ಬೆಂಗಳೂರು: ಕೋವಿಡ್ 19 ಲಾಕ್‌ಡೌನ್ ನಾಲ್ಕನೇ ಹಂತ ಮೇ 31 ಕ್ಕೆ ಮುಗಿದು ಜೂ.1 ರಿಂದ ತಮ್ಮ ವ್ಯಾಪಾರ ವಹಿವಾಟು ಪ್ರಾರಂಭಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದ ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳ ಮಾಲೀಕರಿಗೆ ನಿರಾಸೆಯುಂಟಾಗಿದೆ. ಕೇಂದ್ರ ಸರ್ಕಾರವು ಲಾಕ್‌ಡೌನ್ ಐದನೇ ಹಂತದಲ್ಲಿ ಜೂ.8 ರಿಂದ ಆರಂಭ ಎಂದು ಹೇಳಿರುವುದರಿಂದ ಇನ್ನೊಂದು ವಾರ ಕಾಯುವಂತಾಗಿದೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಹೋಟೆಲ್, ರೆಸ್ಟೋರೆಂಟ್, ಮಾಲ್ ಆರಂಭಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅನುಮತಿ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಎರಡು ವಾರಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕಿತ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಅನುಮತಿ ನೀಡಲು ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ, ಸೋಮವಾರದಿಂದ ವ್ಯಾಪಾರ ವಹಿವಾಟು ಆರಂಭಿಸಲು ಸಿದ್ಧತೆ ನಡೆಸಿದ್ದವರಿಗೆ ನಿರಾಸೆಯಾಗಿದೆ. ಆದರೆ, ಹೋಟೆಲ್, ರೆಸ್ಟೋರೆಂಟ್, ಮಾಲ್ ಮಾಲೀಕರಿಗೆ ಜೂ.8 ರಿಂದ ಪಾಲನೆ ಮಾಡಬೇಕಾದ ಕ್ರಮಗಳ ಬಗ್ಗೆ ಬಿಬಿಎಂಪಿ, ಆರೋಗ್ಯ ಇಲಾಖೆ ಸೇರಿ ಸಂಬಂಧ ಪಟ್ಟ ಇಲಾಖೆಗಳು ಜೂ.1 ರಿಂದಲೇ ನಿಯಮಾವಳಿ ಗಳನ್ನು ಹೊರಡಿಸಲಿದೆ. ಕೆಲವೊಂದು ಸುರಕ್ಷತಾ ಕ್ರಮ ಪಾಲನೆ ಸಂಬಂಧ ದೃಢೀಕರಣ ಪತ್ರ ಸಲ್ಲಿಸಬೇಕಾಗಿದೆ ಎಂದು ಹೇಳಲಾಗಿದೆ.
ದೇವಾಲಯ ಶುದ್ಧೀಕರಣ: ಜೂ.1 ರಿಂದ ದೇವಾಲಯ,ಚರ್ಚ್, ಮಸೀದಿ ತೆರೆಯಲು ಅವಕಾಶ ಕೊಡುವ ಬಗ್ಗೆ ರಾಜ್ಯ ಸರ್ಕಾರ ತಿಳಿಸಿದ್ದರಿಂದ ಶುಕ್ರವಾರದಿಂದಲೇ ದೇವಾಲಯ, ಚರ್ಚ್, ಮಸೀದಿಗಳಲ್ಲಿ ಶುದ್ಧತಾ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಶನಿವಾರ ರಾತ್ರಿ ಕೇಂದ್ರದ ಮಾರ್ಗಸೂಚಿ ಹೊರಬಿದ್ದ ನಂತರ ರಾಜ್ಯದ ನಿರ್ಧಾಕ್ಕಾಗಿ ಕಾಯಲಾಗುತ್ತಿತು. ಕೋಟೆ ವೆಂಕಟರಮಣ ದೇವಾಲಯ ಸೇರಿದಂತೆ ನಗರದ ಬಹುತೇಕ ದೇವಾಲಯಗಳಲ್ಲಿ ಸೋಮವಾರದಿಂದ ಭಕ್ತರ ದರ್ಶನಕ್ಕಾಗಿ ಸಿದಟಛಿತೆ ನಡೆಸ ಲಾಗಿತ್ತು. ಜೂ.8 ಕ್ಕೆ ದೇವಾಲಯ ತೆರೆಯಲು ಅವಕಾಶ ಎಂದಿದ್ದರಿಂದ ಇದೀಗ ದೇವಾಲಯಗಳಲ್ಲಿ ದೇವರ ದರ್ಶನವೂ ಮುಂದಕ್ಕೆ ಹೋಗಿದೆ.
ವರದಿ ಆಧಾರದ ಮೇಲೆ ತೀರ್ಮಾನ: ಬೆಂಗಳೂರಿನಲ್ಲಿ ಲಾಕ್‌ಡೌನ್ ಐದನೇ ಹಂತದ ಜಾರಿ ಸಂಬಂಧ ನಗರ ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಆಯುಕ್ತರಿಗೆ ಪ್ರತ್ಯೇಕ ನಿರ್ದೇಶನಗಳನ್ನು ನೀಡಲಾಗಿದೆ. ರಾತ್ರಿ ಕರ್ಫ್ಯೂ 9 ರಿಂದ ಮುಂಜಾನೆ 5 ಗಂಟೆ ವರೆಗೂ ನಿಗದಿಯಾಗಿರು ವುದರಿಂದ ಯಾವ್ಯಾವ ವ್ಯಾಪಾರ ವಹಿವಾಟಿಗೆ ಅನುಮತಿ ನೀಡ ಬಹುದು ಎಂಬುದು ಇವರ ವರದಿ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಮದ್ಯ ಮಾರಾಟಕ್ಕೂ ಅವಕಾಶ ಸಿಗುತ್ತಾ?: ಜೂ.30 ರವರೆಗಿನ ಐದನೇ ಹಂತದ ಲಾಕ್‌ಡೌನ್ ಸಂದರ್ಭದಲ್ಲಿ ರಾತ್ರಿ ಕರ್ಫ್ಯೂ 9 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ನಿಗದಿಪಡಿಸಿರುವುದರಿಂದ ಮದ್ಯ ಮಾರಾಟಕ್ಕೂ ರಾತ್ರಿ 9 ಗಂಟೆವರೆಗೆ ಅವಕಾಶ ನೀಡುವಂತೆ ಕೋರಲು ಬೆಂಗಳೂರು ಮದ್ಯ ಮಾರಾಟಗಾರರ ಸಂಘ ಮುಂದಾಗಿದೆ. ಪ್ರಸ್ತುತ ರಾತ್ರಿ 7 ಗಂಟೆವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೂ ಜೂ.8 ರಿಂದ ಅವಕಾಶ ಇರುವುದರಿಂದ ಬಾರ್‌ಅಂಡ್ ರೆಸ್ಟೋರೆಂಟ್‌ಗಳಿಗೂ ಅವಕಾಶ ಸಿಗುತ್ತಾ ಕಾದು ನೋಡಬೇಕು.