ಬೆಳಗಾವಿ: ಗಡಿ ತಂಟೆ ಮಹಾ ವರ್ತನೆ ವಿರುದ್ಧ ಸರ್ವಾನುಮತದ ನಿರ್ಣಯವನ್ನು ಪರಿಷತ್ ಕಲಾಪದಲ್ಲಿ ಕೈಗೊಳ್ಳಲಾಯಿತು.
ಈಗಾಗಲೇ ಮಹಾಜನ ಆಯೋಗ ವರದಿ ಮಂಡಿಸಿ 66 ವರ್ಷಗಳೇ ಕಳೆದಿವೆ, ಎರಡು ರಾಜ್ಯಗಳ ಜನತೆ ಸೌಹಾರ್ದತೆಯಿಂದ ಬದುಕುತ್ತಿದ್ದು, ಗಡಿ ವಿಚಾರ ಮುಗದಿ ಅಧ್ಯಾಯವಾಗಿದೆ. ಆದರೂ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ಕುರಿತಾಗಿ ದಾವೆ ಹಾಕಿರುವುದು ಖಂಡನೀಯ.
ಗಡಿ ತಂಟೆ ಮರುಪರಿಶೀಲನೆ ಪರಮಾಧಿಕಾರ ಸಂಸತ್ತಿಗೆ ಮಾತ್ರ ಇದೆ. ರಾಜ್ಯ ಸರಕಾರ ಗಡಿ ಮತ್ತು ನದಿಗಳ ರಕ್ಷಣಾ ಆಯೋಗ ರಚಿಸಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕೇಂದ್ರ ಗೃಹ ಸಚಿವರು ಗಡಿ ವಿಷಯವಾಗಿ ಎರಡು ರಾಜ್ಯಗಳು ಶಾಂತಿ, ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ನೀಡಿದ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘಿಸುತ್ತಿರುವುದು ಖಂಡನಿಯ. ಇದು ಎರಡು ರಾಜ್ಯಗಳ ಸಂಬಂಧಕ್ಕೆ ಧಕ್ಕೆ ತರುತ್ತಿದ್ದು, ಈ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸುತ್ತ, ಕೇಂದ್ರ ಸರಕಾರದ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಚರ್ಚೆಯಲ್ಲಿ ಪಾಲ್ಗೊಂಡ ಸದಸ್ಯರಾದ ಪ್ರಕಾಶ ರಾಠೊಡ, ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ನವೀನ, ಎಸ್.ರವಿ, ಪ್ರಕಾಶ ಹುಕ್ಕೇರಿ, ರವಿಕುಮಾರ, ಯು.ಬಿ.ವೆಂಕಟೇಶ್ ಆಡಳಿತ-ವಿಪಕ್ಷಗಳ ಹಲವು ಸದಸ್ಯರು ಗಡಿ ತಂಟೆ ವಿಷಯವಾಗಿ ಮಹಾರಾಷ್ಟ್ರ, ಎಂಇಎಸ್, ಶಿವಸೇನಾ ವರ್ತನೆಯನ್ನು ಖಂಡಿಸಿದರು.
ಗಡಿ ಭಾಗದಲ್ಲಿ ಕನ್ನಡ-ಮರಾಠಿ ಭಾಷಿಕರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ಮಹಾರಾಷ್ಟ್ರದ ಕೆಲವರು ಪುಂಡಾಟಿಕೆ ನಡೆಸುತ್ತಿದ್ದು, ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಬೆಳಗಾವಿ, ನಿಪ್ಪಾಣಿ ಇನ್ನಿತರ ಪ್ರದೇಶ ಕೇಂದ್ರಾಡಳಿತ ಪ್ರದೇಶ ಆಗಬೇಕು ಎಂದು ಮಹಾರಾಷ್ಟ್ರ ಒತ್ತಾಯಿಸುತ್ತಿದೆ. ಆದರೆ, ಮುಖ್ಯವಾಗಿ ಕೇಂದ್ರಾಡಳಿತ ಪ್ರದೇಶವಾಗಬೇಕಾಗಿರುವುದು ಮುಂಬಯಿ.
– ಬಿ.ಕೆ.ಹರಿಪ್ರಸಾದ್
ಮಹಾರಾಷ್ಟ್ರದ ನಿರ್ಣಯಕ್ಕೆ
ಡಿ.ಕೆ.ಶಿವಕುಮಾರ್ ಆಕ್ರೋಶ
ಕರ್ನಾಟಕದ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಮಹಾರಾಷ್ಟ್ರ ದ ನಿರ್ಣಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ. ಕೇಂದ್ರದಲ್ಲಿ, ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಚುನಾವಣೆ ಸಮಯದಲ್ಲಿ ಆಶಾಂತಿ ಮೂಡಿಸುವ ಬಿಜೆಪಿ ಮಾಡುತ್ತಿರುವ ನಾಟಕ ಎಂದು ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ರಾಜ್ಯದ ಒಂದೂ ಹಳ್ಳಿಯನ್ನು ಮಹಾರಾಷ್ಟ್ರಕ್ಕೆ ನೀಡಲು ನಾವು ತಯಾರಿಲ್ಲ. ಅವರ ಒಂದು ಹಳ್ಳಿಯೂ ನಮಗೆ ಬೇಡ. ಎರಡೂ ರಾಜ್ಯಗಳ ಗಡಿ ಅಂತಿಮವಾಗಿದ್ದು, ನಮ್ಮ ಜನ ಅದರಂತೆ ಬದುಕುತ್ತಿದ್ದಾರೆ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕುತಂತ್ರದಿಂದ ಅಲ್ಲಿನ ಸಚಿವರು ಇದನ್ನು ಆರಂಭಿಸಿದ್ದು, ಈಗ ಎಲ್ಲ ಪಕ್ಷದವರು ಇದಕ್ಕೆ ಸೇರಿಕೊಂಡಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ರಾಜ್ಯವನ್ನು ಕಾಪಾಡಬೇಕು ಎಂದರು.