Advertisement
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಯತ್ನಾಳ್, ಹೊಸದಾಗಿ ಸರಕಾರಗಳು ಬಂದಾಗ ವರ್ಗಾವಣೆಗಳು ಸಹಜ. ಆದರೆ, ಹುದ್ದೆಗೆ ಸಮಾನ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.
Related Articles
Advertisement
ಧ್ವನಿಗೂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಾನ್-ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಹಾಕಿದ್ರೆ ಹೇಗೆ? ಅದಕ್ಕೆ ಉತ್ತರ ಕೊಡಿ ಎನ್ನುತ್ತಿದ್ದಂತೆ, ಸುನೀಲ್ ಕುಮಾರ್ ಮಾತನಾಡುತ್ತ, ನಾ ವ್ಯಾಪಾರ ಮಾಡಿಲ್ಲ ಎಂದು ಯತ್ನಾಳ್ ಅವರು ಹೇಳಿದರು. ಅದರರ್ಥ ಅವರು ವ್ಯಾಪಾರ ಮಾಡಿಲ್ಲ ಅಂತಷ್ಟೇ. ನೀವೂ ಮಾಡಿಲ್ಲ ಎಂದು ಹೇಳಲು ಏನು ಕಷ್ಟ ಎಂದರು.
ನನಗೆ ಅಂತಹ ಅಗತ್ಯವಿಲ್ಲನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉತ್ತರಿಸುತ್ತ, ವ್ಯಾಪಾರ-ವಹಿವಾಟೆಲ್ಲ ಯತ್ನಾಳ್ ಮಾಡಿರಬಹುದು. ನನಗೆ ಅಂತಹ ಅಗತ್ಯ ಇಲ್ಲ. ನನಗೆ ಅವರೊಂದು ಪತ್ರ ಬರೆದಿದ್ದಾರೆ. ಸೌಜನ್ಯಕ್ಕಾದರೂ ನನ್ನೊಂದಿಗೆ ಮಾತನಾಡಿಲ್ಲ ಎಂದು ಉಲ್ಲೇಖೀಸಿದ್ದಾರೆ. ಇವರಿಗೆ ವ್ಯಾಪಾರ ಮಾಡಲು ಬಿಡಬೇಕಿತ್ತ? ವ್ಯಾಪಾರ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದರು. ಯತ್ನಾಳ್-ಡಿಕೆಶಿ ಜಟಾಪಟಿ
ಕಾವೇರಿದ ಚರ್ಚೆಯ ನಡುವೆ ಪ್ರವೇಶಿಸಿದ ಡಿಸಿಎಂ ಶಿವಕುಮಾರ್, ಈ ರೀತಿ ಕೆಳದರ್ಜೆಯ ಅಧಿಕಾರಿಗಳನ್ನು ಹಾಕುವ ಕೆಲಸವನ್ನು ನಿಮ್ಮ ಸರಕಾರವೂ ಮಾಡಿದೆ, ನಮ್ಮ ಸರಕಾರವೂ ಮಾಡಿದೆ. ನೀವು ಸಿಎಂ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ ಇಂತಿಷ್ಟು ಹಣ ಎಂದು ಹೇಳಿಲ್ಲವೇ? ಮಾತು, ನಾಲಿಗೆ ಮೇಲೆ ಹಿಡಿತ ಇರಲಿ ನಿಂಗೆ. ನಾನೇನಾದರೂ ಪಕ್ಷದ ಅಧ್ಯಕ್ಷನಾಗಿದ್ದರೆ, ಡಿಸ್ಮಿಸ್ ಮಾಡ್ತಿದ್ದೆ ಎಂದರು. ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಾನ್ಯಾಕೆ ನಿಮ್ಮ ಪಕ್ಷದಲ್ಲಿ ಇರಬೇಕು. ಅದೂ ನಿನ್ನಂಥ ಭ್ರಷ್ಟರ ಹತ್ರ ಕೆಲಸ ಮಾಡುವಂಥದ್ದೇನಿದೆ? ನಾ ಹೇಳಿದ್ದು, ನೀ ಹೇಳಿದ್ದು ಎಲ್ಲವನ್ನೂ ತನಿಖೆಗೆ ಕೊಡ್ರಿ ಅಷ್ಟಿದ್ದರೆ ಎಂದು ತಿರುಗೇಟು ನೀಡಿದರು. ಬಾವಿಗಿಳಿದ ಬಿಜೆಪಿ ಸದಸ್ಯರು
ಡಿಸಿಎಂ ಶಿವಕುಮಾರ್ – ಯತ್ನಾಳ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವೇಳೆಗೆ ವಿಪಕ್ಷ – ಆಡಳಿತ ಪಕ್ಷದ ಮಧ್ಯೆಯೂ ವಾಗ್ಯುದ್ಧ ನಡೆದಿತ್ತು. ಮಾತಿನ ಮಧ್ಯೆ ಹೀಗೇ ಆಡಳಿತ ಮಾಡಿ ಎಂದು ನನಗೇಕೆ ಹೇಳುತ್ತಿರಿ. ಸಚಿವನಾಗಿ ನನಗೆ ಅಷ್ಟೂ ಆಧಿಕಾರ ಇಲ್ಲವೇ ಎಂದ ಬೈರತಿ ಸುರೇಶ್, ವಿಪಕ್ಷಗಳ ಆರೋಪದಿಂದ ವಿಚಲಿತರಾದರಲ್ಲದೆ, ಅಧಿಕಾರಿಯನ್ನು ಬದಲಾಯಿಸುವುದಿಲ್ಲ, ಏನ್ ಮಾಡ್ಕೊತೀರಿ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಆರಂಭಿಸಿದರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ಅದೇನ್ ಮಾಡ್ಕೊತೀರಿ ಮಾಡ್ಕೊಳಿ. ಅಧಿಕಾರಿನ ಬದ್ಲಾಯಿಸಲ್ವಾ? ಒಂದ್ ಕೈ ನೋಡೇ ಬಿಡ್ತೀವಿ ಎಂದು ಗುಡುಗಿದರು. ಧ್ವನಿಗೂಡಿಸಿದ ಆರ್.ಅಶೋಕ್, ಎಷ್ಟು ಲೂಟಿ ಮಾಡ್ತೀರ್ರೀ ಎನ್ನುತ್ತಿದ್ದಂತೆ, ಲೂಟಿ ಮಾಡಿದ್ದು ನೀವು, ಅದ್ಕೆ ವಿಪಕ್ಷ ಸ್ಥಾನದಲ್ಲಿ ಕುಳಿತಿದ್ದೀರಿ ಎಂದು ಸಿಎಂ ತಿರುಗೇಟು ಕೊಟ್ಟರು. ಗದ್ದಲದಿಂದಾಗಿ ಕೆಲ ಕಾಲ ಕಲಾಪ ಮುಂದೂಡಿದ ಸ್ಪೀಕರ್, ರಾಜಿ-ಸಂಧಾನ ನಡೆಸಿದರು. ಪುನಃ ಕಲಾಪ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರ ಧರಣಿ ಮುಂದುವರಿದಿತ್ತು. ಸಚಿವ ಬೈರತಿ ಮಾತನಾಡುತ್ತ, 2016-18 ಹಾಗೂ 2019-21ರ ವರೆಗೆ ಕಿರಿಯ ದರ್ಜೆಯ ಹರ್ಷಶೆಟ್ಟಿ ಅಲ್ಲಿನ ಆಯುಕ್ತರಾಗಿ ಕೆಲಸ ಮಾಡಿದಾಗ ಆಕ್ಷೇಪ ಇರಲಿಲ್ಲ. ಕೆಎಂಎಎಸ್ (ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) ಶ್ರೇಣಿಯ ವಿಜಯಕುಮಾರ್ ಮಕ್ಕಿಲಕಿ ಆಯುಕ್ತರಿದ್ದಾಗ ಸಮಸ್ಯೆ ಇರಲಿಲ್ಲ. ಈಗಲೂ ಕೆಎಂಎಎಸ್ ಶ್ರೇಣಿಯ ಅಧಿಕಾರಿಯನ್ನೇ ನೇಮಿಸಿದ್ದೇವೆ. ನಿಮ್ಮೊಂದಿಗೆ ಚರ್ಚಿಸಬೇಕಿತ್ತು, ಮತೀಯ ಭಾವನೆ ಇಟ್ಟುಕೊಂಡು ವರ್ಗಾಯಿಸಿದ್ದೇನೆ ಎಂದೆಲ್ಲ ಪತ್ರ ಬರೆದಿದ್ದೀರಿ. ಅದೆಲ್ಲ ಸುಳ್ಳು. ಅಧಿಕಾರಿಯ ಮುಖವನ್ನೇ ನಾನು ನೋಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಗದ್ದಲ ಮುಂದುವರಿದಿದ್ದರಿಂದ ಭೋಜನ ವಿರಾಮಕ್ಕೆಂದು ಕಲಾಪವನ್ನು ಸ್ಪೀಕರ್ ಮುಂದೂಡಿದರು.