Advertisement

ವಸತಿ ವಿಜಿಲ್‌ ಆ್ಯಪ್‌ ಅಭಿವೃದ್ಧಿ

10:45 PM Jan 14, 2020 | Lakshmi GovindaRaj |

ಬೆಂಗಳೂರು: ವಸತಿ ಯೋಜನೆಗಳಲ್ಲಿ ಅಕ್ರಮ, ದುರ್ಬಳಕೆ ತಡೆದು ಪಾರದರ್ಶಕತೆ ತರಲು “ವಸತಿ ವಿಜಿಲ್‌’ ಆ್ಯಪ್‌ ಅಭಿವೃದ್ಧಿಪಡಿಸಿ ಬಳಸಲಾಗುತ್ತಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್‌, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಿಡಿಒಗಳು, ತನಿಖಾ ತಂಡದವರು ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಪಿಡಿಒ, ತನಿಖಾ ತಂಡ ಹಾಗೂ ಫ‌ಲಾನುಭವಿಗಳು ಜಂಟಿಯಾಗಿ ಮನೆ ನಿರ್ಮಾಣ ಸ್ಥಳದಲ್ಲಿರುವ ಛಾಯಾಚಿತ್ರ ಸೆರೆ ಹಿಡಿದು ಆ್ಯಪ್‌ನಡಿ ಅಪ್‌ಲೋಡ್‌ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಬಳಿಕ ಅದನ್ನು ಮೇಲಿನ ಹಂತಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮವಾಗಿ ನಿಯಮಾನುಸಾರ ಇರುವ ಮನೆಗಳ ವಿವರವನ್ನು ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಒ ಹಾಗೂ ನಗರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ನೀಡಲಿದ್ದಾರೆ. ಅದರ ಆಧಾರದ ಮೇಲೆ ನಿಗಮ ಫ‌ಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಿದೆ.

ಅಧಿಕಾರ ವಿಕೇಂದ್ರೀಕರಣದ ಮೂಲಕ ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಕಳೆದ ನ.16ರಿಂದ ವಸತಿ ವಿಜಿಲ್‌ ಮೊಬೈಲ್‌ ಆ್ಯಪ್‌ ಮೂಲಕ ಮನೆಗಳ ಪರಿಶೀಲನೆ ಕಾರ್ಯ ನಡೆದಿದೆ. ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಿಪಂ ಸಿಇಒಗಳ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

19ಕ್ಕೆ ಶಿವಕುಮಾರ ಶ್ರೀಗಳ ಸಂಸ್ಮರಣೋತ್ಸವ
ಬೆಂಗಳೂರು: ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಜ.19ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯಲಿದೆ. ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ವಿ.ಸೋಮಣ್ಣ, ಡಾ.ಶಿವಕುಮಾರ ಸ್ವಾಮೀಜಿಯವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಜ.19ರಂದು ಮಠದಲ್ಲಿ ನಡೆಯಲಿದೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಬೇಲಿಮಠದ ಶಿವರುದ್ರ ಸ್ವಾಮೀಜಿ, ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಉಪಸ್ಥಿತರಿರಲಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆಂದರು.

ದೆಹಲಿ ಉದ್ಯಮಿ ಮುಖೇಶ್‌ ಗರ್ಗ್‌, ದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷ ಮಣೀಂದರ್‌ ಜೀತ್‌ಸಿಂಗ್‌ ಬಿಟ್ಟ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಕಳೆದ ವರ್ಷ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಆಶ್ರಯ ಪಡೆದಿದ್ದರು. ಇದೀಗ ವಿದ್ಯಾರ್ಥಿ ಗಳ ಸಂಖ್ಯೆ 12 ಸಾವಿರಕ್ಕೆ ಏರಿಕೆಯಾಗಿದ್ದು, ನೋಂದಣಿ ಹೆಚ್ಚಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next