ವರದಿ: ಭೈರೊಬಾ ಕಾಂಬಳೆ
ಬೆಳಗಾವಿ: ಕೊರೊನಾ ಮೊದಲ ಅಲೆಯಲ್ಲಿ ಹೋಟೆಲ್ ಉದ್ಯಮ ಹಾಗೂ ಮೆಸ್‌ಗಳಿಗೆ ಆದ ಗಾಯ ಮಾಯುವ ಮುನ್ನವೇ ಕೊರೊನಾ ಎರಡನೇ ಅಲೆ ಅಪ್ಪಳಿಸಿ ಅದೇ ಗಾಯದ ಮೇಲೆ ಉಪ್ಪು ಸವರಿ ಮತ್ತಷ್ಟು ಗಾಯ ಮಾಡಿದ್ದು, ಇದರಿಂದ ಹೋಟೆಲ್ ಉದ್ದಿಮೆದಾರರು ತೀವ್ರ ಸಂಕಷ್ಟ ಪಡುತ್ತಿದ್ದಾರೆ.
ಕಳೆದ 2020ರಲ್ಲಿ ಅನೇಕ ತಿಂಗಳುಗಳ ಕಾಲ ಹೋಟೆಲ್, ರೆಸ್ಟಾರೆಂಟ್, ಮೆಸ್, ಕ್ಯಾಂಟೀನ್, ಚಹಾ ಅಂಗಡಿಗಳು ಬಂದ್ ಬಿದ್ದು ಇಡೀ ಹೋಟೆಲ್ ಉದ್ಯಮವೇ ಬೀದಿಗೆ ಬಂದಿತ್ತು. ಈಗ ಕಳೆದ ಒಂದೂವರೆ ತಿಂಗಳಿಂದ ಈ ಉದ್ಯಮ ಭಾರೀ ನಷ್ಟ ಅನುಭವಿಸುತ್ತಿದೆ. ಹೋಟೆಲ್ ಕಾರ್ಮಿಕರು, ಭಟ್ಟರು ಕೆಲಸ ಇಲ್ಲದೇ ನೋವು ಅನುಭವಿಸುತ್ತಿದ್ದಾರೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬೆಳಗಾವಿ ನಗರವೊಂದರಲ್ಲಿಯೇ ಸರಿಸುಮಾರು 600ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಸಾವಿರಾರು ಕಾರ್ಮಿಕರು ಬೀದಿ ಪಾಲಾಗಿದ್ದಾರೆ.
ಉದ್ಯಮ ಬಂದ್ ಆಗಿದ್ದರಿಂದ ಕೆಲವು ಕಾರ್ಮಿಕರು ತಮ್ಮೂರಿಗೆ ಮರಳಿದ್ದಾರೆ. ಇನ್ನೂ ಕೆಲವರು ಕೆಲಸವಿಲ್ಲದೇ ಮಾಲೀಕರ ಆಶ್ರಯದಲ್ಲಿಯೇ ಇದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಈ ಕಾರ್ಮಿಕರಿಗೆ ಮಾಲೀಕರು ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ. ಉದ್ಯಮಕ್ಕೆ ಬಿತ್ತು ಬೀಗ: ಕೆಲ ಹೋಟೆಲ್‌ಗಳು ಕಳೆದ ಕೆಲವು ತಿಂಗಳಿಂದ ಬಾಡಿಗೆ ಕಟ್ಟುವುದರಲ್ಲಿಯೇ ಸುಸ್ತಾಗಿದ್ದಾರೆ. ವಿದ್ಯುತ್ ಹಾಗೂ ನೀರಿನ ಬಿಲ್ ಅಂತೂ ಕಟ್ಟಲೇ ಬೇಕು. ಕಳೆದ ವರ್ಷದಂತೆಯೇ ಈ ಬಾರಿಯೂ ಅದೇ ಸಮಸ್ಯೆ ಅನುಭವಿಸುತ್ತಿದ್ದು, ಕಷ್ಟ ಮಾತ್ರ ದುಪ್ಪಟ್ಟಾಗಿದೆ. ಕೊರೊನಾ ಎರಡನೇ ಅಲೆ ಬರುತ್ತದೆ ಎಂಬ ಮಾಹಿತಿ ಮೊದಲೇ ಎಲ್ಲರಿಗೂ ಇತ್ತು. ಆದರೂ ಅದರಿಂದ ಪಾರಾಗುವ ಬಗೆ ಮಾತ್ರ ಗೊತ್ತಿರಲಿಲ್ಲ. ಹೀಗಾಗಿ ಕೊರೊನಾ ಸೋಂಕು ತಡೆಗೆ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಲಾಕ್‌ಡೌನ್ ಕೊನೆಯ ಅಸ್ತ್ರವಾಯಿತು. ಲಾಕ್‌ಡೌನ್‌ದಿಂದಾಗಿ ಹೋಟೆಲ್ ಉದ್ಯಮಕ್ಕೆ ಬೀಗ ಬಿತ್ತು. ಇದನ್ನು ನಂಬಿ ಬದುಕುವವರ ಜೀವನ ಸದ್ಯ ಹೇಳ ತೀರದಂತಾಗಿದೆ.
ಪಾರ್ಸಲ್ ವ್ಯವಸ್ಥೆ ಇದ್ದರೂ ಕಷ್ಟ: ಹೋಟೆಲ್‌ಗಳಲ್ಲಿ ಪಾರ್ಸಲ್ ನೀಡಲಾಗುತ್ತಿದ್ದರೂ ಇದು ಅಷ್ಟೊಂದು ಪ್ರಮಾಣದಲ್ಲಿ ಕೈ ಹಿಡಿಯುತ್ತಿಲ್ಲ. ಗ್ರಾಹಕರು ಇಲ್ಲದೇ ಹೋಟೆಲ್ ಮಾಲೀಕರು ತೊಂದರೆಗೀಡಾಗಿದ್ದಾರೆ. ಮಾಡಿದ ಉಪಹಾರ, ಅಡುಗೆ ಹಾಗೆಯೇ ಉಳಿಯುತ್ತಿದೆ. ವಾಹನಗಳ ಓಡಾಟವೇ ಇಲ್ಲ ಎಂದಾದ ಮೇಲೆ ಪಾರ್ಸಲ್ ತೆಗೆದುಕೊಳ್ಳುವವರಾದರೂ ಯಾರು. ಹೀಗಾಗಿ ಕಾರ್ಮಿಕರನ್ನು ಇಟ್ಟುಕೊಂಡು ಪಾರ್ಸಲ್ ಮಾಡಿ, ಬಾಡಿಗೆ, ಕಾರ್ಮಿಕರ ಸಂಬಳ ನೀಡಲು ಈ ವ್ಯಾಪಾರ ಸಾಲುತ್ತಿಲ್ಲ. ಲಿಂಗಾಯತ ಖಾನಾವಳಿ, ಮೆಸ್‌ಗಳು ಬಂದ್ ಬಿದ್ದಿವೆ. ಹಾಸ್ಟೆಲ್, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ನಂಬಿಕೊಂಡು ಉದ್ಯೋಗ ನಡೆಸುತ್ತಿದ್ದ ಮೆಸ್ ಗಳ ಸ್ಥಿತಿ ಶೋಚನೀಯವಾಗಿದೆ.
ರೊಟ್ಟಿ ಮಾಡುವ ಮಹಿಳೆಯರು, ಕೆಲಸಗಾರರು ಖಾಲಿ ಕುಳಿತಿದ್ದಾರೆ. ಕೆಲಸ ಕಳೆದುಕೊಂಡವರು ಪರ್ಯಾಯ ಉದ್ಯೋಗ ಇಲ್ಲದೇ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಸರ್ಕಾರ ಗಮನಹರಿಸಲಿ: ಹೋಟೆಲ್ ಉದ್ಯಮ ಎನ್ನುವುದು ಸಾರ್ವಜನಿಕ ಕೆಲಸ ಇದ್ದಂತೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ಏನೂ ಉಪಯೋಗ ಆಗುತ್ತಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರ ಸೌಲಭ್ಯ ನೀಡಬೇಕಿತ್ತು. ಈವರೆಗೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಹೀಗಾದರೆ ಮುಂದೆ ಪರಿಸ್ಥಿತಿ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಹೋಟೆಲ್ ಮಾಲೀಕರದ್ದಾಗಿದೆ. ಹೋಟೆಲ್ ಉದ್ಯಮ ಬಂದ್ ಆಗಿದ್ದರಿಂದ ಕಷ್ಟವಾಗಿದೆ. ಎರಡು ತಿಂಗಳ ಗಟ್ಟಲೇ ಕಾರ್ಮಿಕರಿಗೆ ಊಟ, ಸಂಬಳ ಕೊಡುವುದು ಆಗುತ್ತಿಲ್ಲ.
ಕೊರೊನಾ ಮಹಾಮಾರಿಯ ಹೊಡೆತ ಜನರನ್ನು ನೆಲಕಚ್ಚಿಸಿದೆ. ಇಂಥದರಲ್ಲಿ ಉದ್ಯೋಗ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುವುದು ಆಗದ ಮಾತು. ಮೊದಲನೆ ಅಲೆ ಮುಗಿದ ಬಳಿಕ 2021ರಲ್ಲಿ ಸುಧಾರಿಸಿಕೊಂಡು ಜೀವನ ನಡೆಸಬಹುದು ಎಂಬ ಆಶಾಭಾವನೆ ಇತ್ತು. ಈಗ ಎಲ್ಲವೂ ಕಳೆದುಕೊಂಡು ನಿರಾಶೆ ಭಾವ ಕಾಡುತ್ತಿದೆ ಎನ್ನುತ್ತಾರೆ ಮಾಲೀಕರು. ಉದ್ಯಮಕ್ಕಾಗಿ ಬಂಡವಾಳ ಹೂಡಿಕೆ ಮಾಡಿದ್ದರೂ ಅದನ್ನು ವಾಪಸ್ಸು ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಸಾಲದ ಕಂತು ತುಂಬುವುದು, ಬಡ್ಡಿ ಕಟ್ಟುವುದು ಭಾರೀ ಸಮಸ್ಯೆ ಅನುಭವಿಸುವಂತಾಗಿದೆ. ಸಣ್ಣ ಸಣ್ಣ ಉದ್ಯಮಗಳ ಸಮಸ್ಯೆಯಂತೂ ಹೇಳತೀರದಾಗಿದೆ.