Advertisement

 ಕಬ್ಬನ್‌ ಪಾರ್ಕ್‌ನಲ್ಲೊಂದು “ಹೌಸ್‌ಫ‌ುಲ್‌’ಯೋಗ ಕ್ಲಾಸ್‌

12:41 PM Sep 15, 2018 | |

ಬೆಂಗಳೂರಿನಲ್ಲಿ ಎಷ್ಟು ಯೋಗ ಕೇಂದ್ರಗಳಿವೆ ಅಂತ ಕೇಳಿದರೆ, ಲೆಕ್ಕ ಹಾಕಿ ಹೇಳುವುದು ಕಷ್ಟ. ಇತ್ತೀಚಿನ ವರ್ಷಗಳಲ್ಲಿ ಯೋಗದ ಬಗ್ಗೆ ಜನರಲ್ಲಿ ಜಾಗೃತಿ, ಆಸಕ್ತಿ ಹೆಚ್ಚುತ್ತಿರುವುದರಿಂದ, ಗಲ್ಲಿಗಲ್ಲಿಗಳಲ್ಲೂ ಯೋಗ ಸೆಂಟರ್‌ಗಳು ತಲೆ ಎತ್ತಿವೆ. ದುಡ್ಡು ಮಾಡುವ ಕೇಂದ್ರಗಳೂ ಆಗಿವೆ. ಆದರೆ, ಇಲ್ಲೊಬ್ಟಾಕೆ ಪ್ರತಿನಿತ್ಯ ನೂರಾರು ಜನರಿಗೆ ಉಚಿತವಾಗಿ ಯೋಗ ಹೇಳಿಕೊಡುತ್ತಾರೆ. ಕಬ್ಬನ್‌ಪಾರ್ಕ್‌ನಲ್ಲಿ ನಡೆಯುವ ಇವರ ಯೋಗಶಾಲೆಗೆ ಯಾರು ಬೇಕಾದರೂ ಬರಬಹುದು. 

Advertisement

“ಪ್ರೀತಿ’ಯ ಯೋಗಶಾಲೆ
28ರ ಹರೆಯದ ಪ್ರೀತಿ ಮೂಲತಃ ಹರಿಯಾಣದವರು. ಆರು ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಈಕೆ, ಪ್ರತಿದಿನ ಬೆಳಗ್ಗೆ 5ಗಂಟೆಗೆ ಕಬ್ಬನ್‌ಪಾರ್ಕ್‌ನಲ್ಲಿ ಹಾಜರಿರುತ್ತಾರೆ. ಅಲ್ಲಿನ ವಿಶಾಲ ಜಾಗದಲ್ಲಿ ಯೋಗಾಸನ ಮಾಡುವ ಅವರೊಂದಿಗೆ ನೂರಾರು ಜನರು ಬಂದು ಸೇರುತ್ತಾರೆ. ಈ ತರಗತಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಇಲ್ಲಿಯವರೆಗೆ, ಯಾರಿಂದಲೂ ಅವರು ಒಂದು ರೂಪಾಯಿ ಶುಲ್ಕವನ್ನೂ ಪಡೆದಿಲ್ಲ. ಯೋಗಾಸನದ ಜೊತೆಗೆ, ಸಕಾರಾತ್ಮಕ ಯೋಚನೆಯ ಮಹತ್ವ, ಧ್ಯಾನ, ಪ್ರಾಣಾಯಾಮ, ಉತ್ತಮ ಆಹಾರ, ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವ ವಿಧಾನಗಳನ್ನೂ ಅವರ ತರಗತಿಯಲ್ಲಿ ಕಲಿಯಬಹುದು.  

ಜನರೇ ಬರುತ್ತಿರಲಿಲ್ಲ…
ಹರಿಯಾಣದ ಯೋಗಗುರುಗಳಿಂದ ಯೋಗ ಕಲಿತಿರುವ ಪ್ರೀತಿ, ಬೆಂಗಳೂರಿಗೆ ಬಂದಮೇಲೆ ಯೋಗ ಕಲಿಕೆಯಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಸರ್ಟಿಫಿಕೇಟ್‌ ಪಡೆದಿದ್ದಾರೆ. ತಾನು ಕಲಿತಿದ್ದನ್ನು ಮತ್ತಷ್ಟು ಜನರಿಗೆ ಹೇಳಿಕೊಡುವ ಉದ್ದೇಶದಿಂದ ಕಬ್ಬನ್‌ಪಾರ್ಕ್‌ಗೆ ಬಂದ ಅವರಿಗೆ ಮೊದಲು ಎದುರಾಗಿದ್ದು ಅವಮಾನ, ಅನುಮಾನ. ಪಾರ್ಕ್‌ನ ಆವರಣದಲ್ಲಿ ಯೋಗ ಮಾಡುತ್ತಿದ್ದ ಪ್ರೀತಿಯನ್ನು ಹೆಚ್ಚಿನವರು ನಿರ್ಲಕ್ಷಿಸಿದರೆ, ಸ್ವಲ್ಪ ಜನ “ಈ ಹುಡುಗಿಗೆ ಇದೆಲ್ಲಾ ಯಾಕೆ ಬೇಕು?’ ಎಂದು ಹೀಯಾಳಿಸಿದರಂತೆ. ಕೆಟ್ಟದೃಷ್ಟಿಯಿಂದ ದಿಟ್ಟಿಸುತ್ತಾ ನಿಲ್ಲುವವರಿಗೂ ಕಡಿಮೆಯಿರಲಿಲ್ಲ. ಮೂರ್ನಾಲ್ಕು ತಿಂಗಳು ಹೀಗೇ ನಡೆದರೂ, ಪ್ರೀತಿ ಯೋಗಾಭ್ಯಾಸವನ್ನು ನಿಲ್ಲಿಸಲಿಲ್ಲ. ಕ್ರಮೇಣ ಜನರಿಗೆ ಕುತೂಹಲ ಮೂಡಿ, ಒಬ್ಬೊಬ್ಬರೇ ಬಂದು ಸೇರಿದರು. ಒಂದು ದಿನ ಬಂದವರು, ಮಾರನೇದಿನ ಮತ್ತಷ್ಟು ಜನರನ್ನು ಕರೆತಂದರು. ಈಗ ದಿನಾ ಬೆಳಗ್ಗೆ 100ಕ್ಕೂ ಅಧಿಕ ಜನರು ಇವರ ಜೊತೆ ಯೋಗ ಮಾಡುತ್ತಾರೆ. 

ಎಲ್ಲ ವಯೋಮಾನದವರೂ ಇದ್ದಾರೆ…
ಚಿಕ್ಕಮಕ್ಕಳಿಂದ ಹಿಡಿದು, 70-80ರ ವಯಸ್ಸಿನವರೂ ಯೋಗ ಕಲಿಯಲು ಬರುತ್ತಾರೆ. ಮಧುಮೇಹ, ರಕ್ತದೊತ್ತಡ, ಉಸಿರಾಟ ಸಮಸ್ಯೆಯಿಂದ ಬಳಲುವವರು ಇವರ ಯೋಗ, ಪ್ರಾಣಾಯಾಮ ತರಬೇತಿಯಿಂದ ಆರೋಗ್ಯವಂತರಾಗಿದ್ದಾರೆ. ನೆಲದ ಮೇಲೆ ಕುಳಿತುಕೊಳ್ಳಲೂ ಆಗದಷ್ಟು ವಯಸ್ಸಾದವರಿಗೆ ಸ್ಟೂಲ್‌ ಹಾಕಿ ಯೋಗ, ಧ್ಯಾನ ಹೇಳಿಕೊಟ್ಟಿದ್ದೇನೆ ಎನ್ನುತ್ತಾರೆ ಪ್ರೀತಿ. ನಗರದ ಬೇರೆಬೇರೆ ಕಡೆಗಳಲ್ಲೂ ಯೋಗ ತರಗತಿ ನಡೆಸುವ ಪ್ರೀತಿ, ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದಾರೆ. ಬೆಳಗ್ಗಿನ ಆ ಎರಡು ಗಂಟೆಗಳಲ್ಲಿ ಬೇರೆ ಕಡೆ ಯೋಗ ತರಬೇತಿ ನಡೆಸಲು ಬೇಡಿಕೆಯಿದ್ದರೂ, ಆ ಸಮಯವನ್ನು ಉಚಿತ ತರಬೇತಿಗಾಗಿಯೇ ಮೀಸಲಿಟ್ಟಿದ್ದಾರೆ ಪ್ರೀತಿ. ಯೋಗ, ನನ್ನ ವೃತ್ತಿ, ಪ್ರವೃತ್ತಿ ಮಾತ್ರ ಅಲ್ಲ, ಅದುವೇ ನನ್ನ ಜೀವನ ಎನ್ನುವ ಪ್ರೀತಿಗೆ, ಸಾವಿರಾರು ಜನರಿಗೆ ಉಚಿತವಾಗಿ ಯೋಗ ಹೇಳಿಕೊಡುವ, ಅವರ ಜೀವನಶೈಲಿಯನ್ನು ಸುಧಾರಿಸುವ ಗುರಿ ಇದೆ. 

“ದೇಹ ಮತ್ತು ಮನಸ್ಸಿನ ತೊಂದರೆಗಳಿಗೆ ನಾವು ಹೊರಗೆಲ್ಲೋ ಉತ್ತರಗಳನ್ನು ಹುಡುಕುತ್ತೇವೆ. ಆದರೆ, ಎಲ್ಲ ಸಮಸ್ಯೆಗಳಿಗೂ ಉತ್ತರ ನಮ್ಮೊಳಗೇ ಇದೆ. ನಮ್ಮ ಜೀವನಶೈಲಿಯನ್ನು ಬದಲಿಸಿಕೊಂಡರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ. ನನ್ನ ತರಗತಿಗೆ ಬಂದ ಅದೆಷ್ಟೋ ರೋಗಿಗಳು ದೈಹಿಕವಾಗಿ, ಮಾನಸಿಕವಾಗಿ ಗುಣ ಕಂಡಿದ್ದಾರೆ. ಧ್ಯಾನ, ಪ್ರಾಣಾಯಾಮದಿಂದ ಖನ್ನತೆ, ಅಹಂ, ಕೀಳರಿಮೆ ದೂರಾಗಿಸಿಕೊಂಡು ಸಂತೋಷವಾಗಿ ಬದುಕುವ ಕಲೆ ಕಲಿತಿದ್ದಾರೆ. ನನ್ನ ಕೈಲಾದ ಮಟ್ಟಿಗೆ ಜನರ ಜೀವನವನ್ನು ಉತ್ತಮಪಡಿಸುವ ಆಶಯ ಹೊಂದಿದ್ದೇನೆ’.  
– ಪ್ರೀತಿ, ಯೋಗ ಶಿಕ್ಷಕಿ

Advertisement

ಎಲ್ಲಿ?: ಕಬ್ಬನ್‌ ಪಾರ್ಕ್‌
ಯಾವಾಗ?: ಪ್ರತಿದಿನ ಬೆಳಗ್ಗೆ 5.30-7.15
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿ: ಪ್ರೀತೀಸ್‌ ವೆಲ್‌ನೆಸ್‌ ಯೋಗ ಫೇಸ್‌ಬುಕ್‌ ಪೇಜ್‌

 ಪ್ರಿಯಾಂಕಾ

Advertisement

Udayavani is now on Telegram. Click here to join our channel and stay updated with the latest news.

Next