Advertisement
‘ಉದಯವಾಣಿ – ಸುದಿನ’ದಲ್ಲಿ ಸೆ. 11ರಂದು ಪ್ರಕಟವಾದ ವಿಶೇಷ ವರದಿ ಗಮನಿಸಿದ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಅವರು, ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಕುಟುಂಬದ ನೆರವಿಗೆ ನಿಂತಿದ್ದಾರೆ. ಗ್ರಾಮದ ಮೂಡುಬೈಲು ಎಂಬಲ್ಲಿ ಡಾಮರು ರಸ್ತೆಯಿಂದ ಅನತಿ ದೂರದಲ್ಲಿ ಈ ಕುಟುಂಬ ಮರದ ಕೆಳಗೆ ಟಾರ್ಪಾಲ್ ಹಾಸಿದ ಗುಡಿಸಲಿನಲ್ಲಿ 20 ವರ್ಷಗಳಿಂದ ಆಶ್ರಯ ಪಡೆದಿದೆ. ಮುದರ, ಪತ್ನಿ ಗೀತಾ ಹಾಗೂ ಐವರು ಮಕ್ಕಳು ಇಲ್ಲಿ ಜೀವಿಸುತ್ತಿದ್ದಾರೆ. ಇದೇ ಪರಿಸರದಲ್ಲಿ ತಿಮ್ಮಪ್ಪ ಹಾಗೂ ಪುಷ್ಪಾ ಎಂಬವರೂ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದು, ಅವರಿಗೂ ಸರಕಾರದ ವಸತಿ ಯೋಜನೆಯಿಂದ ಮನೆ ಕೊಡಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಪರಿಸ್ಥಿತಿ ಅವಲೋಕಿಸಿ, ಗ್ರಾ.ಪಂ.ಗೆ ಬರುವಂತೆ ತಿಳಿಸಿದ್ದೆ. ಯಾರೂ ಬರಲಿಲ್ಲ. ಹೀಗಾಗಿ, ಸಮಸ್ಯೆ ಹಾಗೇ ಉಳಿಯಿತು. ಈಗ ನನ್ನ ಖರ್ಚಿನಲ್ಲೇ ಶೀಟ್‌ಗಳನ್ನು ತಂದು ತಾತ್ಕಾಲಿಕವಾಗಿ ವಸತಿಗೆ ವ್ಯವಸ್ಥೆ ಮಾಡಿಸುತ್ತಿದ್ದೇವೆ. ಮುಂದೆ ಗ್ರಾ.ಪಂ. ವತಿಯಿಂದ ಶಾಶ್ವತ ವ್ಯವಸ್ಥೆಗೆ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳುವೆ. ಹೊಸ ಮನೆ ಮಂಜೂರಾತಿಗೆ ಬೇಕಾದ ಎಲ್ಲ ದಾಖಲೆಗಳ ಬಗ್ಗೆ ಹಾಗೂ ಪಂ. ಗೆ ಪಾವತಿಸಬೇಕಾದ ದಾಖಲೆಗಳ ಖರ್ಚನ್ನೂ ನಾನೇ ಭರಿಸುತ್ತೇನೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.