Advertisement

6 ತಿಂಗಳುಗಳಲ್ಲಿ ಅಂಬೇಡ್ಕರ್‌ ಕಾಲನಿಯ ಮನೆಗಳು ಪೂರ್ಣ: ಸಚಿವ

07:04 PM Nov 02, 2021 | Team Udayavani |

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಅಂಬೇಡ್ಕರ್‌ ಕಾಲನಿಯ ಪರಿಶಿಷ್ಟ ಪಂಗಡ ಕುಟುಂಬಗಳ 13 ಮನೆಗಳು ಅಪೂರ್ಣಗೊಂಡಿದ್ದು, ಮೂರ್ನಾಲ್ಕು ಮನೆಗಳು ಪೂರ್ಣಪ್ರಮಾಣದ ಹಂತದಲ್ಲಿ ಇವೆ. ಪೂರ್ಣಗೊಂಡ ಮನೆ ನಿರ್ಮಾಣದ ಕೊನೆಯ ಕಂತು ಮಾತ್ರ ಬರಬೇಕಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ವಸತಿ ಇಲಾಖೆಯೊಂದಿಗೆ ಮಾತನಾಡಿದ್ದು 15 ದಿನಗಳಲ್ಲಿ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮಂಗಳವಾರ ಪುರಸಭಾ ವ್ಯಾಪ್ತಿಯ ಅಂಬೇಡ್ಕರ್‌ ಕಾಲನಿಗೆ ಭೇಟಿ ನೀಡಿ ಅಪೂರ್ಣ ಮನೆಗಳನ್ನು ವೀಕ್ಷಿಸಿ ಮಾಧ್ಯಮದ ಜತೆ ಅವರು ಮಾತನಾಡಿದರು.

ಅರೆನಿರ್ಮಾಣ ಹಂತದಲ್ಲಿ ಇರುವ 9 ರಿಂದ 10 ಮನೆಗಳಿಗೆ ಯಾವುದಾದರೂ ಮೂಲದಿಂದ ಅನುದಾನ ಒದಗಿಸುವಂತೆ ಮಾಡಿ, ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳ ಕಾಮಗಾರಿ ಮುಗಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವು ಪೂರ್ಣಗೊಂಡ ಬಳಿಕ ಅವರ ಖಾತೆಗೆ ಹಣ ಬರಲಿದೆ. ಬಳಿಕ ಉಳಿದವುಗಳ ಕಾಮಗಾರಿಗಳನ್ನು ಪೂರ್ತಿಗೊಳಿಸಬೇಕು. ಒಟ್ಟು 6 ತಿಂಗಳ ಒಳಗೆ ಎಲ್ಲ ಮನೆಗಳ ಕೆಲಸವೂ ಪೂರ್ಣಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ನಿಯಮದನ್ವಯ ಫಲಾನುಭವಿಗಳೇ ಮನೆ ನಿರ್ಮಾಣ ಮಾಡಬೇಕು. ಹೊರಗುತ್ತಿಗೆಗೆ ಅವಕಾಶ ಇಲ್ಲ. ಹೊರಗುತ್ತಿಗೆ ಕೊಟ್ಟರೂ ಗುಣಮಟ್ಟದ ಕೆಲಸ ಮಾಡಲಾಗುತ್ತದೆ ಎಂಬ ನಂಬಿಕೆ ಫಲಾನುಭವಿಗಳಲ್ಲಿ ಇರುವುದಿಲ್ಲ. ಆ ಕಾರಣಕ್ಕಾಗಿ 3.5 ಲಕ್ಷದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಕೆಲವೆಡೆ ಗೋಡೆ, ಅಡಿಪಾಯ ಹಾಕಿದ್ದು ಅದಕ್ಕೆ ಪಾವತಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಫಲಾನುಭವಿಗಳ ಬಳಿ ಹಣದ ಶಕ್ತಿ ಇರುವುದಿಲ್ಲ. ಆದ್ದರಿಂದ ಮೊದಲೇ ಅನುದಾನ ನೀಡಿ ಎಂಬ ಬೇಡಿಕೆ ಇದೆ. ಆ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳನ್ನು ಪೂರ್ತಿಗೊಳಿಸುವಂತೆ ಹೇಳಲಾಗಿದೆ ಎಂದರು.

Advertisement

ಇದನ್ನೂ ಓದಿ:ಉಪ ಚುನಾವಣೆ ಫಲಿತಾಂಶ: ಯುವ ಜನಾಂಗ ಆಕ್ರೋಶಗೊಂಡಿರುವ ಸಂಕೇತವಾಗಿದೆ:ರಕ್ಷಾ ರಾಮಯ್ಯ

ಪರಂಬೋಕು ವಿರಹಿತಗೊಳಿಸಿ ಆರು ಮನೆಗಳ ಹಕ್ಕು ಪತ್ರ ಮಂಜೂರು ಮಾಡುವ ಪ್ರಕ್ರಿಯೆ ತಹಶೀಲ್ದಾರ್‌ರಿಂದ ಸರಕಾರಕ್ಕೆ ಹೋಗಿ ತಿರಸ್ಕೃತವಾಗಿದೆ. ಅದೇ ಕಡತವನ್ನು ಮರುತಯಾರಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಕ್ಕುಪತ್ರ ನೀಡಲಿದ್ದೇವೆ . ಕಾಲನಿಯಲ್ಲಿರುವ ಚರಂಡಿ ವಿಸ್ತರಿಸಿ, ನಡೆದಾಡಲು, ವಾಹನ ಸಂಚಾರಕ್ಕೆ ಯೋಗ್ಯವಾಗಿಸುವಂತೆ ಸ್ಲಾಬ್‌ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಂಪ್ರದಾಯಿಕ ಕಂಬಳಕ್ಕೆ ಕ್ರೀಡಾ ಇಲಾಖೆ 1 ಲಕ್ಷ ಕೊಡುತ್ತಿದ್ದು, ಈ ಬಾರಿಯೂ ಮುಂದುವರೆಯಬಹುದು. ಪೂರ್ಣ ಮಾಹಿತಿ ಇಲ್ಲ . ರಾಷ್ಟ್ರೀಯ ಹೆದ್ದಾರಿಯಿಂದ ಭೂಸ್ವಾಧೀನ ಬಾಬ್ತು 15 ಕೋ.ರೂ. ಪಾವತಿಗೆ ಬಾಕಿ ಇರುವ ಕುರಿತು ಕೇಳಿದಾಗ, ಜಾಗ ಇನ್ನೂ ಫ‌ಲಾನುಭವಿಗಳ ಬಳಿಯೇ ಇರುವ ಕಾರಣ ಹಾಗಾಗಿದೆ. ಇಲಾಖೆಗೆ ಬೇಕಾದಾಗ ಬಿಟ್ಟುಕೊಡುವ ಭರವಸೆ ಭೂಮಾಲಕರಿಂದ ಬಂದಿದೆ ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್‌, ಸದಸ್ಯ ಪ್ರಭಾಕರ ವಿ., ನಾಮನಿರ್ದೇಶಿತ ಸದಸ್ಯ ರತ್ನಾಕರ್‌ ಚರ್ಚ್‌ರಸ್ತೆ, ಮಾಜಿ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್‌, ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು, ಕೋಡಿ ಅಶೋಕ್‌ ಪೂಜಾರಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಘವೇಂದ್ರ, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ನರಸಿಂಹ ಪೂಜಾರಿ, ಪುರಸಭೆಯ ವಸತಿ ಯೋಜನೆ ಅಧಿಕಾರಿ ಗಣೇಶ್‌ ಜನ್ನಾಡಿ ಮೊದಲಾದವರು ಇದ್ದರು.

ಉದಯವಾಣಿ ವರದಿ
ಹರಕಲು ಜೋಪಡಿ, ಮುರಿದ ಶೆಡ್‌ಗಳು, ಭದ್ರ ಬಾಗಿಲುಗಳಿಲ್ಲದ, ತಲೆಯ ಮೇಲಿನ ಸೂರು ಗಟ್ಟಿಯಿಲ್ಲದ ಮನೆಗಳಲ್ಲಿ ವಾಸಿಸುತ್ತಿರುವ ಕೊರಗರ ಕೊರಗು ಇನ್ನೂ ಕುಂದಿಲ್ಲ. ಮನೆ ಬುಡದಲ್ಲಿ ತಂದಿಟ್ಟ ಇಟ್ಟಿಗೆ, ಒಂದಷ್ಟು ಕಾಮಗಾರಿಯ ವಸ್ತುಗಳು ಹಾಗೆಯೇ ಇವೆ. ಅರ್ಧ ತಲೆಯೆತ್ತಿದ ಗೋಡೆ ಎಂದಿಗಾವುದೋ ಸೂರಿನ ಮಾಡು ಎಂದು ಅವುಗಳ ಪಾಡನ್ನು ಸಾರುತ್ತಿವೆ. ಮನೆ ಮಂಜೂರು ಮಾಡಿದ ಸರಕಾರ ಒಂದೆಡೆಯಿಂದ ಅನುದಾನವನ್ನೂ ಪೂರ್ಣ ನೀಡಿಲ್ಲ, ಇನ್ನೊಂದೆಡೆ ಮರಳಿಗೂ ಕಡಿವಾಣ ಹಾಕಿದೆ. ಪರಿಣಾಮ ಇಲ್ಲಿನ ಅಂಬೇಡ್ಕರ್‌ ಕಾಲನಿಯ ಕುಟುಂಬಗಳಿಗೆ ಜೋಪಡಿ ವಾಸ ತಪ್ಪಿಲ್ಲ. ಕುಂದಾಪುರ ಪುರಸಭೆ ವ್ಯಾಪ್ತಿಯ ಚರ್ಚ್‌ ರೋಡ್‌ ವಾರ್ಡ್‌ನ ಅಂಬೇಡ್ಕರ್‌ ನಗರದಲ್ಲಿ 30ರಷ್ಟು ಕೊರಗ ಕುಟುಂಬಗಳಿವೆ. ಬಹುತೇಕ ಮಂದಿ ಪುರಸಭೆಯ ಸ್ವತ್ಛತ ಕಾರ್ಯದಲ್ಲಿ ನಿರತರು. ಬೆಳಗಾದರೆ ನಗರದ ಬೀದಿಗಳನ್ನು ಗುಡಿಸಿ ಒಪ್ಪ ಓರಣ ಮಾಡಿ ಮನೆ ಮನೆಯ ಕಸ ಸಂಗ್ರಹಿಸಿ ಸ್ವಚ್ಛಗೊಳಿಸುವ ಇವರ ಮನೆ ಬೆಳಗುವ ದಿನಗಳು ಬರಲೇ ಇಲ್ಲ ಎಂದು ಇಲ್ಲಿನ ಸಮಸ್ಯೆ ಕುರಿತು “ಉದಯವಾಣಿ’ 2019ರ ಸೆ.17ರಂದು ವರದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next