಅದೆಲ್ಲವೂ ಇಂದಿಗೆ ನೆನಪು. ಏಕೆಂದರೆ ನಗರವೆಂಬುದು ವ್ಯಾಪಿಸಿಕೊಳ್ಳುತ್ತಿರುವುದೇ ಈ ಕಾಡಿನ ಪ್ರದೇಶವನ್ನು ಕರಗಿಸಿಕೊಂಡು. ಬೆಂಗಳೂರಿನ ಬಗ್ಗೆಯೇ ಹೇಳುವು ದಾದರೆ, ಸುಮಾರು ಹತ್ತು ಲಕ್ಷ ಮರಗಳಿರಬಹುದು ಎಂಬ ಅಂದಾ ಜಿದೆ. ಬೆಂಗಳೂರು ಮಹಾನಗರಪಾಲಿಕೆಯನ್ನು ಕೇಳಿದರೆ ಸಾಕಷ್ಟು ಮರಗಳಿವೆ ಎಂಬ ಉತ್ತರ ಸಿಗಬಹುದು. ಒಂದು ಲೆಕ್ಕದ ಪ್ರಕಾರವೇ, ಸುಮಾರು 18 ಸಾವಿರ ಮರಗಳನ್ನು ಕಳೆದ ಏಳೆಂಟು ವರ್ಷಗಳಲ್ಲಿ ಕಡಿಯಲಾಗಿದೆ. ಈ ಪೈಕಿ ಸುಮಾರು 2008-09ರಿಂದ 2017ರವರೆಗೆ ಸುಮಾರು 18 ಸಾವಿರ ಮರಗಳನ್ನು ನಮ್ಮ ಮೆಟ್ರೋ, ಫ್ಲೈಓವರ್‌, ರಸ್ತೆ ಅಗಲಗೊಳಿಸುವುದೂ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗೆ ಕಡಿಯಲಾಗಿದೆ.  ಅಷ್ಟೇ ಅಲ್ಲ. ನಾಗರಿಕರಾದ ನಾವೂ ಹಲವು ಕಾರಣಗಳಿಗೆ ಸುಮಾರು 11,500 ಮರಗಳನ್ನು ಕಡಿಯಲು ಮನವಿ ಮಾಡಿದ್ದೇವೆ. ಸುಮಾರು 35 ಸಾವಿರ ಮರಗಳ ರೆಂಬೆ-ಕೊಂಬೆಗಳನ್ನು ಕಡಿಯಲಾಗಿದೆಯಂತೆ. ಇದರ ಉದ್ದೇಶವೂ ಅದೇ. ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಉಂಟು ಮಾಡುವಂಥ ಅಥವಾ ದಾರಿದೀಪ ಇತ್ಯಾದಿಗೆ ತಾಗುತ್ತಿರುವಂಥ ಮರಗಳ ಕೊಂಬೆಗಳು. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮಹಾನಗರ ಪಾಲಿಕೆ ನಾವು ಮರಗಳನ್ನಷ್ಟೇ ಕಡಿದಿಲ್ಲ, ಬದಲಿಗೆ ಸಾಕಷ್ಟು ನೆಟ್ಟಿದ್ದೇವೆ ಎಂದು ಹೇಳಿತ್ತು. ಅದರ ಪ್ರಕಾರ ಇತ್ತೀಚಿನ ಐದಾರು ವರ್ಷಗಳಲ್ಲಿ ನಗರದಲ್ಲಿ ಸುಮಾರು 7 ಲಕ್ಷ ಸಸಿಗಳನ್ನು ನೆಟ್ಟಿದೆ. ಅವುಗಳಲ್ಲಿ ಎಷ್ಟು ಉಳಿದಿವೆ ಎಂಬುದಕ್ಕೆ ಬೇರೆ ಲೆಕ್ಕ ಕೇಳಬೇಕಿದೆ. ಹಾಗೆಂದು ಅವೆಲ್ಲವೂ ಬದುಕಿವೆಯೆಂದು ನಂಬುವಂತಿಲ್ಲ. ಏಕೆಂದರೆ, 2014 ರಲ್ಲಿ ಐಐಎಸ್‌ಸಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆ ಪ್ರಕಾರ ನಾಲ್ಕು ದಶಕಗಳಲ್ಲಿ 40 ಲಕ್ಷ ಮರಗಳ ಸಂಖ್ಯೆ ಸುಮಾರು 15 ಲಕ್ಷಕ್ಕೆ ಇಳಿದಿತ್ತು. ನಾಲ್ಕು ವರ್ಷಗಳಲ್ಲಿ ಹೆಚ್ಚೆಂದರೆ ಕೆಲವು ಸಾವಿರ ಮರಗಳು ನಗರ ಅರಣ್ಯದ ವ್ಯಾಪ್ತಿಗೆ ಸೇರಿರಬಹುದು. ಅದರೊಂದಿಗೇ ನಮ್ಮ ನಗರೀಕರಣ, ಅಭಿವೃದ್ಧಿಯ ರಥ ಸಾಗುತ್ತಿದೆಯಲ್ಲ, ಅದೇನೂ ನಿಂತಿಲ್ಲವಲ್ಲ. ನಾಲ್ಕು ದಶಕಗಳಲ್ಲಿ ಎಂದೂ ಅರಣ್ಯದ ಪ್ರಮಾಣ ಹೆಚ್ಚಾದ ಉದಾಹರಣೆಗಳು ತೀರಾ ಕಡಿಮೆ, ಇಲ್ಲವೆಂದೇ ಹೇಳಬಹುದು. ಐಐಎಸ್‌ಸಿ ಪಾರಿಸರಿಕ ವಿಜ್ಞಾನ ವಿಭಾಗದ ಟಿವಿ ರಾಮಚಂದ್ರ ಅವರು ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ಅಧ್ಯಯನ ವರದಿಯಂತೆ, 1973ರ ಸುಮಾರಿನಲ್ಲಿ ಶೇ. 68.27 ಇದ್ದ ನಗರ ಅರಣ್ಯ 2012ರ ಸುಮಾರಿಗೆ ಶೇ. 23.25 ಕ್ಕೆ ಇಳಿದಿತ್ತು. 

ಪರಿಸ್ಥಿತಿ ಭಿನ್ನವಾಗಿಲ್ಲ 
ಮೆಗಾಸಿಟಿಗಳನ್ನು ನಿರ್ಮಿಸುವ ಧಾವಂತ ಯಾವುದೇ ನಗರಗಳನ್ನು ಈ ಪರಿಸ್ಥಿತಿಯಿಂದ ಭಿನ್ನವಾಗಿ ಇಟ್ಟಿಲ್ಲ. ಈ ಮಾತಿಗೆ ನಾವು ಯಾವುದೇ ನಗರಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಎಲ್ಲೆಡೆಯೂ ಕಟ್ಟಡಗಳು ಏಳುತ್ತಿವೆ, ಅರಣ್ಯ ಕರಗುತ್ತಿರುವ ದೃಶ್ಯಕ್ಕೆ ಹೊಸ ಅಧ್ಯಯನ ನಡೆಸಬೇಕಿಲ್ಲ. ಮುಂಬಯಿಯನ್ನು ಕಾಣು ವಾಗಲೂ ಹಾಗೆಯೇ ತೋರುತ್ತದೆ, ದಿಲ್ಲಿಯನ್ನು ನೋಡು ವಾಗಲೂ ಅಷ್ಟೇ. ಎಲ್ಲರಿಗೂ ಅಭಿವೃದ್ಧಿ ಯೋಜನೆಗಳು ಬೇಕು, ಆದರೆ ಬದುಕನ್ನು ಉಳಿಸುವ ಮರಗಳು ಬೇಕಾಗಿಲ್ಲ. ಜಗತ್ತಿನಲ್ಲಿ ಸುಮಾರು 47 ಮೆಗಾಸಿಟಿಗಳು ಕಿಕ್ಕಿರಿದ ಕಿಷ್ಕಿಂಧೆಗಳಾಗಿವೆ. ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಇದೆ. ಶೇ. 50ಕ್ಕೂ ಹೆಚ್ಚು ಜನಸಂಖ್ಯೆ ನಗರದಲ್ಲಿ ವಾಸಿಸತೊಡಗಿದೆ. ಇಂಥ ಕಿಕ್ಕಿರಿದ ನಗರಗಳಲ್ಲಿನ ಜನಾರೋಗ್ಯಕ್ಕೆ ಮರಗಳು ಬಹಳ ಪ್ರಮುಖವಾದವು. ಬಹುಶಃ ಅಭಿವೃದ್ಧಿ,ಸೌಲಭ್ಯಗಳ ಎದುರು ಅವುಗಳಾವುದೂ ಮುಖ್ಯವೆನಿಸದು.

Advertisement

ನಿಮ್ಮ ಜೇಬುರಕ್ಷಣೆಗೆ ಮರವಿರಲಿ
ನಿಜ, ನಗರದಲ್ಲಿ ಮರಗಳು ಹೆಚ್ಚಿದ್ದರೆ ಅವುಗಳು ನಮ್ಮ ಜೇಬನ್ನು ರಕ್ಷಿಸುತ್ತವೆ. ಅಮೆರಿಕದ ಒಂದು ಉತ್ಸಾಹಿ ತಂಡ ನಡೆಸಿದ ಸಮೀಕ್ಷೆ ಎಷ್ಟೊಂದು ವಿಶೇಷ ಅಂಶಗಳನ್ನು ಹೇಳುತ್ತದೆಯೆಂದರೆ, ನಮ್ಮ ಹಿರಿಯರು ಅಷ್ಟೊಂದು ಆರೋಗ್ಯಪೂರ್ಣವಾಗಿದ್ದರು, ನಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೂ ಉತ್ತರ ಕೊಡುತ್ತದೆ. ಒಂದು ಚದರ ಕಿ.ಮೀ. ವ್ಯಾಪ್ತಿಯ ಅರಣ್ಯವನ್ನು ಉಳಿಸಿದರೆ 
ಅಥವಾ ಮರಗಿಡಗಳನ್ನು ಬೆಳೆಸಿ ಅರಣ್ಯ ಸೃಷ್ಟಿ ಮಾಡಿದ್ದರೆ, ಕನಿಷ್ಠ 0.90 ಮಿಲಿಯನ್‌ ಡಾಲರ್‌ನಷ್ಟು ಹಣವನ್ನು ಪರಿಸರ ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳಿಗೆ ತೆರುವುದನ್ನು ನಿಲ್ಲಿಸುತ್ತದೆ. ಹಾಗೆಯೇ ಸುಮಾರು 20 ಸಾವಿರ ಡಾಲರ್‌ ಮೊತ್ತದಷ್ಟು ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಬಲ್ಲದು, 4.78 ಲಕ್ಷ ಡಾಲರ್‌ನಷ್ಟು ಮೊತ್ತವನ್ನು ನಮ್ಮ ಮನೆಗಳಲ್ಲಿ ಬಳಸುವ ವಿದ್ಯುತ್‌ನ್ನು (ಸೆಕೆ ತಾಳಿಕೊಳ್ಳಲಾಗದೇ ತಂಪು ಮಾಡಿಕೊಳ್ಳುವ ಸಂದರ್ಭಗಳು ನೆನೆಸಿಕೊಳ್ಳಿ) ಉಳಿಸುತ್ತದೆ.  

ನಗರ ಉದ್ಯಾನ ನಮ್ಮಲ್ಲಿ ಹೊಸ ಪರಿಕಲ್ಪನೆಯೇನೂ ಅಲ್ಲ. ಒಂದು ಕಬ್ಬನ್‌ ಪಾರ್ಕ್‌ ಹಾಗೂ ಒಂದು ಲಾಲ್‌ಬಾಗ್‌ ಇಡೀ ಬೆಂಗಳೂರಿನ ಆಮ್ಲಜನಕದ ಕೋಠಿಯಾಗಿತ್ತೆಂಬುದು ಖಂಡಿತಾ ಸುಳ್ಳಲ್ಲ. ಇಪ್ಪತ್ತು ವರ್ಷಗಳ ಹಿಂದೆ (ಈಗಲೂ ಆ ಅನುಭವ ಆಗ ಬಹುದು, ಆದರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರಬಹುದಷ್ಟೇ)ಕಾರ್ಪೋರೇಷನ್‌ ಕಡೆಯಿಂದ ಕಬ್ಬನ್‌ಪಾರ್ಕ್‌ ಒಳಹೊಕ್ಕು ಹೈಕೋರ್ಟ್‌ ಬಾಗಿಲಲ್ಲಿ ಹೊರ ಬಂದರೆ ಎಂಥ ಆಹ್ಲಾದಕರ ಅನುಭವವಾಗುತ್ತಿತೆಂದರೆ, ನಮ್ಮೆದುರು ಕಾಂಕ್ರೀಟಿನ ಭಯವನ್ನೇ ಹೋಗಲಾಡಿಸುತ್ತಿತ್ತು. ಸ್ವಲ್ಪವೂ ಮಾಲಿನ್ಯವಿಲ್ಲದ ಶುದ್ಧ ಹವೆ, ಕಣ್ಣಿಗೆ ತಂಪು ನೀಡುವ ಹಸಿರು, ತಂಪಾದ ವಾತಾವರಣ ಎಲ್ಲವೂ ಕಾಂಕ್ರೀಟಿನ ಕಾನನದಲ್ಲಿ ಹೊಸ ಬದುಕಿನ ದರ್ಶನ ಮಾಡಿಸುತ್ತಿತ್ತು. ಇಂದು ಪರಿಸ್ಥಿತಿ ಕೊಂಚ ಭಿನ್ನವಾಗಿದೆ.

ಮರಗಳನ್ನು ನೆಡೋಣ
ಈಗಲಾದರೂ ಮತ್ತೆ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ನಮ್ಮ ಬಡಾವಣೆಗಳ ಸಾಲು ರಸ್ತೆಗಳಲ್ಲಿ ಮರಗಳನ್ನು ಕಡ್ಡಾಯವಾಗಿ ಬೆಳೆಸುವಂತೆ ಜನಪ್ರತಿನಿಧಿಗಳಿಗೆ ಒತ್ತಡ ಹೇರಬೇಕು, ಆಗ್ರಹಿಸಬೇಕು. ಒಂದು ಅಭಿವೃದ್ಧಿ ಯೋಜನೆ ಜಾರಿಗೊಳಿಸುವಾಗಲೂ ಕನಿಷ್ಠ ಮರಗಳ ಹನನಕ್ಕೆ ಆದ್ಯತೆ ನೀಡಬೇಕು. ಪ್ರತಿಯಾಗಿ ಒಂದಿಷ್ಟು ಸಸಿ ನೆಟ್ಟು ಅರಣ್ಯ ವೃದ್ಧಿಸುವ ಕ್ರಮಕ್ಕೆ ಆಗ್ರಹಿಸಬೇಕು. ಮರವೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳು ಅನಾವಶ್ಯಕವಾಗಿ ಪೋಲಾಗುವಾಗ ಧ್ವನಿ ಎತ್ತೋಣ. ನಮ್ಮ ಮಿತ ಬಳಕೆಯ ಮತ್ತು ಪರಿಸರ ಸ್ನೇಹಿ ಮನೋಧರ್ಮ, ನಡವಳಿಕೆ ಮೂಲಕ ಯುವ ಜನರಲ್ಲೂ ಕಾಳಜಿ ಬೆಳೆಸೋಣ. ಇದಾವುದೂ ಆಗದಿದ್ದರೆ ನಮ್ಮ ನಗರಗಳು ಕುದಿಯುವ ಕುಲುಮೆಗಳಾಗಿ ಬಿಡುತ್ತವೆ. ಬಳಿಕ ನಾಮ್ಮ ಕಥೆ ಏನಿದ್ದರೂ ಓವನ್‌ನೊಳಗೆ ಬೇಯುವ ಮೈದಾಹಿಟ್ಟಿನ ಬ್ರೆಡ್ಡಿನಂತೆಯೇ.

Advertisement

Udayavani is now on Telegram. Click here to join our channel and stay updated with the latest news.

Next