ಲಕ್ಷದ್ವೀಪಕ್ಕೆ ಭೇಟಿ ನೀಡಿ ಆಕರ್ಷಕ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಲ್ಡೀವ್ಸ್ ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು ಎಂಬ ಅಭಿಪ್ರಾಯ ಹುಟ್ಟುಹಾಕಲು ಕಾರಣರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೀಳು ಹೇಳಿಕೆ ನೀಡಿದ್ದ ಮಾಲ್ಡೀವ್ಸ್ ಸಚಿವರುಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಂದ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಟ್ರೆಂಡಿಂಗ್ ಆದ ಪರಿಣಾಮ ಸಾವಿರಾರು ಮಂದಿ ಪ್ರವಾಸ ರದ್ದುಗೊಳಿಸಿದ್ದ ಪರಿಣಾಮ ಮಾಲ್ಡೀವ್ಸ್ ಮೂವರು ಸಚಿವರ ತಲೆದಂಡ ಮಾಡಿತ್ತು. ಈ ಎಲ್ಲಾ ರಂಪಾಟದ ನಡುವೆ ಒಂದು ಕಾಲದಲ್ಲಿ ಬೌದ್ಧರು ಮತ್ತು ಹಿಂದುಗಳು ಪಾರುಪತ್ಯದಲ್ಲಿದ್ದ ಲಕ್ಷದ್ವೀಪದಲ್ಲಿ ಮುಸ್ಲಿಮರ ಪ್ರಾಬಲ್ಯ ಹೇಗೆ ಬೆಳೆಯಿತು ಎಂಬ ಸಂಕ್ಷಿಪ್ತ ಇತಿಹಾಸ ಇಲ್ಲಿದೆ…
ದ್ವೀಪಗಳ ಸಮೂಹ:
ಲಕ್ಷದ್ವೀಪ ಭಾರತದ ಪುಟ್ಟ ಕೇಂದ್ರಾಡಳಿತ ಪ್ರದೇಶವಾಗಿದೆ. ಇಲ್ಲಿ 36 ದ್ವೀಪಗಳಿವೆ. ಲಕ್ಷದ್ವೀಪದ ಆಡಳಿತದ ರಾಜಧಾನಿ ಕವರಟ್ಟಿ. ಇಲ್ಲಿನ ಶೇ.95ರಷ್ಟು ಜನರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಆದರೆ ಲಕ್ಷದ್ವೀಪದಲ್ಲಿ ಹಿಂದೆ ಹಿಂದೂಗಳು, ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಗಾದರೆ ಲಕ್ಷದ್ವೀಪದಲ್ಲಿ ಇಸ್ಲಾಂ ಹೇಗೆ ಪ್ರಬಲವಾಗಿ ಬೆಳೆಯಿತು ಎಂಬ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಲಕ್ಷದ್ವೀಪಕ್ಕೆ ಇಸ್ಲಾಂ ಕಾಲಿಟ್ಟಿದ್ದು ಹೇಗೆ?
ಲಕ್ಷದ್ವೀಪವನ್ನು ಒಂದು ಕಾಲದಲ್ಲಿ ಲಖದೀವ್, ಮಿನಿಕೋಯ್ ಮತ್ತು ಅಮಿನ್ ದಿವಿ ದ್ವೀಪಗಳೆಂದು ಕರೆಯಲಾಗುತ್ತಿದ್ದ ಅರಬ್ಬಿ ಸಮುದ್ರ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ 4,200 ಚದರ ಕಿಲೋ ಮೀಟರ್. ಲಕ್ಷದ್ವೀಪದ ರಾಜಧಾನಿ ಕವರಟ್ಟಿ ಕೇರಳ ಹೈಕೋರ್ಟ್ ಪರಿಧಿಯಲ್ಲಿ ಬರುತ್ತದೆ.
ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇದು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು. 1956ರಲ್ಲಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲ್ಪಟ್ಟಿತ್ತು. ಇಲ್ಲಿ ಒಟ್ಟು 39 ದ್ವೀಪಗಳಿದ್ದು, 10ರಲ್ಲಿ ಮಾತ್ರ ಜನವಸತಿ ಇದೆ. 2011ರ ಜನಗಣತಿ ಪ್ರಕಾರ ಲಕ್ಷದ್ವೀಪದಲ್ಲಿ 64,429 ಜನಸಂಖ್ಯೆ ಇದ್ದು, ಶೇ.95ರಷ್ಟು ಮುಸಲ್ಮಾನರು. ಇವರು ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ.
ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್ ಪೆರುಮಾಳ್ ಕಾಲದಲ್ಲಿ ಇಲ್ಲಿ ಜನವಸತಿ ಆರಂಭವಾಗಿತ್ತು. ಮೊದಲು ಅಮಿನಿ, ಕಾಲ್ ಪೇನಿ, ಆಂಡ್ರೋಟ್, ಕವರಟ್ಟಿ, ಅಗಾಟ್ಟಿ ದ್ವೀಪಗಳಲ್ಲಿ ಕೇರಳದಿಂದ ಬಂದು ನೆಲಸಿದ್ದ ಜನರಿದ್ದರು. ಪುರಾತತ್ವ ಇಲಾಖೆಯ ದಾಖಲೆಯ ಪ್ರಕಾರ ಇಲ್ಲಿ ಕ್ರಿಸ್ತ ಶಕ 5-6ನೇ ಶತಮಾನದಲ್ಲಿ ಬೌದ್ಧ ಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕ್ರಿ.ಶ.661ರಲ್ಲಿ ಉಬೇದುಲ್ಲ ಎಂಬ ಅರಬ್ ಇಲ್ಲಿಗೆ ಇಸ್ಲಾಂ ಧರ್ಮವನ್ನು ತಂದಿದ್ದ.
ಕ್ರಿ.ಶ 825ರಲ್ಲಿ ರಾಜ ಚೇರಮನ್ ಪೆರುಮಾಳ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ನಂತರ ಬಹುತೇಕರು ಇಸ್ಲಾಂಗೆ ಮತಾಂತರಗೊಂಡ ಪರಿಣಾಮ ಬೌದ್ಧರು ಮತ್ತು ಹಿಂದೂಗಳ ಪ್ರಾಬಲ್ಯ ಕುಂಠಿತಗೊಂಡಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ.
17ನೇ ಶತಮಾನದಲ್ಲಿ ಕಣ್ಣೂರಿನ “ಅಲಿ ರಜಾ ಅರಕ್ಕಲ್ ಭೀವಿಗೆ” ಈ ಲಕ್ಷದ್ವೀಪಗಳು ಕೊಳತ್ತಿರಿ ರಾಜರಿಂದ ಕಾಣಿಕೆಯಾಗಿ ಸಿಕ್ಕಿತ್ತು. ಅವಿನ್ ದೀವಿ ದ್ವೀಪಗಳು 1787ರಲ್ಲಿ ಟಿಪ್ಪು ಸುಲ್ತಾನ್ ವಶಕ್ಕೆ ಬಂದಿತ್ತು. ಬಳಿಕ ಬ್ರಿಟಿಷರ ಸಮಯದಲ್ಲಿ ಅವು ದಕ್ಷಿಣ ಕೆನರಾ ಭಾಗವಾಯಿತು. ಉಳಿದ ದ್ವೀಪಗಳನ್ನು ಕಣ್ಣಾನೂರಿನ ಅರಕ್ಕಲ್ ಮನೆತನ ಆಳುತ್ತಿತ್ತು. ಅರಕ್ಕಲ್ ರಾಜ, ಕಪ್ಪ ಕೊಡದ ಕಾರಣ ಬ್ರಿಟಿಷರು ಈ ದ್ವೀಪಗಳನ್ನು ವಶಪಡಿಸಿಕೊಂಡು ಮದ್ರಾಸ್ ಪ್ರೆಸಿಡೆನ್ಸಿಯ ಮಲಬಾರ್ ಜಿಲ್ಲೆಗೆ ಸೇರಿಸಿದ್ದರು.