Advertisement
ತ್ರಿಶಂಕು ಸ್ಥಿತಿ: ಅಂಥಹುದೇ ಸ್ಥಿತಿ ಇಲ್ಲಿನ ಸಾತನೂರು ರಸ್ತೆಯ ಕಣ್ವ ವಸತಿ ಬಡಾವಣೆಯಲ್ಲಿ ಎದುರಾಗಿದೆ. ಈ ಹಿಂದೆ ರಾಮನಗರ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲಿ ಬಡಾವಣೆ ನಿರ್ಮಿಸಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಹಂಚಿಕೆ ಮಾಡಿ ಹಣ ಕಿತ್ತುಕೊಂಡ ಪ್ರಾಧಿಕಾರ ಮನೆ ಕಟ್ಟಲು ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸದೆ ಕೈತೊಳೆದುಕೊಂಡ ಪರಿಣಾಮ, ನಿವೇಶನ ಕೊಂಡವರು ಅತ್ತ ಮನೆ ನಿರ್ಮಿಸಲು ಆಗದೆ, ಮಾರಲೂ ಆಗದೆ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ.
Related Articles
Advertisement
ಅಧಿಕಾರಿಗಳು-ಗುತ್ತಿಗೆದಾರರ ಗುದ್ದಾಟ: ಹೇಳಿ ಕೇಳಿ ಬಡಾವಣೆ ಪಟ್ಟಣದ ಹೊರಭಾಗದಲ್ಲಿರುವುದರಿಂದ ನಿರ್ಮಾಣ ಹಂತದಲ್ಲಿರುವ ಈಜುಕೊಳ ಕಟ್ಟಡ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಕಟ್ಟಡ ಕಾಮಗಾರಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವಿನ ಗುದ್ದಾಟದಿಂದ ಸ್ಥಗಿತಗೊಂಡಿದ್ದು, ಈ ಕಟ್ಟಡದೊಳಗೆ ರಾತ್ರಿ ವೇಳೆ ಮದ್ಯಪಾನ, ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.
ಇದರ ಜತೆಗೆ ಕಟ್ಟಡದ ಒಳಗೆ ಹಾಗೂ ಸುತ್ತಮುತ್ತಲಿನ ಪ್ರದೇಶ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದ್ದು, ಒಳಗೆ ಕಾಲಿಡಲೂ ಸಾಧ್ಯವಾಗದ ಸ್ಥಿತಿಗೆ ಕಟ್ಟಡ ತಲುಪಿದೆ. ಜತೆಗೆ ಈಜುಕೊಳ ನಿರ್ಮಿಸಲು ತೆಗೆದಿರುವ ಗುಂಡಿಯೂ ಸಹ ಇದರಿಂದ ಹೊರತಾಗಿಲ್ಲ. ಪಕ್ಕದಲ್ಲೇ ಇರುವ ನೀರಿನ ಟ್ಯಾಂಕ್ ಹಾಗೂ ನಿರ್ವಹಣೆ ಕಟ್ಟಡವೂ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.
ಅದ್ವಾನವಾಗಿರುವ ವಾಕಿಂಗ್ ಪಾಥ್, ಉದ್ಯಾನ: ಬಡಾವಣೆಯಲ್ಲಿ ಅಲ್ಲಲ್ಲಿ ನಿರ್ಮಾಣವಾಗಿರುವ ವಾಕಿಂಗ್ ಪಾಥ್ ಹಾಗೂ ಉದ್ಯಾನವನಗಳು ಈಗಾಗಲೇ ತಮ್ಮ ಅಸ್ತಿತ್ವ ಕಳೆದುಕೊಂಡಿದ್ದು, ವಾಕಿಂಗ್ ಪಾಥ್‌ಗೆ ಹಾಕಿರುವ ನೆಲಹಾಸು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಬಡಾವಣೆ ವ್ಯಾಪ್ತಿಯಲ್ಲಿ ಏಳೆಂಟು ಉದ್ಯಾನವನಗಳಿಗೆ ಜಾಗ ಮೀಸಲಿರಿಸಿ ಕಬ್ಬಿಣದ ಗ್ರಿಲ್ ಹಾಕಲಾಗಿತ್ತು. ಆದರೆ ಗ್ರಿಲ್‌ಗಳನ್ನೂ ಮುರಿದು ಮಾರಿಕೊಂಡಿರುವ ಕಳ್ಳರು ನಿಯಂತ್ರಿಸುವವರು ಇಲ್ಲದ ಪರಿಣಾಮ ತಮ್ಮ ಚಾಳಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಪಟ್ಟಣಕ್ಕೆ ಸನಿಹವಾಗಿದ್ದರೂ ಬಡಾವಣೆ ಇಂದಿಗೂ ಅನಾಥವಾಗಿದ್ದು, ಯಾರೂ ಸಹ ಮನೆ ಕಟ್ಟಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕುತ್ತಿಲ್ಲ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರೆ ಈ ಸ್ಥಳ ಸುಂದರ ಬಡಾವಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಬೇಕೆಂಬುದು ನಿವೇಶನದಾರರ ಆಗ್ರಹವಾಗಿದೆ.
ಮೂಲಭೂತ ಸೌಲಭ್ಯಗಳಿಲ್ಲದೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ದಶಕ ಕಳೆದರೂ ಇಂದಿಗೂ ಸೌಲಭ್ಯ ನೀಡದ ಪ್ರಾಧಿಕಾರ ನಿವೇಶನದಾರರಿಗೆ ಮೋಸ ಮಾಡುತ್ತಿದೆ. ಸಾಧ್ಯವಾದಷ್ಟು ಬೇಗ ಸೌಲಭ್ಯ ಕಲ್ಪಿಸಿ ಮನೆ ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿ ಕೊಡಬೇಕು. -ನಟರಾಜ, ನಿವೇಶನ ಕೊಂಡವರು ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಇದೀಗ ಅಸ್ತಿತ್ವಕ್ಕೆ ಬಂದಿದ್ದು, ಬಡಾವಣೆ ಸ್ಥಿತಿಗತಿ ಬಗ್ಗೆ ವರದಿ ಪಡೆದುಕೊಂಡಿದ್ದೇವೆ. ಅಗತ್ಯ ಅನುದಾನವನ್ನ ಪಡೆದುಕೊಂಡು ಶೀಘ್ರವೇ ಮೂಲಭೂತ ಸೌಲಭ್ಯ ಕಲ್ಪಿಸುತ್ತೇವೆ.
-ಎ.ಸಿ.ವೀರೇಗೌಡ, ಅಧ್ಯಕ್ಷ, ಚನ್ನಪಟ್ಟಣ ಯೋಜನಾ ಪ್ರಾಧಿಕಾರ