Advertisement

ವಸತಿ ಯೋಜನೆ ಅರ್ಹರಿಗೆ ತಲುಪಿಸಿ: ಚವ್ಹಾಣ

06:41 PM Nov 17, 2022 | Team Udayavani |

ಬೀದರ: ಔರಾದ ಕ್ಷೇತ್ರದಲ್ಲಿ ಎಲ್ಲ ಕುಟುಂಬಗಳು ಸ್ವಂತ ಮನೆ ಹೊಂದಿರಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿಗಳು ಮತ್ತು ವಸತಿ ಸಚಿವರ ಮನವೊಲಿಸಿ ಸುಮಾರು ಮೂರು ಸಾವಿರ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಿಸಿದ್ದು, ಮನೆಗಳಿಲ್ಲದ ಬಡವರಿಗೆ ನೀಡಬೇಕು ಎಂದು ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಔರಾದ ಕ್ಷೇತ್ರದ ವಿವಿಧೆಡೆ ಬುಧವಾರ ಕೈಗೊಂಡ ಗ್ರಾಮ ಸಂಚಾರದ ಸಂದರ್ಭದಲ್ಲಿ ಅಧಿಕಾರಿಗಳಿಗೆ ವಸತಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು. ಔರಾದ ಹಾಗೂ ಕಮಲನಗರ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಈಗಾಗಲೆ ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸವಾಗಿದೆ. ಗ್ರಾಮ ಸಂಚಾರದ ವೇಳೆ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಕೆಲವು ಗ್ರಾಮಗಳಲ್ಲಿ ಕಾರಣಾಂತರಗಳಿಂದ ಇನ್ನೂ ಮನೆ ಹಂಚಿಕೆ ಪ್ರಕ್ರಿಯೆ ನಡೆಯದಿರುವುದು ಗಮನಕ್ಕೆ ಬಂದಿದೆ. ಎಲ್ಲ ತೊಡಕುಗಳನ್ನು ಸರಿಪಡಿಸಿಕೊಂಡು ತ್ವರಿತವಾಗಿ ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಾಣ ಕೆಲಸ ಆರಂಭಿಸಬೇಕು ಎಂದು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿರುವ ಬಡ ಜನತೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಉದ್ದೇಶದಿಂದ ವಸತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಕ್ಷೇತ್ರಕ್ಕೆ ಹೆಚ್ಚುವರಿ ಮನೆಗಳು ಸಿಕ್ಕಿದ್ದು, ಇದರ ಸದ್ಬಳಕೆಯಾಗಬೇಕು. ಮನೆ ಹಂಚಿಕೆ ವಿಷಯದಲ್ಲಿ ಯಾವುದೇ ರೀತಿಯ ದೂರುಗಳು ಬಂದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಔರಾದ ತಾಲೂಕಿನ ದುಡುಕನಾಳ, ವನಮಾರಪಳ್ಳಿ, ಬಾದಲಗಾಂವ, ನಾರಾಯಣಪುರ, ಮಮದಾಪುರ, ಅಲ್ಲಾಪುರ, ತೇಗಂಪುರ ಹಾಗೂ ಸುಂದಾಳದಲ್ಲಿ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

Advertisement

ಸಂಕಷ್ಟದಲ್ಲಿದ್ದವರಿಗೆ ಸಹಾಯ: ಗ್ರಾಮ ಸಂಚಾರದ ವೇಳೆ ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಭೇಟಿಯಾಗಿ ವೈಯುಕ್ತಿಕ ಧನಸಹಾಯ ಮಾಡಿದರು. ದುಡುಕನಾಳ ಗ್ರಾಮದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶಿವಾಜಿ ರಮೇಶ ಹಾಗೂ ಬಾದಲಗಾಂವ ಗ್ರಾಮದಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಸುಧಾಕರ ಪಾಟೀಲ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಾನು ನಿಮ್ಮೊಂದಿಗಿದ್ದೇನೆ. ಏನಾದರೂ ಸಮಸ್ಯೆಯಾದಲ್ಲಿ ನೇರವಾಗಿ ಭೇಟಿಯಾಗಿ. ನಾನು ಸದಾ ನಿಮ್ಮೊಂದೊಗಿದ್ದೇನೆ ಎಂದು ಧೈರ್ಯ ಹೇಳಿದರು.

ರಸ್ತೆ ಅಪಘಾತ ಹಾಗೂ ಆಕಸ್ಮಿಕವಾಗಿ ಮರಣ ಹೊಂದಿದ ನಾರಾಯಣಪುರ ಗ್ರಾಮದ ಜೈರಾಜ ಶರಣಪ್ಪ ಹಾಗೂ ರಾಮದಾಸ ಹಾವಗಿರಾವ ಅವರ ಮನೆಗೆ ಬೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕ ನೆರವು ನೀಡಿದರು. ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಎಇಇ ವೀರಶೆಟ್ಟಿ ರಾಠೊಡ್‌, ವೈದ್ಯಾಧಿಕಾರಿ ಡಾ| ಗಾಯತ್ರಿ ದೇವಿ, ರಾಜಕುಮಾರ ಬಿರಾದಾರ, ಮುಖಂಡರಾದ ಶಿವಾಜಿರಾವ ಕಾಳೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ರಮೇಶ ಬಿರಾದಾರ, ಪ್ರತೀಕ ಚವ್ಹಾಣ, ದೊಂಡಿಭಾ ನರೋಟೆ, ಕೇರಬಾ ಪವಾರ, ಶಿವರಾಜ ಅಲ್ಮಾಜೆ, ಸಂಜು ಒಡೆಯರ, ಈರಾರೆಡ್ಡಿ, ವೆಂಕಟರಾವ್‌ ಡೊಂಬಾಳೆ, ಸಂತೋಷ ಪೋಕಲವಾರ, ಮಾರುತಿ ರೆಡ್ಡಿ, ಯಾದು ಮೇತ್ರೆ, ಪ್ರಕಾಶ ಅಲ್ಮಾಜೆ, ಶಿವಾಜಿ ಚವ್ಹಾಣ, ಹಣಮಂತ ಸುರನಾರ, ರಾವಸಾಬ್‌ ಪಾಟೀಲ, ನಾಗನಾಥ ಮೋರ್ಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next