Advertisement

ಭವನಕ್ಕೆ ಬೆಲ್ಲದ ತಾಯಿ ಹೆಸರು: ವಿರೋಧ

02:50 PM Mar 15, 2017 | Team Udayavani |

ಧಾರವಾಡ: ಇಲ್ಲಿನ ಚನ್ನಬಸವೇಶ್ವರ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವೀರಶೈವ ಲಿಂಗಾಯತ ಭವನಕ್ಕೆ ಶಾಸಕ ಅರವಿಂದ ಬೆಲ್ಲದ ಅವರ ತಾಯಿ ಹೆಸರಿಡಲು ಮುಂದಾಗಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಈಗಾಗಲೇ ಬಹಿರಂಗ ಚರ್ಚೆಗೆ ಇಳಿದಿದ್ದ ಲಿಂಗಾಯತ ಸಮುದಾಯದ ಕೆಲವು ಮುಖಂಡರು ಬೆಲ್ಲದ ಅವರ ಹೆಸರಿಡಲು ಅದು ಅವರ ಮನೆಯಿಂದ ಹಣ ಹಾಕಿ ಕಟ್ಟಿದ ಕಟ್ಟಡ ಅಲ್ಲವೇ ಅಲ್ಲ.

Advertisement

ಹೀಗಾಗಿ ಕೂಡಲೇ ಅದಕ್ಕೆ ಕೇವಲ ವೀರಶೈವ ಲಿಂಗಾಯತ ಭವನ ಎಂದಷ್ಟೇ ಹೆಸರಿಡುವಂತೆ ಆಗ್ರಹಿಸಿದ್ದರು. ಮಂಗಳವಾರ ಈ ಕುರಿತು ಲಿಂಗಾಯತ ಭವನದಲ್ಲಿ ನಡೆದ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಸಭೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿ, ಬೆಲ್ಲದ ಅವರ ಕ್ರಮಕ್ಕೆ ಸಭೆಯಲ್ಲಿ ತೀವ್ರ ವಿರೋಧವೂ ವ್ಯಕ್ತವಾಯಿತು. ಇದಲ್ಲದೇ ಈ ಭವನಕ್ಕೆ ವೀರಶೈವ ಲಿಂಗಾಯತ ಭವನ ಎಂದು ನಾಮಕರಣ ಮಾಡುವಂತೆ ಸಮಾಜದ ಮುಖಂಡರು ಅಭಿಪ್ರಾಯ ಮಂಡಿಸಿದರು. 

ಭವನಕ್ಕೆ ಲೀಲಾವತಿ ಚಂದ್ರಕಾಂತ ಬೆಲ್ಲದ ಸಮುದಾಯ ಭವನ ಎಂದು ನಾಮಕರಣ ಮಾಡಿದ್ದಲ್ಲದೇ, ಮಾ.18ರಂದು ಭವನ ಉದ್ಘಾಟನೆ ಮಾಡುವುದಾಗಿ ಶಾಸಕ ಅರವಿಂದ ಬೆಲ್ಲದ ಅವರು ಹೇಳಿದ್ದರಿಂದ ಮಂಗಳವಾರ ಸಂಜೆ ಪದಾಧಿಧಿಕಾರಿಗಳು ಸಭೆ ಕರೆದು, ಸಮುದಾಯದ ಜನರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದರು. ಸಮಾಜದ ವತಿಯಿಂದ ಸಮುದಾಯ ಭವನ ಹೆಸರಿಡುವ ಕುರಿತು ಗೊಂದಲ ನಿರ್ಮಾಣವಾಗಿದ್ದು ಬೇಸರದ ಸಂಗತಿ.

ಆದರೆ ಬೆಲ್ಲದ ಅವರ ಬಳಿ ದೇಣಿಗೆ ಕೇಳಲು ಹೋಗಿದ್ದ ಹಿರಿಯರು ಬೈಲಾ ತಿಳಿದುಕೊಂಡಿದ್ದರೆ ಎಂದು ಪ್ರಶ್ನಿಸಿದ ಅವರು, ಈ ಕುರಿತು ಗುಪ್ತ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ದೇಣಿಗೆ ಪಡೆಯಲು ಹೋದ ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಸೇರಿ ಸಮಸ್ಯೆ ಬಗೆಹರಿಸಬೇಕೆಂದು ಅಭಿಪ್ರಾಯ ಮಂಡಿಸಿದರು. ಸಿಬಿ ನಗರದ ನಿವಾಸಿ ಎಸ್‌.ಎಚ್‌. ಪಾಟೀಲ, ಮೈಲಾರ ಉಪ್ಪಿನ, ಮೋಹನ ಹೂಗಾರ, ಶಿವಾನಂದ ಭಾವಿಕಟ್ಟಿ ಮಾತನಾಡಿ, ನಗರದಲ್ಲಿ ಸಮಾಜದ ಕಾರ್ಯಕ್ಕೆ ಯಾವುದೇ ರೀತಿಯ ಭವನವಿಲ್ಲ.

ಹೀಗಾಗಿ ಈ ಭವನಕ್ಕೆ ಲಿಂಗಾಯತ ಭವನ ಎಂದೇ ನಾಮಕರಣ ಮಾಡಬೇಕೇ ಹೊರತು ಬೇರೆಯವರ ಹೆಸರು ಬೇಡ. ಭವನಕ್ಕೆ ಹೆಸರಿಡುವ ಕುರಿತು ಎದುರಾದ ಸಮಸ್ಯೆಗೆ ಶಾಸಕರೊಂದಿಗೆ ಹಾಗೂ ಕೇಂದ್ರ ಮಹಾಸಭಾದೊಂದಿಗೆ ಚರ್ಚಿಸಬೇಕು. ಹೆಚ್ಚಿಗೆ ದೇಣಿಗೆ ನೀಡಿದ್ದರೆ ಅವರ ಹೆಸರನ್ನು ಒಂದು ಕೊಠಡಿಗೆ ಇಲ್ಲವೇ, ವೇದಿಕೆಗೆ ಇಡಿ. ಈ ವಿಷಯವನ್ನು ಸುಖಾಸುಮ್ಮನೆ ಬೆಳಸದೇ ಶೀಘ್ರದಲ್ಲಿ ಒಂದು ನಿರ್ಣಯಕ್ಕೆ ಬರಬೇಕು ಎಂದರು.

Advertisement

ಶಿವಾನಂದ ಶಿವಳ್ಳಿ ಮಾತನಾಡಿ, ಬೆಲ್ಲದ ಅವರು 25 ಲಕ್ಷ ರೂ. ದೇಣಿಗೆಯನ್ನು  ಹಂತ ಹಂತವಾಗಿ ನೀಡಿದ್ದಾರೆ. ಅವರ ಹೆಸರು ಇಡುವಂತೆ ಸಮಿತಿ ನಿರ್ಣಯ ಮಾಡಿದೆ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು, ಶಾಸಕರ ನಿಧಿಧಿಯಿಂದ ಅನುದಾನ ನೀಡಿದ್ದರೆ ಅವರ ಹೆಸರಿಡುವುದು ಬೇಡ. ಆದರೆ ವೈಯಕ್ತಿಕವಾಗಿ ಹಣ ನೀಡಿದ್ದರೆ ಅವರ ಹೆಸರಿಡಲು ಯಾವುದೇ ತಪ್ಪಿಲ್ಲ ಎಂದರು. 

ಇದರಿಂದ ಕೆರಳಿದ ಜನರು ಇದಕ್ಕೆ ಆಸ್ಪದ ನೀಡುವುದಿಲ್ಲ. ನೀವು ಈ ರೀತಿ ಮಾತನಾಡುವುದು ತಪ್ಪು ಎಂದು ಕೆಲಕಾಲ ವಾಗ್ವಾದ ನಡೆಸಿದರು. ಚಂದ್ರಶೇಖರ ಮನಗುಂಡಿ ಮಾತನಾಡಿ, ಸಮಾಜ ಒಂದು ಕುಟುಂಬ ಇದ್ದಂತೆ. ಇಲ್ಲಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಬೇಕು.  ಸಮಾಜದ ಮರ್ಯಾದೆ ಕಳೆಯುವ ಕೆಲಸ ಮಾಡಬಾರದು.

ಎಲ್ಲರನ್ನೂ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಕೊನೆಗೆ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಿ ಸಭೆ ಮುಕ್ತಾಯಗೊಳಿಸಲಾಯಿತು. ಸಮಾಜದ ಮುಖಂಡರಾದ ಗುರುರಾಜ ಹುಣಸಿಮರದ, ಶಿವಾನಂದ ಅಂಬಡಗಟ್ಟಿ, ಶಿವು ಹಿರೇಮಠ ಸೇರಿದಂತೆ ಹಲವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next