ಚನ್ನರಾಯಪಟ್ಟಣ: ಪೊಲೀಸರ ಸೋಗಿನಲ್ಲಿ ತೋಟದ ಮನೆ ಪ್ರವೇಶ ಮಾಡಿದ ನಾಲ್ವರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಹೊಸೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಲವಣ್ಣಗೌಡರ ಕುಟುಂಬವೇ ನಕಲಿ ಪೊಲೀಸರಿಗೆ ಮೋಸ ಹೋಗಿದ್ದು, ಅಂದಾಜು ಒಂದು ಲಕ್ಷ ಬೆಲೆ ಬಾಳುವ 25 ಗ್ರಾಂ ಚಿನ್ನ ಕಳೆದುಕೊಂಡವರು. ಘಟನೆ ವಿವರ: ಆ.17 ರಂದು ರಾತ್ರಿ ನಾಲ್ವರು ಇನೋವಾ ಕಾರಿನಲ್ಲಿ ಬಂದು ಹೊಸೂರು ಲವಣ್ಣಗೌಡ ತೋಟದ ಮನೆ ಪ್ರವೇಶ ಮಾಡಿ ಮನೆ ಬಾಗಿಲು ಹಾಕಿಕೊಂಡಿದ್ದಾರೆ.
ನಾವು ಪೊಲೀಸರು, ಬೆಂಗಳೂರಿನಿಂದ ಬಂದಿದ್ದೇವೆ, ನಿಮ್ಮ ತಮ್ಮ ಬೆಂಗಳೂರಿ ನಿಂದ ಕಳ್ಳತನ ಮಾಡಿ ಹಣ ದೋಚಿ ಕೊಂಡು ಬಂದಿದ್ದಾನೆ ಕಳ್ಳತನ ಮಾಡಿರುವ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕುಟುಂಬದ ಸದಸ್ಯರನ್ನುಬೆದರಿಸಿದಲ್ಲದೆ, ಒಂದು ಪೈಲಿನಲ್ಲಿ ತಮ್ಮ ಕೃಷ್ಣೇಗೌಡನ ಫೋಟೋ ತೋರಿಸಿದ್ದಾರೆ ಆಗ ನನ್ನ ತಮ್ಮ ಕಳ್ಳತನ ಮಾಡಿಲ್ಲ ಎಂದು ಹೇಳಿದರೂ ಕೇಳದ ನಕಲಿ ಪೊಲೀಸರು ಹಣವನ್ನು ಎಲ್ಲಿ ಇಟ್ಟಿದ್ದಾನೆ ಹೇಳಿ ಎಂದು ಒತ್ತಾಯಿಸಿದ್ದಾರೆ.
ನನ್ನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿಲ್ಲ ಅವನು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಲವಣ್ಣ ಗೌಡ ಉತ್ತರಿಸಿದಾಗ ಕೋಪಗೊಂಡ ಚೋರರರು ನಾವು ಹೇಳಿದ್ದು ಕಳ್ಳತನ ಮಾಡಿರುವುದು ಬೆಂಗಳೂರಿನಲ್ಲಿ ಹಾಗಾಗಿ ನಾವು ನಿಮ್ಮ ಮನೆ ಪರಿಶೀಲನೆ ಮಾಡಬೇಕು. ನೀವು ಮೊದಲು ಮಾಸ್ಕ್ ಹಾಕಿಕೊಳ್ಳಿ ಎಂದು ಎಲ್ಲರಿಗೂ ಮಾಸ್ಕ್ ಧರಿಸಿ ಮನೆಯ ವರಾಂಡದಲ್ಲಿ ಕೂರಿಸಿದ್ದಾರೆ.
ಹಾಲ್‌ನಲ್ಲಿದ್ದ ಬೀರು, ಸೋಫಾ ಕೆಳಗೆ, ದಿವಾನ್ ಕಾಟ್ ಹಾಗೂ ಟಿಪಾಯಿ ಕೆಳಗಡೆ ಹುಡುಕಿ ಏನೂ ಸಿಗದ ಕಾರಣ ದೇವರ ಮನೆಯನ್ನು ಚೆಕ್ ಮಾಡಿದ್ದು ಪಕ್ಕದಲ್ಲಿದ್ದ ಬೀರುನ ಬಾಗಿಲನ್ನು ತೆಗೆದು ಸೇಫ್ ಲಾಕರ್ ನಲ್ಲಿದ್ದ 12 ಗ್ರಾಂನ 1 ಚಿನ್ನದ ಸರ, 8 ಗ್ರಾಂನ ಚಿನ್ನದ ಒಂದು ಜೊತೆ ಓಲೆಗಳು ಹಾಗೂ 5 ಗ್ರಾಂನ ಉಂಗುರ ಸೇರಿದಂತೆ 75 ಸಾರ ರೂ. ಮೌಲ್ಯದ ಚಿನ್ನಾಭರಣ ತೆಗೆದುಕೊಂಡಿದ್ದಾರೆ.
ಈ ವೇಳೆ ಕುಟುಂಬದ ಸದಸ್ಯರು ಇದು ಮನೆಯ ಒಡವೆ ಎಂದಾಗ ಇದೇ ರೀತಿ ನೀವು ಸುಳ್ಳು ಹೇಳಿದರೆ ಚನ್ನರಾಯ ಪಟ್ಟಣ ಠಾಣೆಗೆ ಕರೆದುಕೊಂಡು ಹೋಗಿ ಬೆಂಡು ಎತ್ತಬೇಕಾಗುತ್ತದೆ ಎಂದು ಗದರಿಸಿದ್ದಾರೆ, ಇದರಿಂದ ಬೆದರಿದ ಕುಟುಂಬದ ಸದಸ್ಯರು ಸುಮ್ಮನಾಗಿದ್ದಾರೆ. ಎಲ್ಲರನ್ನು ಒಟ್ಟಿಗೆ ಕೂರಿಸಿ ಫೋಟೋ ತೆಗೆದಿದ್ದಾರೆ ನಾವು ಹೇಳಿ ಕಳಿಸಿದಾಗ ಪೊಲೀಸ್ ಠಾಣೆಗೆ ಬರಬೇಕು ಎಂದು ತಾಕಿತ್ತು ಮಾಡಿ ಅಲ್ಲಿಂದ ಕಾಲು ಕಿತ್ತಿದ್ದಾರೆ.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣೆ ಪಿಎಸ್‌ಐ ವಿನೋದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.