ಹುಬ್ಬಳ್ಳಿ: ಒಂದೇ ಕುಟುಂಬದ ಗೃಹಿಣಿಯರಿಬ್ಬರು ತಮ್ಮದೇ ಮಕ್ಕಳ “ಅಪಹರಣ’ ನಾಟಕವಾಡಿ 10 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ ಪ್ರಿಯಕರರೊಂದಿಗೆ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಆರು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಧಾರವಾಡದ ಜನ್ನತ ನಗರದ ಸಾಂಬ್ರಾಣಿ ಕುಟುಂಬದ ರಶ್ಮಿ ಊರ್ಫ್ ರೇಷ್ಮಾ ದೀಪಕ ಸಾಂಬ್ರಾಣಿ ಹಾಗೂ ಪ್ರಿಯಾಂಕಾ ಸಂತೋಷ ಕುಮಾರ ಸಾಂಬ್ರಾಣಿ ಪ್ರಕರಣದ ಸೂತ್ರಧಾರರು. ರಾಣಿಬೆನ್ನೂರಿನ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಅಲ್ಲಿಗೆ ಬಿಟ್ಟುಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಈ ಇಬ್ಬರು, ಪ್ರಿಯಕರರು ಹಾಗೂ ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು.
ಈ ಬಗ್ಗೆ ರಶ್ಮಿ ಪತಿ ದೀಪಕ ಸಾಂಬ್ರಾಣಿ ಎಂಬವರು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ನ.7ರಂದು ದೂರು ನೀಡಿದ್ದು, ಅಪಹರಣಕಾರರು ಮಕ್ಕಳನ್ನು ಬಿಡಲು 10 ಲಕ್ಷ ರೂ. ಬೇಡಿಕೆ ಇರಿಸಿರುವ ಬಗ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಎಸಿಪಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ವಿವಿಧ ಕಡೆಗಳಲ್ಲಿ ತನಿಖೆ ನಡೆಸಲಾಗಿತ್ತು. ಈ ಮಧ್ಯೆ ಆರು ಜನ ಮಕ್ಕಳೊಂದಿಗೆ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಬೆಂಗಳೂರಿನ ಹೆಬ್ಬಾಳದಲ್ಲಿ ಓಡಾಡುತ್ತಿರುವ ಮಾಹಿತಿ ಮೇರೆಗೆ ವಶಕ್ಕೆ ಪಡೆದು ಮಕ್ಕಳನ್ನು ರಕ್ಷಿಸಲಾಗಿದೆ ಎಂದವರು ಹೇಳಿದರು.