ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಿಟಕಿಯ ಸರಳುಗಳನ್ನು ಮುರಿದು ಮನೆಗಳವು ಮಾಡುತ್ತಿದ್ದ ಮೂವರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಂಬೆ ಮೂಲದ ಜಿಲಾಲ್ ಮಂಡಲ್, ಸಲೀಂ ರಫಿಕ್, ಬಿಡದಿಯ ವಿನೋದ್‌ರಾಜ್ ಬಂಧಿತರು. ಆರೋಪಿಗಳಿಂದ 28 ಲಕ್ಷ ರೂ. ಮೌಲ್ಯದ 375 ಗ್ರಾಂ ಚಿನ್ನಾಭರಣ, 9.573 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳು, ಹುಂಡೈ ಐ10 ಕಾರು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.26ರಂದು ಆರ್.ಆರ್. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರ ಸದಸ್ಯರೆಲ್ಲರೂ ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ್ದರು. ಮಾ.28 ವಾಪಸ್ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ಮಾಲೀಕರು ಕೂಡಲೇ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂವರು ವೃತ್ತಿಪರ ಖದೀಮರು:
ಜಿಲಾಲ್ ಮಂಡಲ್ ಮತ್ತು ಮಂಡಲ್, ಸಲೀಂ ರಫಿಕ್ ಮಹಾರಾಷ್ಟ್ರ ಮೂಲದವರಾಗಿದ್ದು, ವಿನೋದ್ ರಾಜ್ ಬಿಡದಿಯವನಾಗಿದ್ದು, ಕಳವು ಪ್ರಕರಣವೊಂದರಲ್ಲಿ ಮೂವರು ಈ ಹಿಂದೆ ಜೈಲು ಸೇರಿದ್ದರು. ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿದ್ದರು. ಜಾಮೀನನ ಮೇಲೆ ಹೊರಬಂದ ಬಳಿಕ ಮೂವರು ಕಳ್ಳತನ ಮುಂದುವರಿಸಿದ್ದರು.
ನಗರದ ಬಗ್ಗೆ ಅರಿತಿದ್ದ ವಿನೋದ್‌ರಾಜ್, ನಗರವನ್ನೆಲ್ಲ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಮಂಡಲ್ ಮತ್ತು ರಫಿಕ್‌ಗೆ ಮಾಹಿತಿ ನೀಡುತ್ತಿದ್ದ. ಈ ಇಬ್ಬರು ಮನೆಯ ಕಿಟಕಿ ಸರಳು ಮುರಿದು ಒಳಗೆ ನುಸುಳಿ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.