Advertisement

ಗಂಗಾವತಿ: ವಿದೇಶಿ ಪ್ರವಾಸಿಗರ ಗೈರಿನಲ್ಲೂ ನ್ಯೂ ಇಯರ್ ಆಚರಣೆಗೆ ಶೃಂಗಾರಗೊಂಡಿರುವ ಹೊಟೇಲ್‌ಗಳು

12:56 PM Dec 28, 2021 | Team Udayavani |

ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿ ತೆರವು ಮಾಡಿದ ನಂತರ ಕಳೆದೆರಡು ವರ್ಷಗಳಿಂದ ಕೊರೊನಾ ರೋಗದ ಪರಿಣಾಮ ವಿದೇಶಿ ಪ್ರವಾಸಿಗರು ಆನೆಗೊಂದಿ ಅಂಜನಾದ್ರಿ ಕಡೆ ಬರುತ್ತಿಲ್ಲ. ಈ ಮಧ್ಯೆ ನ್ಯೂ ಇಯರ್ ಆಚರಣೆಗೆ ಆನೆಗೊಂದಿ ಸಾಣಾಪೂರ ಭಾಗದಲ್ಲಿರುವ ಹೊಟೇಲ್‌ಗಳನ್ನು ಶೃಂಗರಿಸಲಾಗಿದೆ.

Advertisement

ಜಿಲ್ಲಾಡಳಿತ ವೈಭವದ ಹೊಸ ವರ್ಷಆಚರಣೆಗೆ ನಿರ್ಬಂಧ ವಿಧಿಸಿದ್ದು ರಾತ್ರಿ 10.30 ರೊಳಗೆ ಹೆಚ್ಚು ಜನ ಸೇರದಂತೆ ಹೊಸ ವರ್ಷ ಆಚರಣೆ ಮಾಡಬೇಕು. ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ. ವಿರೂಪಾಪೂರಗಡ್ಡಿ ತೆರವು ಮಾಡಿದ ನಂತರ ಆನೆಗೊಂದಿ, ಜಂಗ್ಲಿ, ಹನುಮನಹಳ್ಳಿ, ಸಾಣಾಪುರ, ಅಂಜನಳ್ಳಿ ಭಾಗದ ರೈತರ ಗದ್ದೆಯನ್ನು ಲೀಜ್ ಪಡೆದು ಸ್ಥಲೀಯರು ಹಾಗೂ ಹಂಪಿ ಭಾಗದ ವರ್ತಕರು ಸಣ್ಣ ಸಣ್ಣ ಗುಡಿಸಲು ಹಾಕಿಕೊಂಡು ಹೋಟೇಲ್ ಆರಂಭಿಸಿದ್ದು ಪ್ರತಿ ವಾರ ವೀಕ್ ಎಂಡ್ ಸಂದರ್ಭದಲ್ಲಿ ಇಲ್ಲಿಯ ಹೊಟೇಲ್‌ಗಳಿಗೆ ಮುಂಗಡ ಆನ್‌ಲೈನ್ ಬುಕ್ಕ್ ಮಾಡಿ ಬೆಂಗಳೂರು, ಹೈದ್ರಾಬಾದ್, ಹುಬ್ಬಳ್ಳಿ ಸೇರಿ ಸುತ್ತಲಿನ ಐಟಿ ಬಿಟಿ ಉದ್ಯೋಗಿಗಳು ಸೇರಿ ಇತರೆ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕ್ರಿಸ್ಮಸ್  ಸಂದರ್ಭದಲ್ಲಿ ಬಹುತೇಕ ಹೊಟೇಲ್‌ಗಳು ತುಂಬಿದ್ದು ಕಂಡು ಬಂತು.

ಹೊಸ ವರ್ಷದ ಹರ್ಷ ಎಲ್ಲೆಡೆ ಕಂಡು ಬರುತ್ತಿದ್ದು ಕೊರೊನಾ ರೋಗ ಹರಡದಂತೆ ಸರಕಾರ ಬಿಗಿ ಕ್ರಮ ಕೈಗೊಂಡಿರುವುದರಿಂದ ಈ ಭಾರಿಯ ಹೊಸ ವರ್ಷದ ಆಚರಣೆಗೆ ಅಲ್ಪ ಪ್ರಮಾಣದ ತಡೆಯಾಗಿದೆ. ಪ್ರತಿ ವರ್ಷ ಹೊಸ ವರ್ಷದ ಆಚರಣೆಗೆ ಹೊಟೇಲ್‌ಗಳಲ್ಲಿ ಡಿಜೆ ಹಾಕಿ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಭಾರಿ ರಾತ್ರಿ ಕರ್ಪ್ಯೂ ಇರುವುದರಿಂದ ಹೊಸ ವರ್ಷದ ಆಚರಣೆಗಳನ್ನು ಸರಳವಾಗಿ ಮಾಡಿ ರಾತ್ರಿ 10.30 ಕ್ಕೆ ಎಲ್ಲಾ ವ್ಯವಹಾರ ಬಂದ್ ಮಾಡುವಂತೆ ಜಿಲ್ಲಾಡಳಿತ ಈಗಾಗಲೇ ಹೊಟೇಲ್ ಮಾಲೀಕರ ಸಭೆ ನಡೆಸಿ ನಿರ್ಬಂಧ ವಿಧಿಸಿದೆ.

ಪ್ರವಾಸೋದ್ಯಮಕ್ಕೆ ಪೆಟ್ಟು :

Advertisement

ಪ್ರವಾಸಿಗರ ಮಿನಿ ಗೋವಾ ಎಂದು ಖ್ಯಾತಿ ಪಡೆದಿದ್ದ ವಿರೂಪಾಪುರಗಡ್ಡಿಯಲ್ಲಿ ಒಂದೇ ಕಡೆ ಹಲವು ಹೊಟೇಲ್‌ಗಳಿದ್ದವು ಇದರಿಂದ ಹೊಸ ವರ್ಷ ಆಚರಣೆ ಹಾಗೂ ಹೋಳಿ ಹಬ್ಬ ಆಚರಣೆ ದೇಶ ವಿದೇಶದ ಪ್ರವಾಸಿಗರಿಂದ ಸಡಗರದಿಂದ ಕೂಡಿತ್ತು. ವಿರೂಪಾಪೂರಗಡ್ಡಿ ತೆರವು ಮಾಡಿದ ನಂತರ ಆನೆಗೊಂದಿ ಭಾಗದ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯೂ ಪ್ರವಾಸೋದ್ಯಮ ನೆಲಕಚ್ಚುವಂತೆ ಮಾಡಿದೆ. ಸಾಣಾಪೂರ, ಆನೆಗೊಂದಿ ಮತ್ತು ಹನುಮನಹಳ್ಳಿ ಭಾಗದಲ್ಲಿರುವ ಹೊಟೇಲ್‌ಗಳಲ್ಲಿ ಈ ವರ್ಷದ ನ್ಯೂ ಇಯರ್ ಆಚರಣೆ ನಡೆಯುತ್ತಿದ್ದರೂ ರಾತ್ರಿ ಕರ್ಪ್ಯೂ ಇರುವುದರಿಂದ ವೈಭವ ಮರೆಯಾಗಿದೆ. ಜಿಲ್ಲಾಧಿಕಾರಿಗಳು ಸೂಚಿಸಿದಂತೆ ರಾತ್ರಿ 10.30ಕ್ಕೆ ಹೊಟೇಲ್‌ಗಳನ್ನು ಬಂದ್ ಮಾಡಲಾಗುತ್ತದೆ. ಸರಕಾರದ ಸೂಚನೆಯಂತೆ ಕೊರೊನಾ ಮಾರ್ಗಸೂಚಿ ಅನ್ವಯ ಸ್ಯಾನಿಟೈಜರ್ ಮತ್ತು ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು  ಹೆಸರು ಹೇಳಲು ಇಚ್ಛಿಸದ ಹೊಟೇಲ್ ಮಾಲೀಕರೊಬ್ಬರು ತಿಳಿಸಿದ್ದಾರೆ

ನಿಯಮ ಪಾಲನೆ ಮಾಡಬೇಕು :

ನ್ಯೂ ಇಯರ್ ಆಚರಣೆ ಮಾಡಲು ಕೊರೊನಾ ರೋಗ ಅಡ್ಡಿಯಾಗಿದ್ದು ಸರಕಾರದ ಮಾರ್ಗಸೂಚಿ ಅನ್ವಯ ತಾಲೂಕಿನ  ಈಗಾಗಲೇ ಪ್ರವಾಸಿ ತಾಣಗಳಲ್ಲಿರುವ ಹೊಟೇಲ್‌ಗಳ ಮಾಲೀಕರಿಗೆ ರಾತ್ರಿ 10.30ಕ್ಕೆ ವ್ಯವಹಾರ ಬಂದ್  ಮಾಡಬೇಕು. ಸಂಗಿತ ನೃತ್ಯ ಹಾಗೂ ಹೆಚ್ಚು ಜನರನ್ನು ಸೇರಿಸದಂತೆ  ತಾಕೀತು ಮಾಡಲಾಗಿದೆ. ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಡಿ.31 ರಂದು ಆನೆಗೊಂದಿ ಭಾಗದ ಹೊಟೇಲ್‌ಗಳ ಮೇಲೆ ಹದ್ದಿನಕಣ್ಣು ಇಡಲಿದ್ದು ಸರಕಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ತಹಸೀಲ್ದಾರ್ ಯು. ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ .

-ವಿಶೇಷ ವರದಿ :ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next