Advertisement

ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?

01:45 AM Jan 23, 2022 | Team Udayavani |

ಬೆಂಗಳೂರು-ಮಂಗಳೂರು ನಡುವೆ ಶಿರಾಡಿ ಘಾಟಿ ಪ್ರಮುಖ ಸಂಪರ್ಕ ಸೇತು. ಘಾಟಿ ಒಂದು ದಿನ ಸ್ಥಗಿತಗೊಂಡರೂ ಕರಾವಳಿಯ ಜನಜೀವನ ಮತ್ತು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಮಧ್ಯೆ ಘಾಟಿಯನ್ನು 6 ತಿಂಗಳು ಬಂದ್‌ ಮಾಡುವ ಪ್ರಸ್ತಾವವಿದೆ. ಇದರ ಪರಿಣಾಮ ಕುರಿತ ಸರಣಿ ಇಂದಿನಿಂದ.

Advertisement

ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಹಾಸನ- ಸಕಲೇಶಪುರ ಹಾಗೂ ಸಕಲೇಶಪುರ-ಮಾರನಹಳ್ಳಿ ನಡುವಿನ ಚತುಷ್ಪಥ ರಸ್ತೆ ಕಾಮಗಾರಿ ವಿಷಯ ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಬಂದ್‌ ಗೊಂದಲ ಮುಂದುವರಿದಿದೆ.

ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ರಾಜ್‌ಕಮಲ್‌ ಕಂಪೆನಿಯ ವಿಳಂಬ ಧೋರಣೆಯಿಂದಾಗಿ ಹಾಸನ- ಸಕಲೇಶಪುರ ನಡುವಿನ ಕಾಮಗಾರಿ 4 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಸಕಲೇಶಪುರ-ಮಾರನಹಳ್ಳಿ ನಡುವಿನ 10 ಕಿ.ಮೀ. ಚತುಷ್ಪಥ ಕಾಂಕ್ರೀಟ್‌ ರಸ್ತೆಗಾಗಿ 6 ತಿಂಗಳು ವಾಹನ ಸಂಚಾರ ನಿರ್ಬಂಧ ಚಿಂತನೆ ಟೀಕೆಗೆ ಗುರಿಯಾಗಿದೆ.

ಕಂಪೆನಿಯು ಈಗಾಗಲೇ ಎನ್‌ಎಚ್‌ಎಐ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಉದ್ದೇಶಿತ ಕಾಮಗಾರಿ ನಡೆಸುವ ರಸ್ತೆಯಲ್ಲಿ 6 ತಿಂಗಳು ವಾಹನ ಸಂಚಾರ ಬಂದ್‌ ಮಾಡಲು ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಚರ್ಚಿಸಲು ಜ. 17ರಂದು ಹಾಸನ ಜಿಲ್ಲಾಧಿಕಾರಿಯವರು ಸಂಸದ ಪ್ರಜ್ವಲ್‌ ರೇವಣ್ಣ, ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು. ಜ. 20ರಂದು ಸ್ಥಳ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ನಿರ್ಧ ರಿಸಿದ್ದರು. ಆದರೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ದಿಲ್ಲಿಯಲ್ಲಿ ಶಿರಾಡಿ ಘಾಟಿ ರಸ್ತೆ ಸಂಬಂಧವೇ ಅಧಿಕಾರಿಗಳ ತುರ್ತು ಸಭೆ ಕರೆದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಯನ್ನು ಮುಂದೂಡಲಾಯಿತು.

ಸುರಂಗ, ಮೇಲ್ಸೆತುವೆ ಯೋಜನೆ ಏಕೆ?
ಶಿರಾಡಿ ಘಾಟಿಯಲ್ಲಿ 1,200 ಕೋ. ರೂ. ಚತುಷ್ಪಥ ರಸ್ತೆ ನಿರ್ಮಾಣ ಯೋಜನೆ ಘೋಷಣೆ ಜತೆಗೆ ಸುರಂಗ ಮಾರ್ಗ ನಿರ್ಮಾಣದ ಸಮೀಕ್ಷೆ ನಡೆಸಲೂ ಕೇಂದ್ರ ಭೂ ಸಾರಿಗೆ ಸಚಿವರು ಎನ್‌ಎಚ್‌ಎಐಗೆ ನಿರ್ದೇಶಿಸಿ  ದ್ದಾರೆ ಎಂದು ವರದಿ ಯಾಗಿದೆ. ಘಾಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿ ದರೆ ಭಾರೀ ಪ್ರಮಾಣದಲ್ಲಿ ಅರಣ್ಯ ನಾಶವಾದೀತೆಂದು 10,000 ಕೋಟಿ ರೂ. ಅಂದಾಜಿನಲ್ಲಿ ಜಪಾನ್‌ನ ಜೈಕಾ ಕಂಪೆನಿ ಸಹಯೋಗ ದಲ್ಲಿ ಷಟ³ಥ ಸುರಂಗ ಮತ್ತು ಮೇಲ್ಸೇತುವೆ ಮಾರ್ಗ ನಿರ್ಮಾಣದ ಸಮೀಕ್ಷೆ ನಡೆದಿತ್ತು. ಈಗ 1,200 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ನಿರ್ಮಾಣವಾದರೆ ಸುರಂಗ ಮಾರ್ಗದ ಸಮೀಕ್ಷೆ ಯಾಕೆ ಎಂಬ ಹೊಸ ಗೊಂದಲವೂ ಮೂಡಿದೆ.

Advertisement

ಸಂಚಾರ ನಿರ್ಬಂಧ ವಿವಾದ
ಹಾಗಾಗಿ ಸಕಲೇಶಪುರ- ಮಾರನಹಳ್ಳಿ ನಡುವೆ ಚತು ಷ್ಪಥ ನಿರ್ಮಾಣಕ್ಕೆ 6 ತಿಂಗಳು ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಬೇಕೇ? ಬೇಡವೇ ಎಂಬ ಚರ್ಚೆ ಮುಂದುವರಿದಿದೆ. ಪ್ರಸ್ತುತ ಅಧಿಕಾರಿಗಳ ಪರಿಶೀಲನೆ ಸದ್ಯ ಮುಂದೂಡ ಲಾಗಿದೆಯೇ ಹೊರತು ರದ್ದುಪಡಿಸಿಲ್ಲ. ಇದು 6 ತಿಂಗಳು ವಾಹನ ಸಂಚಾರ ನಿರ್ಬಂಧವನ್ನೂ ಜೀವಂತವಾಗಿರಿಸಿದೆ.

ಶಿರಾಡಿಘಾಟ್‌ನಿಂದ ಮುಂದಕ್ಕೆ ಬಿ.ಸಿ.ರೋಡ್‌ವರೆಗೂ ಕಾಂಕ್ರೀಟ್‌ ಚತುಷ್ಪಥ ನಿರ್ಮಿಸಲು ಯೋಜನೆ ಮಂಜೂರಾಗಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿತ್ತು. ಈಗ ಗುಂಡ್ಯದಿಂದ ಬಿ.ಸಿ.ರೋಡ್‌ವರೆಗೂ ದ್ವಿಪಥಕ್ಕೇ ಮತ್ತೆ ಡಾಮರು ಹಾಕಿ ಬಳಕೆಗೆ ಯೋಗ್ಯ ಮಾಡಲಾಗಿದೆ. ಆದೇ ಮಾದರಿಯಲ್ಲಿ ಸಕಲೇಶಪುರ- ಮಾರನಹಳ್ಳಿ ನಡುವೆ ಸಂಪೂರ್ಣ ಹಾಳಾದ 10 ಕಿ.ಮೀ. ದ್ವಿಪಥ ರಸ್ತೆಗೆ ಡಾಮರು ಹಾಕಿದರೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಯಾವುದೆ ಸಮಸ್ಯೆ ಇರದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ಹೊಸ ಯೋಜನೆ
ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರು ಚತುಷ್ಪಥ ನಿರ್ಮಾಣಕ್ಕೆ 1200 ಕೋಟಿ ರೂ. ಘೋಷಿಸಿದ್ದಾರೆ. ಇದು ಹೊಸ ಯೋಜನೆ. ಈಗ ಚಾಲ್ತಿಯಲ್ಲಿರುವ ಯೋಜನೆಗೆ ಸಂಬಂಧಿಸಿಲ್ಲ. ಶಿರಾಡಿ ಘಾಟ್‌ನಲ್ಲಿ ಈಗಾಗಲೇ ನಿರ್ಮಾಣವಾದ ದ್ವಿಪಥ ಕಾಂಕ್ರೀಟ್‌ ರಸ್ತೆಗೆ ಹೊಂದಿಕೊಂಡಂತೆ ಹೊಸದಾಗಿ ಮಾರನಹಳ್ಳಿಯಿಂದ ಗುಂಡ್ಯವರೆಗೆ ಸುಮಾರು 24 ಕಿ.ಮೀ. ಕಾಂಕ್ರೀಟ್‌ ಚತುಷ್ಪಥ ನಿರ್ಮಿಸಲು ಈ ಹಣದ ಬಳಕೆಯಾಗಲಿದೆ. ಹಾಸನ- ಬಿ.ಸಿ. ರೋಡ್‌ ನಡುವೆ ಚತುಷ್ಪಥ ನಿರ್ಮಾಣ ಯೋಜನೆ ಘೋಷಣೆಯಾದಾಗ ಶಿರಾಡಿಘಾಟ್‌ನ 24 ಕಿ.ಮೀ. ಹೊರತುಪಡಿಸಿ ಯೋಜನೆ ಮಂಜೂರಾಗಿತ್ತು. ಈಗ ಆ 24 ಕಿ.ಮೀ. ಹೊಸದಾಗಿ ಚತುಷ್ಪಥವನ್ನಾಗಿಸಲು 1200 ಕೋಟಿ ರೂ. ಘೋಷಣೆ ಆಗಿದೆ ಅಷ್ಟೇ.

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next