ಹೊಸದಿಲ್ಲಿ: ಇದುವರೆಗೆ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಹೋದಾಗ ಬೇಕಾದ್ದನ್ನು ಆರ್ಡರ್ ಮಾಡಿ ಬೇಕಾಗಿದ್ದನ್ನು ತಿಂದು, ಬೇಡವಾದುದನ್ನು ಎಸೆಯುವ “ಸ್ವಾತಂತ್ರ್ಯ’ ಇತ್ತು. ಹೀಗಾಗಿ, ಹೊಟೇಲ್‌ಗಳಲ್ಲಾಗುತ್ತಿರುವ ಆಹಾರ ಪೋಲನ್ನು ತಡೆಗಟ್ಟಲು ಕೇಂದ್ರ ಸರಕಾರ ಇನ್ನು ಮುಂದೆ ಹೊಸ ನೀತಿಯೊಂದನ್ನು ಜಾರಿಗೆ ತರುವ ಸಾಧ್ಯತೆ ಇದೆ.
ಈ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಗಳವಾರ ಸುಳಿವು ನೀಡಿದ್ದು, ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲಕರ ಜತೆ ಚರ್ಚಿಸಿ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. “ಆಹಾರ ಪೋಲು ಮಾಡುವುದು ಬಡವರಿಗೆ ಮಾಡುವ ಅನ್ಯಾಯ. ಇದನ್ನು ನಿಯಂತ್ರಿಸಲೇಬೇಕು’ ಎಂದು ಈಚೆಗಷ್ಟೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲೇ ಪಾಸ್ವಾನ್ ಈ ಸುಳಿವು ನೀಡಿದ್ದಾರೆ.
“ವ್ಯಕ್ತಿ ಎರಡು ಇಡ್ಲಿ ಮಾತ್ರ ತಿನ್ನಬಲ್ಲ ಎಂದಾದರೆ ಆತನಿಗೆ ನಾಲ್ಕು ಇಡ್ಲಿ ಕೊಡುವುದೇಕೆ? ಹಾಗೇ ನಾಲ್ಕು ಪೀಸ್ ಕಬಾಬ್ ಮಾತ್ರ ತಿನ್ನಬಲ್ಲ ವ್ಯಕ್ತಿಗೆ ಪ್ಲೇಟ್‌ಗೆ ಎಂಟು ಪೀಸ್ ಕಬಾಬ್ ಕೊಟ್ಟರೆ ಆಹಾರ ಹಾಳು ಮಾಡಿದಂತೆ. ಅಲ್ಲದೆ ಜನ ತಾವು ತಿನ್ನದೇ ಇರುವ ಆಹಾರಕ್ಕೂ ಹಣ ಕೊಡಬೇಕಾಗುತ್ತದೆ’ ಎಂದು ಪಾಸ್ವಾನ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬ ಕುರಿತು ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಶೀಘ್ರದಲ್ಲೇ ಪ್ರಶ್ನಾವಳಿಯೊಂದನ್ನು ಸರಕಾರ ನೀಡಲಿದೆ. “ಜನ ಏನನ್ನು, ಎಷ್ಟು ಸೇವಿಸುತ್ತಾರೆ ಎಂದು ಹೊಟೇಲ್‌ನವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಆಹಾರದ ಪ್ರಮಾಣ ಎಷ್ಟಿರಬೇಕೆಂದು ಅವರೇ ತಿಳಿಸಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಹೊಟೇಲ್ ಮಾಲಕರ ಸಭೆ ಕರೆಯಲಾಗುವುದು’ ಎಂದು ಪಾಸ್ವಾನ್ ಹೇಳಿದ್ದಾರೆ.
“ಸಾಕಷ್ಟು ಆಹಾರ ವ್ಯರ್ಥವಾಗುತ್ತಿರುವುದನ್ನು ಹೊಟೇಲ್‌ಗಳಲ್ಲಿ ನಾನೇ ಕಣ್ಣಾರೆ ನೋಡಿದ್ದೇನೆ. ಭಾರೀ ಸಂಖ್ಯೆಯಲ್ಲಿ ಬಡವರು ಇರುವ ದೇಶದಲ್ಲಿ ಈ ರೀತಿ ಪೋಲು ಆಗಬಾರದು. ಇದಕ್ಕೆ ಕಾನೂನಿನ ಚೌಕಟ್ಟಿನಡಿ ನಿಯಂತ್ರಣ ಹೇರಲು ಸಾಧ್ಯವೇ ಎಂದು ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದ ಸಚಿವರು, “ಹಾಗೆಂದು ಸರಕಾರ ವಿಧಿಸುವ ಮಿತಿ ಎಂದು ಭಾವಿಸಬಾರದು’ ಎಂದೂ ಸ್ಪಷ್ಟಪಡಿಸಿದ್ದಾರೆ.
ವಿಶ್ವಸಂಸ್ಥೆ ಹೇಳುವಂತೆ, ಜಗತ್ತಿನಾದ್ಯಂತ ಪ್ರತಿ ವರ್ಷ 3ನೇ ಒಂದು ಭಾಗದಷ್ಟು (130 ಕೋಟಿ ಟನ್) ಆಹಾರ ಪೋಲಾಗುತ್ತದೆ. ಈ ಪೈಕಿ ಶೇ.45ರಷ್ಟು ಹಣ್ಣು ಮತ್ತು ತರಕಾರಿ, ಶೇ.35ರಷ್ಟು ಮೀನು ಮತ್ತು ಕಡಲ ಆಹಾರ, ಶೇ.30ರಷ್ಟು ಧಾನ್ಯಗಳು, ಶೇ.20ರಷ್ಟು ಹೈನು ಉತ್ಪನ್ನಗಳು ಹಾಗೂ ಶೇ.20ರಷ್ಟು ಮಾಂಸಾಹಾರ ವ್ಯರ್ಥವಾಗುತ್ತಿದೆ.
ಪೋಲು ತಡೆಯೇ ಪರಿಹಾರ
2050ರ ವೇಳೆಗೆ ಜಾಗತಿಕ ಜನಸಂಖ್ಯೆ 960 ಕೋಟಿ ಮೀರಲಿದ್ದು, ಇಷ್ಟೊಂದು ಜನರಿಗೆ ಆಹಾರ ಒದಗಿಸುವುದು ಹೇಗೆ ಎಂಬ ಚಿಂತೆ ಪ್ರತಿ ರಾಷ್ಟ್ರವನ್ನೂ ಕಾಡುತ್ತಿದೆ. ಈ ನಡುವೆ ಇದಕ್ಕೆ ಪರಿಹಾರ ಸೂಚಿಸಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ, “ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಹೆಚ್ಚಿಸುವ ಬದಲು, ಆಹಾರ ಪೋಲಾಗುವುದನ್ನು ತಡೆಯಿರಿ’ ಎಂದು ಸಲಹೆ ನೀಡಿದೆ.